ಬೆಂಗಳೂರು: ರಾಜ್ಯದಲ್ಲಿ ಹೊಸ ಗೋಶಾಲೆ ನಿರ್ಮಾಣ ಮಾಡುವ ಬದಲು ಜಾನುವಾರುಗಳನ್ನು ಈಗಾಗಲೇ ನಿರ್ವಹಣೆ ಮಾಡುತ್ತಿರುವ ಹಳೇ ಗೋಶಾಲೆಗಳನ್ನೇ ಬಲವರ್ಧನೆಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.ಈ ಹಿನ್ನೆಲೆಯಲ್ಲಿ ಇಲಾಖೆಗೆ ನಿಗದಿ ಮಾಡಿದ್ದ ಅನುದಾನದ ಪೈಕಿ ಉಳಿಕೆ 10.50 ಕೋಟಿ ರೂ.ಡಿಐನ್ನು 14 ಜಿಲ್ಲೆಗಳಲ್ಲಿ ಈಗಾಗಲೇ ನಿರ್ವಹಣೆ ಮಾಡುತ್ತಿರುವ ಹಳೇ ಗೋಶಾಲೆಗಳಿಗೆ ಬಳಕೆ ಮಾಡುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಬಿಜೆಪಿ ಸರಕಾರವು 2021-22ನೇ ಸಾಲಿನ ಆಯವ್ಯಯದಲ್ಲಿ ಪ್ರತೀ ಜಿಲ್ಲೆಗೆ ಒಂದರಂತೆ 30 ಸರಕಾರಿ ಗೋಶಾಲೆಗಳ ನಿರ್ಮಿಸುವುದಾಗಿ ಘೋಷಣೆ ಮಾಡಿತ್ತು. ಒಟ್ಟು 16 ಜಿಲ್ಲೆಗಳಲ್ಲಿ ಸರಕಾರಿ ಗೋಶಾಲೆ ನಿರ್ವಹಣೆ ಮಾಡಲಾಗುತ್ತಿದೆ. 2022-23ರ ಬಜೆಟ್ ಘೋಷಣೆ ಪ್ರಕಾರ ಮತ್ತೆ 35 ಗೋಶಾಲೆ ಭರವಸೆ ನೀಡಲಾಗಿದ್ದು, ಅವುಗಳ ಪೈಕಿ 14ರ ಕಾಮಗಾರಿ ಪೂರ್ಣಗೊಂಡಿದೆ.
ಆದರೆ ಈ ಗೋಶಾಲೆ ಗಳಿಗೆ ಯಾವುದೇ ಜಾನುವಾರುಗಳು ಸೇರ್ಪಡೆ ಯಾಗಿಲ್ಲ. ಹೀಗಾಗಿ ಇನ್ನುಳಿದವುಗಳನ್ನು ನಿರ್ಮಿಸುವ ಬದಲು ಈಗಾಗಲೇ ಇರುವ ದಕ್ಷಿಣ ಕನ್ನಡ (2), ಉಡುಪಿ (2), ಕಾರವಾರ, ಹಾಸನ, ಬೆಂಗಳೂರು ನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ಧಾರವಾಡ, ಮೈಸೂರು, ತುಮಕೂರು, ಬೀದರ್, ಬೆಳಗಾವಿಯಲ್ಲಿರುವ ತಲಾ 1ಗೋಶಾಲೆಗೆ 2.50 ಕೋಟಿ ರೂ.ನಂತೆ ಅನುದಾನ ಹಂಚಿಕೆ ಮಾಡಲು ನಿರ್ಣಯ ತೆಗೆದುಕೊಳ್ಳಲಾಗಿದೆ.