SUDDIKSHANA KANNADA NEWS/ DAVANAGERE/ DATE:01-10-2024
ದಾವಣಗೆರೆ: ಅಡಿಕೆ ವ್ಯಾಪಾರಿಯ ಕಾರು ಅಡ್ಡಗಟ್ಟಿ 17.24 ಲಕ್ಷ ರೂಪಾಯಿ ದರೋಡೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿಯ ಜೋಳದಾಳ್ ಗ್ರಾಮದ ಸಮೀಪ ನಡೆದಿದೆ.
ವ್ಯಾಪಾರಿಯೊಬ್ಬರಿಂದ ಬರೋಬ್ಬರಿ 17.24 ಲಕ್ಷ ರೂಪಾಯಿ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಚನ್ನಗಿರಿ ತಾಲೂಕಿನ ಬುಳುಸಾಗರದ ಅಡಿಕೆ ವ್ಯಾಪಾರಿಯಾದ ಅಶ್ರಫ್ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಅಡಿಕೆ ಮಾರಾಟ ಮಾಡಿದ್ದರು. ಈ ಹಣದೊಂದಿಗೆ ಭದ್ರಾವತಿಯಿಂದ ಬುಳುಸಾಗರ ಗ್ರಾಮಕ್ಕೆ ಬರುತ್ತಿದ್ದರು. ಈ ವೇಳೆ ಜೋಳದಾಳು ಗ್ರಾಮದ ಹೊರವಲಯದಲ್ಲಿ ಕಾರು ಅಡ್ಡಗಟ್ಟಿ ಮೂವರು ಅವರನ್ನು ಬೆದರಿಸಿ 17.24 ಲಕ್ಷ ರೂಪಾಯಿ ಕಿತ್ತು ಪರಾರಿಯಾಗಿದ್ದಾರೆ.
ಸ್ಛಳಕ್ಕೆ ಡಿವೈಎಸ್ಪಿ ಸ್ಯಾಂ ವರ್ಗೀಸ್ ಹಾಗೂ ಪೊಲೀಸ್ ಇನ್ ಸ್ಪೆಕ್ಟರ್ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಾತ್ರವಲ್ಲ, ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ದರೋಡೆ ಆಗುವ ಸಮಯದ ಆಸುಪಾಸು ಯಾವೆಲ್ಲಾ ವಾಹನಗಳು ಸಂಚರಿಸಿವೆ, ಬೈಕ್ ನಲ್ಲಿ ಓಡಾಡಿದ್ದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.