SUDDIKSHANA KANNADA NEWS/ DAVANAGERE/ DATE:29-11-2023
ದಾವಣಗೆರೆ: ದಾವಣಗೆರೆಯಲ್ಲಿ ಇದೇ ಮೊದಲ ಬಾರಿಗೆ ಡಿ. 1ರಿಂದ 3ರವರೆಗೆ 34 ನೇಯ ರಾಷ್ಟ್ರೀಯ ಮಟ್ಟದ ಬಾಯಿ ರೋಗ ವೈದ್ಯಕೀಯ ಹಾಗೂ ಕ್ಷಕಿರಣ ವಿಭಾಗದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ ಎಂದು ಕಾರ್ಯಕ್ರಮ ಕಾರ್ಯದರ್ಶಿ ಡಾ. ಐ. ಎಂ. ಆಲಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ ಹಾಗೂ ಬಾಪೂಜಿ ದಂತ ವೈದ್ಯಕೀಯ ಕಾಲೇಜಿನ ಸಹಭಾಗಿತ್ವದಲ್ಲಿ ಈ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದ್ದು, ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ
ಮಟ್ಟದ ಖ್ಯಾತ ದಂತ ವೈದ್ಯರು ಭಾಗವಹಿಸಿ ತಮ್ಮ ಪ್ರಬಂಧ ಹಾಗೂ ವೈಜ್ಞಾನಿಕ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ಹೇಳಿದರು.
ವಿಚಾರ ಸಂಕಿರಣದಲ್ಲಿ ಸುಮಾರು 800ಕ್ಕೂ ಹೆಚ್ಚು ದಂತ ವೈದ್ಯರು ಇದರಲ್ಲಿ ಭಾಗವಹಿಸುತ್ತಿದ್ದು, ಸುಮಾರು 550 ಕ್ಕೂ ಹೆಚ್ಚು ದಂತ ವೈದ್ಯರು ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಇದೊಂದು ಐತಿಹಾಸಿಕ ಹಾಗೂ ಅಭೂತಪೂರ್ವ ಕ್ಷಣವಾಗಿದೆ ಎಂದು ಹೇಳಿದರು.
ಡಿ. 2ರಂದು ಬಾಪೂಜಿ ಸಭಾಂಗಣದಲ್ಲಿ ನಡೆಯುವ ಉದ್ಘಾಟನಾ ಕಾರ್ಯಕ್ರಮಕ್ಕೆ ಬೆಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಕುಲಪತಿ ಸಿದ್ದಪ್ಪ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆ ಶಾಸಕ ಡಾ . ಶಾಮನೂರು ಶಿವಶಂಕರಪ್ಪ ಹಾಗೂ ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಉಪಸ್ಥಿತಿಯಲ್ಲಿ ನೆರವೇರಲಿದೆ ಎಂದು ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ಗುಟ್ಕಾ ಸೇವನೆಯಿಂದ ಬಾಯಿ ಕ್ಯಾನ್ಸರ್ ಗೆ ತುತ್ತಾಗಿರುವ ಚಾಲಕರು, ಯುವ ಜನತೆ ಸೇರಿದಂತೆ ಎದುರಿಸುತ್ತಿರುವ ಸಮಸ್ಯೆಗಳು, ಚಿಕಿತ್ಸೆಗೆ ನಡೆದಿರುವ ಸಂಶೋಧನೆ ಕುರಿತ ಪ್ರಬಂಧಗಳು ಮಂಡನೆಯಾಗಲಿವೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಡಾ. ಎಲ್. ಅಶೋಕ್, ಡಾ. ಮಮತಾ ಮತ್ತಿತರರು ಹಾಜರಿದ್ದರು.