ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ ಸತತ ಇಳಿಮುಖವಾಗಿದ್ದು ಕಳೆದ ಒಂದು ವಾರದಿಂದ ಇಳಿಕೆ ಕಂಡಿದ್ದು, ಮೂರು ದಿನದಲ್ಲಿ 500 ರೂ. ಕುಸಿತಗೊಂಡಿದೆ.
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ಇಲ್ಲಿನ ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದ್ದು. ಪ್ರತಿ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಸ್ವಲ್ಪ ಇಳುವರಿ ಕಡಿಮೆ. ಏಕೆಂದ್ರೆ ಕಳೆದ ವರ್ಷದ ತೀವ್ರ ಮಳೆ ಕೊರತೆಯಿಂದ ಉಷ್ಣಾಂಶ ಏರಿಕೆಯಾಗಿ ಇಳುವರಿ ಕುಸಿತ ಕಂಡಿದೆ. ಇಂದು ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 50,985 ರೂ. ಇದ್ದು, ಕನಿಷ್ಠ ಬೆಲೆ 40,000 ರೂ., ಸರಾಸರಿ ಬೆಲೆ 49,772 ರೂ.ಇದೆ. ಬೆಟ್ಟೆ ಅಡಿಕೆ ಗರಿಷ್ಠ 27,287 ರೂ. ದಾಖಲಾಗಿದೆ.
ಜೂನ್ ಮೊದಲ ವಾರ 54 ಸಾವಿರ ಅಂಚಿನಲ್ಲಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತ ಬಂದಿದ್ದು, ಸೆಪ್ಟೆಂಬರ್ ನಲ್ಲಿ ಹೊಸ ಅಡಿಕೆ 46 ಸಾವಿರ ಗಡಿ ತಲುಪಿತ್ತು. ಅಕ್ಟೋಬರ್ ಪ್ರಾರಂಭದಲ್ಲಿ ಚೇತರಿಕೆ ಕಂಡು 50 ಸಾವಿರ ಗಡಿ ಸಮೀಪ ಬಂದಿತ್ತು. ನವೆಂಬರ್ ಮೊದಲ ವಾರ ಕುಸಿದು ಕೊನೆಯಲ್ಲಿ 50 ಸಾವಿರ ಗಡಿ ತಲುಪಿತ್ತು. ಈಗ ಡಿಸೆಂಬರ್ ನಲ್ಲಿ 51 ಸಾವಿರ ಗಡಿದಾಟಿ, ಕಳೆದ ಒಂದು ವಾರದಿಂದ ಕುಸಿತ ಕಾಣುತ್ತಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ ನಂತರ ಕುಸಿದಿತ್ತು.