ಸಹರಾನ್ ಪುರ: ಉತ್ತರ ಪ್ರದೇಶದ ಸಹರಾನ್ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ವಿವಾದಿತ ಅಕ್ರಮ ಮಸೀದಿಯನ್ನು ತೆರವುಗೊಳಿಸಿದ ಬಳಿಕ, ಅಲ್ಲಿ ಭಾರೀ ಕುತೂಹಲಕಾರಿ ಬೆಳವಣಿಗೆಯೊಂದು ನಡೆದಿದೆ. ಮಸೀದಿಯ ಅವಶೇಷಗಳನ್ನು ತೆರವುಗೊಳಿಸುವ ವೇಳೆ ಅದರ ತಳಭಾಗದಲ್ಲಿ ಸುಮಾರು 20 ಅಡಿ ಆಳ ಹಾಗೂ 1.5 ಮೀಟರ್ ಅಗಲದ ಇಟ್ಟಿಗೆಯ ಪುರಾತನ ಬಾವಿಯೊಂದು ಪತ್ತೆಯಾಗಿದೆ.
ಮಸೀದಿಯ ಒಳಗಡೆ ಕಾಂಕ್ರೀಟ್ ಸ್ಲ್ಯಾಬ್ನಿಂದ ಮುಚ್ಚಿ ರಹಸ್ಯವಾಗಿಡಲಾಗಿದ್ದ ಈ ಬಾವಿ ಬೆಳಕಿಗೆ ಬಂದಿರುವುದು ಸ್ಥಳೀಯರಲ್ಲಿ ಮತ್ತು ಇತಿಹಾಸಕಾರರಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಮಾತನಾಡಿದ ಸ್ಥಳೀಯರು, ಹಿಂದಿನ ಕಾಲದಲ್ಲಿ ಮಸೀದಿಗಳು ಮತ್ತು ಕೃಷಿ ಜಮೀನುಗಳಲ್ಲಿ ನೀರಿನ ಅನುಕೂಲಕ್ಕಾಗಿ ಬಾವಿಗಳು ಸಾಮಾನ್ಯವಾಗಿದ್ದವು ಹಾಗೂ ನಮಾಜ್ಗೂ ಮುನ್ನ ವು ಮಾಡಲು (ಮೈತೊಳೆಯಲು) ಇದನ್ನು ಬಳಸುತ್ತಿದ್ದರು ಎಂದು ತಿಳಿಸಿದ್ದಾರೆ.
ಈ ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್, ಮಸೀದಿ ಧ್ವಂಸವನ್ನು ತೀವ್ರವಾಗಿ ಖಂಡಿಸಿದ್ದು, ಇದು ಕಾನೂನಿನ ದುರ್ಬಳಕೆ ಮತ್ತು ‘ಕಾನೂನುರಹಿತ ವ್ಯವಸ್ಥೆ’ಯ ಸೃಷ್ಟಿಯಾಗಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸರ್ಕಾರದ ಈ ಕ್ರಮವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್ ವರೆಗೆ ಕಾನೂನು ಹೋರಾಟ ನಡೆಸಲು ಸಿದ್ಧತೆ ನಡೆಸಿದೆ ಎಂದು ಎಚ್ಚರಿಸಿದ್ದಾರೆ.
ಸದ್ಯ ಭದ್ರತೆಯ ದೃಷ್ಟಿಯಿಂದ ಈ ಬಾವಿಯನ್ನು ಕಬ್ಬಿಣದ ಶೀಟ್ಗಳಿಂದ ಮುಚ್ಚಲಾಗಿದ್ದು, ಇದರ ಐತಿಹಾಸಿಕ ಹಿನ್ನೆಲೆಯನ್ನು ತಿಳಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಥವಾ ತಾಂತ್ರಿಕ ತಂಡದ ತನಿಖೆಗೆ ಒಳಪಡಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ.
ಈ ಬಾವಿಯ ಪತ್ತೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಎಎಸ್ಐ (ASI) ತನಿಖೆಯ ಬಳಿಕವಷ್ಟೇ ಇದರ ನಿಜವಾದ ಇತಿಹಾಸ ಹೊರಬರಬೇಕಿದೆ.





Leave a comment