SUDDIKSHANA KANNADA NEWS/ DAVANAGERE/ DATE:15-08-2023
ದಾವಣಗೆರೆ (Davanagere) ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಆಗಸ್ಟ್ 10 ರಿಂದ ನಾಲೆಗಳಲ್ಲಿ ನೀರು ಹರಿಸುತ್ತಿರುವುದರಿಂದ ಭತ್ತದ ನಾಟಿ ಕಾರ್ಯ ಭರದಿಂದ ಸಾಗಿದೆಯಲ್ಲದೆ, ಬಹುತೇಕರು ಮೊದಲನೇ ಗೊಬ್ಬರ ಹಾಕಿದ್ದಾರೆ. ಆದರೆ ಭದ್ರಾವತಿ ಭಾಗದ ಕೆಲವರು ಈಗ ನೀರು ಹರಿಸುವುದನ್ನು ನಿಲ್ಲಿಸಿ, ಬೇಸಿಗೆ ಹಂಗಾಮಿಗೆ ನೀರು ಮೀಸಲಿಡಬೇಕು ಎಂಬುದು ರೈತರ ಆಗ್ರಹ. ಈ ಬೆಳವಣಿಗೆ ಭತ್ತದ ನಾಟಿ ಮಾಡಿರುವ ರೈತರಿಗೆ ಮಾರಕವಾಗಲಿದೆ ಎಂದು ಬಿಜೆಪಿ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ಎಸ್ಪಿ ಡಾ. ಕೆ. ಅರುಣ್ ವರ್ಗಾವಣೆಗೆ ಕಾಂಗ್ರೆಸ್ ಶಾಸಕರು ಒತ್ತಡ ಹೇರಿಲ್ಲ: ಎಸ್. ಎಸ್. ಮಲ್ಲಿಕಾರ್ಜುನ್ ಸ್ಪಷ್ಟನೆ
ವಾಡಿಕೆಯಂತೆ ಭದ್ರಾ ಜಲಾಶಯದ ನೀರಿನ ಮಟ್ಟ 163 ಅಡಿ ತಲುಪಿದಾಗ ನೀರು ಹರಿಸುವುದು ಸಾಮಾನ್ಯ. ಆಗಸ್ಟ್ 10 ರಿಂದ ನೀರು ಹರಿಸಲು ಪ್ರಾರಂಭಿಸಿದಾಗ ಇದ್ದ ನೀರಿನ ಮಟ್ಟ 166’9″ ಕಡಿಮೆಯಾಗಿಲ್ಲ. ಆದ್ರೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರನ್ನು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯುವ ಪ್ರದೇಶ ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚು ಇದೆ. ಆದ್ದರಿಂದ ಎಸ್ ಎಸ್ ಮಲ್ಲಿಕಾರ್ಜುನರವರು ಭದ್ರಾವತಿ ರೈತರ ಒತ್ತಡಕ್ಕೆ ಮಣಿಯದೆ, ನಮ್ಮ ಜಿಲ್ಲೆಯ ರೈತರ ಹಿತ ಕಾಯಬೇಕು ಎಂದವರು ಆಗ್ರಹಿಸಿದ್ದಾರೆ.