
SUDDIKSHANA KANNADA NEWS/ DAVANAGERE/ DATE:19-04-2025
ದಾವಣಗೆರೆ: ಕಲ್ಲಿನಿಂದ ತಲೆಗೆ ಜಜ್ಜಿ ಬರ್ಬರ ಹತ್ಯೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಸಾಸಲು ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.


ಮೂಲತಃ ಹೊನ್ನಾಳಿ ತಾಲೂಕಿನ ಮಾರಿಕೊಪ್ಪ ಗ್ರಾಮದ ದಾವಣಗೆರೆ ವಾಸಿ ಮಣಿಕಂಠ (34) ಬರ್ಬರವಾಗಿ ಹತ್ಯೆಗೀಡಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ದಾವಣಗೆರೆಯ ಪಿಬಿ ರಸ್ತೆಯಲ್ಲಿ ರಾತ್ರಿ ವೇಳೆ ತಿಂಡಿ ಮಾಡುವ ಹೊಟೇಲ್ ನಡೆಸುತ್ತಿದ್ದ ಮಣಿಕಂಠ ಮಣಿ ಎಂದೇ ಖ್ಯಾತರಾಗಿದ್ದರು. ಡಾ. ಪುನೀತ್ ರಾಜಕುಮಾರ್ ಅವರ ಅಭಿಮಾನಿಯಾಗಿದ್ದರು. ಪುನೀತ್ ರಾಜಕುಮಾರ್ ಜನ್ಮದಿನ ಬಂತೆಂದರೆ ಹಬ್ಬದಂತೆ ಆಚರಿಸುವ ತಂಡದಲ್ಲಿ ಪ್ರಮುಖರಾಗಿರುತ್ತಿದ್ದರು. ಎಲ್ಲರೊಟ್ಟಿಗೆ ಅನೋನ್ಯವಾಗಿದ್ದರು. ಸ್ನೇಹಿತರ ಬಳಗವನ್ನೇ ಸಂಪಾದಿಸಿದ್ದರು.
ಆದ್ರೆ, ಶುಕ್ರವಾರ ರಾತ್ರಿ ಸಾಸಲು ಗ್ರಾಮದ ಪೆಟ್ರೋಲ್ ಬಂಕ್ ಬಳಿ ಸ್ನೇಹಿತರೊಟ್ಟಿಗೆ ಜಗಳ ನಡೆದಿದೆ. ಈ ವೇಳೆ ಮಣಿಕಂಠ ಅವರ ತಲೆಗೆ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಲಾಗಿದೆ. ಸ್ನೇಹಿತರ ಜೊತೆಗೆ ರಾತ್ರಿ ಬುಲೆರೋ ವಾಹನದಲ್ಲಿ ಮಣಿಕಂಠ ಬಂದಿದ್ದರು ಎಂದು ಮಾಹಿತಿ ಸಿಕ್ಕಿದೆ.
ಕೊಲೆಯಾದ ಸ್ಥಳಕ್ಕೆ ಶ್ವಾನದಳ, ಎಫ್ ಎಸ್ ಎಲ್ ತಂಡ ಭೇಟಿ ನೀಡಿದೆ. ಸ್ಥಳಕ್ಕೆ ಎಸ್ಪಿ ರಂಜಿತ್ ಕುಮಾರ್ ಬಂಡಾರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಆಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದ್ರೆ, ನಿಖರ ಕಾರಣ ಸ್ಪಷ್ಟವಾಗಿಲ್ಲ. ಶಂಕಿತ ಕೊಲೆ ಆರೋಪಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಚಿಕ್ಕಜಾಜೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸ್ಥಳದಲ್ಲಿ ಸಿಗರೇಟ್ ಹಚ್ಚುವ ಲೈಟರ್, ಗುಟ್ಕಾ ಪ್ಯಾಕೆಟ್ ಗಳು, ತಲೆಗೆ ಜಜ್ಜಿದ್ದ ಕಲ್ಲು ಪತ್ತೆಯಾಗಿದೆ. ರಕ್ತಸಿಕ್ತವಾಗಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.