SUDDIKSHANA KANNADA NEWS/ DAVANAGERE/ DATE:24-04-2023
ದಾವಣಗೆರೆ (DAVANAGERE): ಬಿಜೆಪಿ (BJP)ಜಿಲ್ಲಾ ವರಿಷ್ಠರ ವಿರುದ್ಧ ಸೆಡ್ಡು ಹೊಡೆದು ಮಾಯಕೊಂಡ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಆರ್. ಎಲ್. ಶಿವಪ್ರಕಾಶ್ ಕಣದಿಂದ ಹಿಂದೆ ಸರಿದಿದ್ದಾರೆ. ನಾಮಪತ್ರ ವಾಪಸ್ ಗೆ ಕೊನೆಯ ದಿನವಾಗಿದ್ದ ಇಂದು ಶಿವಪ್ರಕಾಶ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಈ ಮೂಲಕ ಪಕ್ಷದ ನಾಯಕರಿಗೆ ಮಣಿದಿದ್ದಾರೆ.
ಮಾಯಕೊಂಡ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ (TICKET) ಘೋಷಿಸಲಾಗಿತ್ತು. ಬಳಿಕ ಬಂಡಾಯ ಸಾರಿದ್ದ 11 ಕ್ಕೂ ಹೆಚ್ಚು ಆಕಾಂಕ್ಷಿಗಳು ರೊಚ್ಚಿಗೆದ್ದಿದ್ದರು. ಯಾವುದೇ ಕಾರಣಕ್ಕೂ ಬಸವರಾಜ್ ನಾಯ್ಕ್ ಪರ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದ್ದರು. ಆದ್ರೆ, ಈಗ ಆಗಿರುವ ಬೆಳವಣಿಗೆಯಿಂದ ಇದು ಬಂಡಾಯ ಅಲ್ಲ ಎಂಬುದು ಸ್ಪಷ್ಟವಾಗಿದೆ.
11 ಆಕಾಂಕ್ಷಿಗಳ ಪೈಕಿ ಯಾರಿಗಾದರೂ ಒಬ್ಬರಿಗೆ ನೀಡಿ ಎಂದಿದ್ದ ಮಾಯಕೊಂಡ (MAYAKONDA) ಬಿಜೆಪಿ (BJP) ಮುಖಂಡರು ಸಿಟ್ಟು ಹೊರಹಾಕಿದ್ದರು. ಬಹಿರಂಗವಾಗಿ ನಾಯಕರ ವಿರುದ್ಧ ತೊಡೆ ತಟ್ಟಿದ್ದರು. ಬಂಡಾಯ ಅಭ್ಯರ್ಥಿಯನ್ನಾಗಿಸಿ ಗೆಲ್ಲಿಸಿ ಮತ್ತೆ ಬಿಜೆಪಿ (BJP)ಗೆ ಕರೆ ತರುವುದಾಗಿ ಹೇಳಿಕೊಂಡಿದ್ದರು. ಪಕ್ಷಕ್ಕೆ ದುಡಿದವರನ್ನು ಬಿಟ್ಟು, ಪಕ್ಷ ಬಿಟ್ಟು ಹೋದವರಿಗೆ ಟಿಕೆಟ್ ನೀಡಲಾಗಿದೆ. ಹಾಗಾಗಿ, ನಿಷ್ಠಾವಂತರನ್ನು ಕಡೆಗಣಿಸಲಾಗಿದೆ. ಯಾರದ್ದೋ ಒತ್ತಡಕ್ಕೆ ಮಣಿದು ಟಿಕೆಟ್ ಕೊಡಲಾಗಿತ್ತು ಎಂಬುದೂ ಸೇರಿದಂತೆ ಹಲವು ರೀತಿಯ ಆರೋಪ ಮಾಡಿದ್ದರು.
ನಾಮಪತ್ರ ವಾಪಸ್ ಪಡೆದ ಬಳಿಕ ಸ್ಪಷ್ಟನೆ ನೀಡಿರುವ ಶಿವಪ್ರಕಾಶ್, ನಾನು ಯಾವುದೇ ಆಮೀಷಕ್ಕೆ ಒಳಗಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಭಾರತೀಯ ಜನತಾ ಪಾರ್ಟಿಯ ವರಿಷ್ಠರು ಹಾಗೂ ಜಿಲ್ಲೆಯ ಹಿರಿಯ ನಾಯಕರಿಗೆ ಬೆಲೆ ಕೊಟ್ಟು ಈ ದಿನ ಮಾಯಕೊಂಡ ಕ್ಷೇತ್ರಕ್ಕೆ ಬಂಡಾಯ ಅಭ್ಯರ್ಥಿಯಾಗಿ ಸಲ್ಲಿಸಿದ್ದ ನಾಮಪತ್ರವನ್ನು ಎಂಟು ಆಕಾಂಕ್ಷಿಗಳ ಸಮ್ಮತಿ ಪಡೆದು ವಾಪಸ್ ಪಡೆದಿದ್ದೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ಎಂ. ರಾಜಾಸಾಬ್, ಮೊಹಮದ್ ರಿಯಾಜ್ ಸಾಬ್, ಎಂ. ಬಿ. ಪ್ರಕಾಶ್, ಸುಭಾನ್ ಖಾನ್, ಬಿ. ನಾಗೇಶ್ವರರಾವ್ ಉಮೇದುವಾರಿಕೆ ವಾಪಸ್ ಪಡೆದಿದ್ದಾರೆ. ಚನ್ನಗಿರಿಯಲ್ಲಿ ಶಿವಲಿಂಗಪ್ಪ ಮತ್ತು ಬಿ. ರಂಗನಾಥ್ ಅವರು ನಾಮಪತ್ರ ವಾಪಸ್ ಪಡೆದಿದ್ದಾರೆ.