SUDDIKSHANA KANNADA NEWS/ DAVANAGERE/ DATE:19-02-2025
ಬೆಂಗಳೂರು: 2025ರ ವರ್ಷ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲಾರಂಭಿಸಿದೆ. ಬಸ್ ದರ ಏರಿಕೆಯಾಯ್ತು. ಮೆಟ್ರೋ ದರ ಹೆಚ್ಚಳವಾಯ್ತು. ವಿದ್ಯುತ್ ದರ ತುಟ್ಟಿಯಾಯ್ತು. ಈಗ ಹಾಲಿನ ದರ ಹೆಚ್ಚಳ ಆಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಲಿದೆ.
ಹೌದು. ಆದಷ್ಟು ಬೇಗ ನಂದಿನಿ ಹಾಲಿನ ದರ ಪರಿಷ್ಕರಣೆ ಆಗಲಿದೆ ಎಂದು ತಿಳಿದು ಬಂದಿದೆ. ಪ್ರತಿ ಲೀಟರ್ ನಂದಿನಿ ಹಾಲಿಗೆ ಐದು ರೂಪಾಯಿ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಬೆಲೆ ಏರಿಕೆ ಚೆಂಡು ಈಗಾಗಲೇ
ಸಿಎಂ ಸಿದ್ದರಾಮಯ್ಯರ ಅಂಗಳ ತಲುಪಿದೆ. ಗ್ರೀನ್ ಸಿಗ್ನಲ್ ಕೊಟ್ಟರೆಂದರೆ ಲೀಟರ್ ಗೆ ಐದು ರೂಪಾಯಿ ಹೆಚ್ಚಳ ಗ್ಯಾರಂಟಿ.
ಈ ಹೊಸ ವರ್ಷ ಆರಂಭವಾಗಿದ್ದೇ ತಡ, ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಇತ್ತೀಚೆಗಷ್ಟೇ ಬಸ್, ಮೆಟ್ರೋ ದರ ಏರಿಕೆಯಿಂದಾಗಿ ಜನ ಈಗಾಗಲೇ ಕಂಗಾಲಾಗಿ ಹೋಗಿದ್ದಾರೆ. ಅದರಲ್ಲೂ ಮೆಟ್ರೋ ದರ ಏರಿಕೆ ಮಾತ್ರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಈ ಬಗ್ಗೆ ಎಲ್ಲೆಡೆ ಆಕ್ರೋಶವೂ ವ್ಯಕ್ತವಾಗುತ್ತಿದೆ. ಇದೀಗ ಬಸ್, ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿದ ಬೆನ್ನಲ್ಲೇ ಮತ್ತೊಂದು ಬೆಲೆ ಏರಿಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ.
ಕೆಲ ದಿನಗಳ ಹಿಂದಷ್ಟೇ ರೈತರಿಗೆ ನೀಡುವ ಹಾಲಿನ ದರ ಏರಿಸುವಂತೆ ಕೆಎಂಎಫ್ ಮುಂದೆ ರೈತರು ಪ್ರತಿಭಟನೆ ಮಾಡಿದ್ದರು. ಜತೆಗೆ ಹಾಲು ಒಕ್ಕೂಟಗಳಿಂದ ನಂದಿನಿ ಹಾಲಿನ ದರ ಏರಿಸುವಂತೆ ಕೆಎಂಎಫ್ ಗೆ ಒತ್ತಡ ಹೇರಲಾಗಿತ್ತು. ಈ ಎಲ್ಲವುಗಳನ್ನು ಪರಿಗಣಿಸಿ ಇದೀಗ ಕೆಎಂಎಫ್ ಆಡಳಿತ ಮಂಡಳಿ ಸರ್ಕಾರಕ್ಕೆ ಮನವಿ ಮಾಡಿದೆ.ಇನ್ನು ಕೆಎಂಎಫ್ ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ ಎನ್ನಲಾಗಿದ್ದು, ಸದ್ಯ ಸಿಎಂ ಅಂಗಳದಲ್ಲಿ ನಂದಿನಿ ಹಾಲಿನ ದರದ ಮನವಿ ತಲುಪಿದೆ. ಮುಖ್ಯಮಂತ್ರಿಗಳ ಅನುಮತಿಗಾಗಿ ಕೆಎಂಎಫ್ ಆಡಳಿತ ಮಂಡಳಿ ಕಾದು ಕುಳಿತಿದೆ.