SUDDIKSHANA KANNADA NEWS/ DAVANAGERE/ DATE:28-01-2024
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಇಂಥವರಿಗೆ ಟಿಕೆಟ್ ಘೋಷಣೆ ಮಾಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಸರ್ವೇ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ಟಿಕೆಟ್ ನೀಡುವಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಪುನರುಚ್ಚರಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿನ ವಾಸ್ತವಾಂಶಗಳ ಕುರಿತಂತೆ ಸಮಗ್ರ ಮಾಹಿತಿ ನೀಡಿದ್ದೇವೆ. ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡುತ್ತೇವೆ ಎಂದು ಹೇಳಿದರು.
ಪಕ್ಷದ ಸಂಘಟನೆ ದೃಷ್ಟಿಯಿಂದ ಜಿಲ್ಲೆಯ ಮಾಜಿ ಸಚಿವರು, ಶಾಸಕರು, ಮುಖಂಡರೆಲ್ಲರೂ ಸೇರಿ ಒಟ್ಟಾಗಿ ಹೋಗಿದ್ದೆವು. ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ದಾವಣಗೆರೆ ಉತ್ತರ ಪರಾಜಿತ ಅಭ್ಯರ್ಥಿ ಲೋಕಿಕೆರೆ ನಾಗರಾಜ್, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಅಜಯ್ ಕುಮಾರ್, ಗುರುಸಿದ್ದನಗೌಡ್ರು, ಮಾಜಿ ಶಾಸಕ ಬಸವರಾಜ್ ನಾಯ್ಕ್ ಸೇರಿದಂತೆ ಮುಖಂಡರು ಬೆಂಗಳೂರಿಗೆ ಹೋಗಿದ್ದೆವು ಎಂದು ತಿಳಿಸಿದರು.
ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ ಅವರಿಗೆ ದಾವಣಗೆರೆ ಜಿಲ್ಲೆಯ ವಾಸ್ತವಾಂಶ ಅರಿತು ಟಿಕೆಟ್ ನೀಡುವಂತೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಸಮೀಕ್ಷೆ ಮಾಡಿಸಿ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಿದ್ದೇವೆ. ಇದೇ ಆಧಾರದ ಮೇಲೆ ಟಿಕೆಟ್ ಘೋಷಣೆ ಮಾಡಿ ಎಂದಿದ್ದೇವೆ. ನಾವು ಯಾರಿಗೂ ಟಿಕೆಟ್ ನೀಡಬೇಡಿ ಎಂದು ಎಲ್ಲಿಯೂ ಹೇಳಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಕುರಿತಂತೆ ಈಗ ಮಾತನಾಡಿದರೆ ಪ್ರಯೋಜನ ಇಲ್ಲ. ವಾಪಸ್ ಬರಲ್ಲ. ಸಮಯ ಬಂದೇ ಬರುತ್ತೆ. ಕಾದು ನೋಡೋಣ. ಆಗ ಮಾತನಾಡುತ್ತೇವೆ ಎಂದು ಹೇಳಿದರು.
ದೇಶದಲ್ಲಿ ಗೆಲ್ಲುವಂಥ ಅಭ್ಯರ್ಥಿಗಳಿಗೆ ಮಣೆ ಹಾಕಲಾಗುತ್ತದೆ. ಸರ್ವೇ ಮಾಡಿಸಿ ಜನಾಭಿಪ್ರಾಯ ಯಾರಿಗೆ ಬರುತ್ತದೆಯೋ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದರಿದ್ದೇವೆ. ಜಿಲ್ಲೆಯ ವಾಸ್ತವಾಂಶ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಹೈಕಮಾಂಡ್ ತೀರ್ಮಾನ ಏನು ಮಾಡುತ್ತೆ ಎಂಬುದು ಗೊತ್ತಿಲ್ಲ ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ವೇಳೆ ಬಿಜೆಪಿ ಮುಖಂಡರೂ, ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಆರೈಕೆ ಆಸ್ಪತ್ರೆಯ ಮುಖ್ಯಸ್ಥರಾದ ರವಿಕುಮಾರ್, ಮಾಜಿ ಶಾಸಕ ಗುರುಸಿದ್ದನಗೌಡ್ರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮತ್ತಿತರರು ಹಾಜರಿದ್ದರು.