ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

EXCLUSIVE: ಜಿ. ಬಿ. ವಿನಯ್ ಕುಮಾರ್ ಜೊತೆಗಿನ ಸಂಧಾನ ವಿಫಲ: ಕಣದಿಂದ ಹಿಂದೆ ಸರಿಯಿರಿ ಎಂಬ ಕಾಂಗ್ರೆಸ್ ಮುಖಂಡರ ಆಹ್ವಾನ ತಿರಸ್ಕಾರ

On: April 14, 2024 11:13 AM
Follow Us:
---Advertisement---

SUDDIKSHANA KANNADA NEWS/DAVANAGERE/DATE:14-04-2024

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಜಿ. ಬಿ. ವಿನಯ್ ಕುಮಾರ್ ಅವರನ್ನು ಮಾಜಿ ಸಚಿವ ಹೆಚ್. ಎಂ. ರೇವಣ್ಣ ನೇತೃತ್ವದ ಕಾಂಗ್ರೆಸ್ ನಿಯೋಗವು ಭೇಟಿ ಮಾಡಿತು. ಕಣದಿಂದ ಹಿಂದೆ ಸರಿಯುವಂತೆ ಮನವಿ ಮಾಡಿತಾದರೂ ವಿನಯ್ ಕುಮಾರ್ ಅವರು ನಯವಾಗಿ ತಿರಸ್ಕರಿಸಿದರು.

ಇಂದು ಬೆಳಿಗ್ಗೆ ಹೆಚ್. ಎಂ. ರೇವಣ್ಣ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಸುಭಾಶ್ ಚಂದ್ರ, ಕಾಂಗ್ರೆಸ್ ಮುಖಂಡರಾದ ಬಿ. ವೀರಣ್ಣ, ಹೊನ್ನಾಳಿ ಸ್ವಾಮಿ, ಹೊನ್ನಾಳಿ ಯೋಗೇಶ್ ಸೇರಿದಂತೆ ಹಲವರು ವಿನಯ್ ಕುಮಾರ್ ಅವರ ಜೊತೆ ಚರ್ಚೆ ನಡೆಸಿದರು. ನಾಮಪತ್ರ ವಾಪಸ್ ಪಡೆಯುವಂತೆ ಮನವಿ ಮಾಡಿದರೂ ವಿನಯ್ ಕುಮಾರ್ ಅವರು ನೀವು ನನ್ನನ್ನು ಮಾತನಾಡಿಸಲು ಬಂದಿದ್ದು ಖುಷಿ ಸಂಗತಿ ಎಂದರು.

ಜಿಲ್ಲೆಯಾದ್ಯಂತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ಜನರು ಒತ್ತಾಯ ಮಾಡುತ್ತಿದ್ದಾರೆ. ಜನರಿಗೆ ಕೊಟ್ಟಿರುವ ಮಾತು ತಪ್ಪಲು ಇಷ್ಟವಿಲ್ಲ. ನಿಮ್ಮ ಸಲಹೆ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಹೆಚ್. ಎಂ. ರೇವಣ್ಣರು ವಿನಯ್ ಕುಮಾರ್ ಮನೆಗೆ ಆಗಮಿಸುತ್ತಿದ್ದಂತೆ ನಗುಮೊಗದಿಂದಲೇ ಸ್ವಾಗತಿಸಿದ ವಿನಯ್ ಕುಮಾರ್ ಜೊತೆ ಕಾಂಗ್ರೆಸ್ ನಿಯೋಗವು ಮಾತುಕತೆ ನಡೆಸಿತು. ಈ ವೇಳೆ ಮಾತನಾಡಿದ ಹೆಚ್. ಎಂ. ರೇವಣ್ಣ ಅವರು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಒಲವಿದೆ. ನೀವು ಸ್ಪರ್ಧೆ ಮಾಡಿದರೆ ತೊಂದರೆ ಆಗುತ್ತದೆ. ಯೋಚನೆ ಮಾಡಿ ಎಂದು ಸಲಹೆ ನೀಡಿದರು. ಕಾಂಗ್ರೆಸ್ ಮುಖಂಡರು ಸಹ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಿಸುವಂತೆ ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್ ಅವರು ಈಗಾಗಲೇ ನಾನು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಏಪ್ರಿಲ್ 18ಕ್ಕೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದೇನೆ. ದಾವಣಗೆರೆ ಜಿಲ್ಲೆಯ ಎಲ್ಲಾ ಹಳ್ಳಿಗಳು, ದಾವಣಗೆರೆ ನಗರದಲ್ಲಿಯೂ ನಾನು ಸ್ಪರ್ಧೆ ಮಾಡಬೇಕೆಂಬ ಬಯಕೆ, ಆಸೆ ಜನರಲ್ಲಿದೆ. ಜನರ ಒತ್ತಡ ಇನ್ನೂ ಕಡಿಮೆ ಆಗಿಲ್ಲ ಎಂದು ತಿಳಿಸಿದರು.

ಒಮ್ಮೆ ಮಾಡಿರುವ ನಿರ್ಧಾರ ವಾಪಸ್ ಪಡೆಯಲು ಸಾಧ್ಯವೇ ಇಲ್ಲ. ನಾನು ಸ್ಪರ್ಧೆ ಮಾಡುತ್ತಿದ್ದು, ಲೋಕಸಭಾ ಕ್ಷೇತ್ರದಲ್ಲಿ ನಾನು ಗೆಲ್ಲುವ ಎಲ್ಲಾ ಅವಕಾಶಗಳಿವೆ. ಕಳೆದ 30 ವರ್ಷಗಳಿಂದ ಎರಡು ಕುಟುಂಬಗಳದ್ದೇ ಪಾಳೇಗಾರಿಕೆ ಸಂಸ್ಕೃತಿ
ಇದೆ. ಇದರ ವಿರುದ್ಧ ಜನರು ಇದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಎಲ್ಲಾ ವರ್ಗದವರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.

ಸಿಎಂ ಸಿದ್ದರಾಮಯ್ಯ ಅವರೂ ಸಹ ಕಣದಿಂದ ಹಿಂದೆ ಸರಿಯುವಂತೆ ವಿನಯ್ ಕುಮಾರ್ ಅವರಿಗೆ ಹೇಳುವಂತೆ ಹೇಳಿದ್ದಾರೆ. ಹಾಗಾಗಿ, ಬಂದಿದ್ದೇನೆ. ಮುಂದೆ ಉತ್ತಮ ಅವಕಾಶಗಳಿವೆ. ಹಾಗಾಗಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬೇಡ ಎಂಬುದು ನನ್ನ ಅಭಿಪ್ರಾಯ ಎಂದು ಹೆಚ್. ಎಂ. ರೇವಣ್ಣ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್ ಕುಮಾರ್, ದಾವಣಗೆರೆಯಲ್ಲಿ ಆಗುತ್ತಿರುವ ಬೆಳವಣಿಗೆ ಎಲ್ಲವೂ ಗೊತ್ತಿದೆ. ಜನರ ಮನದಲ್ಲಿ ವಿನಯ್ ಕುಮಾರ್ ಹೆಸರು ಅಚ್ಚಳಿಯದೇ ಉಳಿದಿದೆ. ಜನರ ಅಪೇಕ್ಷೆಯಂತೆ ಸ್ಪರ್ಧೆ ಮಾಡುತ್ತಿದ್ದೇನೆ. ಕಣದಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಹೇಳಿದರು.

ಸ್ಪರ್ಧೆ ಘೋಷಣೆ ಬಳಿಕ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ನಡುಕ ಶುರುವಾಗಿದೆ. ಎರಡೂ ಕುಟುಂಬಗಳಿಗೆ ಟಿಕೆಟ್ ನೀಡಲಾಗಿದೆ. ಸ್ವಾಭಿಮಾನದ ಸ್ಪರ್ಧೆ ಇದು. ಜನರು ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ. ಅಹಿಂದ ವರ್ಗ ಮಾತ್ರವಲ್ಲ, ಲಿಂಗಾಯತ ಸಮುದಾಯವೂ ಸೇರಿದಂತೆ ಎಲ್ಲಾ ಜಾತಿ, ಧರ್ಮದವರು ನನಗೆ ಸಹಕಾರ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಜನರು ಗೆಲ್ಲಿಸಿಕೊಂಡು ಬರುತ್ತಾರೆ. ಅಚ್ಚರಿ ಫಲಿತಾಂಶ ಬಂದೇ ಬರುತ್ತದೆ ಎಂದು ಹೆಚ್. ಎಂ. ರೇವಣ್ಣ ನೇತೃತ್ವದ ನಿಯೋಗಕ್ಕೆ ವಿನಯ್ ಕುಮಾರ್ ಅವರು ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು. ಸಂಧಾನಕ್ಕೆ ಬಂದ ರೇವಣ್ಣ ನೇತೃತ್ವದ ನಿಯೋಗವು ಬರಿಗೈಯಲ್ಲಿ ವಾಪಸ್ ಆಯಿತು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment