SUDDIKSHANA KANNADA NEWS/DAVANAGERE/DATE:23_10_2025
ದಾವಣಗೆರೆ: ಸರ್ಕಾರಿ ಕಚೇರಿಗಳಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹೆಸರು ಇಟ್ಟಿರುವುದನ್ನು ತೆಗೆಸಿ, ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಆರು ಮಂದಿಯ ಹೆಸರಿಟ್ಟು ದಾವಣಗೆರೆ ಜಿಲ್ಲೆಗೆ ಮಾಡಿರುವ ದ್ರೋಹಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಎಂದು ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ವಿರುದ್ಧ ವಾಗ್ದಾಳಿ ನಡೆಸಿದರು.
READ ALSO THIS STORY: ಉತ್ತರಾಧಿಕಾರಿ ಯಾರು ಎಂಬುದು ಪಕ್ಷ ನಿರ್ಧರಿಸುತ್ತದೆ ಎಂದ್ರು ಸತೀಶ್ ಜಾರಕಿಹೊಳಿ: ಎಲ್ಲವೂ ಊಹಾಪೋಹ ಎಂದ್ರು ಪರಂ, ಡಿಕೆಶಿ!
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದ ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಲಕ್ಷಾಂತರ ಜನ ಪ್ರಾಣಾರ್ಪಣೆ ಮಾಡಿದ್ದಾರೆ. ಆ ರೀತಿ ಪ್ರಾಣಾರ್ಪಣೆ ಮಾಡಿದ ಎಷ್ಟು ಜನ ಸ್ವಾತಂತ್ರ್ಯ ಸೇನಾನಿಗಳಿಗೆ ಅಥವಾ ಅವರ ಕುಟುಂಬದ ಸದಸ್ಯರಿಗೆ ದೇಶದಲ್ಲಿ ರಾಜ್ಯದಲ್ಲಿ ಮತ್ತು ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಉನ್ನತ ಹುದ್ದೆ ಕೊಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ದಾವಣಗೆರೆ ನಗರದಲ್ಲಿ ಸ್ವಾತಂತ್ರಕ್ಕೋಸ್ಕರ ಭಾರತ್ ವಿಮೋಚನಾ ಚಳುವಳಿಯಲ್ಲಿ ಹೋರಾಟ ಮಾಡಿದಾಗ ಬ್ರಿಟಿಷರ ಗುಂಡಿಗೆ ಬಲಿಯಾದ ಹಳ್ಳೂರು ನಾಗಪ್ಪ, ಅಕ್ಷಾಲಿ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗನಹಳ್ಳಿ ಹನುಮಂತಪ್ಪ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರು. ಇವರ ಕುಟುಂಬಕ್ಕೆ ದಿನೇಶ್ ಶೆಟ್ಟಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಎಷ್ಟು ನಿವೇಶನಗಳನ್ನು ನೀಡಿದ್ದಾರೆ? ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಶಾಮನೂರು ಶಿವಶಂಕರಪ್ಪ ಎಷ್ಟು ಬಂಗಲೆಗಳನ್ನು ಕಟ್ಟಿಸಿ ಕೊಟ್ಟಿದ್ದಾರೆ. ಇವರ ಕುಟುಂಬದವರಿಗೆ ಎಷ್ಟು ಹಣದ ಸಹಾಯ ಮಾಡಿದ್ದಾರೆ ಎಂಬುದನ್ನು ಮೊದಲು ಸಾರ್ವಜನಿಕವಾಗಿ ತಿಳಿಸಿ ಎಂದು ಸವಾಲು ಹಾಕಿದರು.
ಎಷ್ಟು ಜನ ಸ್ವಾತಂತ್ರ ಹೋರಾಟಗಾರರ ಹೆಸರುಗಳನ್ನು ಪಾರ್ಕ್ ಮತ್ತು ರಸ್ತೆಗಳಿಗೆ ಸರ್ಕಲ್ ಗಳಿಗೆ ಇಟ್ಟಿದ್ದಾರೆ ಎಂಬುದನ್ನು ಮೊದಲು ತಿಳಿಸಲಿ. ನಂತರ ಅಯೋಧ್ಯೆ ರಾಮಮಂದಿರದ ಹೋರಾಟ ಮಾಡಿದವರು, ತಮ್ಮ ಪ್ರಾಣವನ್ನು ಕಳೆದುಕೊಂಡವರ ಬಗ್ಗೆ ಮಾತನಾಡೋಣ ಎಂದು ಹೇಳಿದರು.
ಪದೇ ಪದೇ ಹಿಂದೂ ಧರ್ಮದ ಹೋರಾಟಕ್ಕೆ ಎಸ್ಸಿ ಎಸ್ಟಿ ಒಬಿಸಿ ಬಡವರ ಮಕ್ಕಳನ್ನು ಬಿಜೆಪಿ ಮುಖಂಡರು ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾತು ಹೇಳುವ ದಿನೇಶ್ ಕೆ. ಶೆಟ್ಟಿ ಅವರು, ಈ ದೇಶಕ್ಕೆ ಸ್ವಾತಂತ್ರ್ಯ ಬರಲು ಶಾಮನೂರು ಶಿವಶಂಕರಪ್ಪರ ತಂದೆ ಕಲ್ಲೇಶಪ್ಪ ಮತ್ತು ಅವರ ಮಗ ಎಸ್ ಎಸ್ ಮಲ್ಲಿಕಾರ್ಜುನ್ ಮತ್ತು ಪ್ರಭಾ ಮಲ್ಲಿಕಾರ್ಜುನ್ ಯಾವ್ಯಾವ ಸ್ವಾತಂತ್ರ ಹೋರಾಟ ಚಳುವಳಿಯಲ್ಲಿ ಭಾಗವಹಿಸಿ ಎಷ್ಟು ಬಾರಿ ಜೈಲಿಗೆ ಹೋಗಿದ್ದರು ಎಂಬುದನ್ನು ತಿಳಿಸಲಿ ಎಂದು ಹೇಳಿದರು.
ಗೋಷ್ಠಿಯಲ್ಲಿ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಚೇತನಾ ಶಿವಕುಮಾರ್ ಮತ್ತಿತರರು ಹಾಜರಿದ್ದರು.