SUDDIKSHANA KANNADA NEES\ DAVANAGERE: DATE-14-05-2024
ದಾವಣಗೆರೆ: ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಕಣಿವೆಬಿಳಚಿಯ ಭದ್ರಾ ನಾಲೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಮಹಿಳೆ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಕೆರೆ ಗೇಟ್ ನ ಕುಮಾರ ಹೆಚ್. ಜಿ. ನಾಗೊಲೆ (50), ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ಚಿದಾನಂದಪ್ಪ (54) ಬಂಧಿತ ಆರೋಪಿಗಳು. ಅರಕೆರೆ ಗ್ರಾಮದ ನೇತ್ರಾವತಿ (47) ಹತ್ಯೆಗೀಡಾಗಿದ್ದ ಮಹಿಳೆ.
ಘಟನೆ ಹಿನ್ನೆಲೆ ಏನು…?
ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಕಣಿವೆಬಿಳಚಿ ಗ್ರಾಮದ ಬಳಿ ಭದ್ರಾ ನಾಲೆಯಲ್ಲಿ ಕಳೆದ 9ರಂದು ಅನಾಮಧೇಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬಸವಾಪಟ್ಟಣದ ಭದ್ರಾ ನಾಲೆಯ ನೀರಗಂಟಿ ವೃತ್ತಿ ಮಾಡುತ್ತಿದ್ದ ಅಣ್ಣಪ್ಪ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬಸವಾಪಟ್ಟಣ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಲಾಗಿ ಮೃತ ದೇಹವು ಸಂಪೂರ್ಣ ಕೊಳೆತ ಸ್ಥಿತಿಯಲಿತ್ತು. ಸುಮಾರು 40ರಿಂದ 45 ವರ್ಷ ವಯಸ್ಸಿನ ಮಹಿಳೆಯ ಶವದಂತೆ ಮೇಲ್ನೋಟಕ್ಕೆ ಕಂಡುಬಂದಿತ್ತು.
ಕೊರಳಲ್ಲಿ ಹಗ್ಗ ಸುತ್ತಿದ ರೀತಿಯಲ್ಲಿದ್ದು, ಯಾರೋ ಎಲ್ಲಿಯೋ ಕೊಲೆ ಮಾಡಿ ಚಾನಲ್ ಗೆ ಹಾಕಿರುವ ಬಗ್ಗೆ ಅನುಮಾನ ವ್ಯಕ್ತವಾದ ಕಾರಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ 61/2024 ಕಲಂ 302,. 201 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ, ಜಿ. ಮಂಜುನಾಥ, ಚನ್ನಗಿರಿ ಡಿವೈಎಸ್ಪಿ ಪ್ರಶಾಂತ್ ಮನ್ನೋಳಿ ಮಾರ್ಗದರ್ಶನದಲ್ಲಿ ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳನ್ನೊಳಗೊಡ ತಂಡ ರಚಿಸಲಾಗಿತ್ತು. ಈ ತಂಡವು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ಕೈಗೊಂಡಿದ್ದು, ಮೃತ ಶವದ ಗುರುತು ಪತ್ತೆಗಾಗಿ ಜಿಲ್ಲೆಯ ಹಾಗೂ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ಕಾಣೆಯಾದ ಪ್ರಕರಣಗಳ ಬಗ್ಗೆ ಪರಿಶೀಲನೆ ನಡೆಸಿತು. ಈ ವೇಳೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಾಣೆ ಪ್ರಕರಣದಲ್ಲಿನ ಮಹಿಳೆಯ ಚಹರೆಗೂ ಹಾಗೂ ಅನಾಮಧೇಯ ಶವದ ಚಹರೆಗೂ ಹೋಲಿಕೆ ಕಂಡು ಬಂದ ಮೇರೆಗೆ ಮುಂದಿನ ತನಿಖೆ ಕೈಗೊಂಡಿದ್ದು, ಮಹಿಳೆಯ ಸಂಬಂಧಿಕರನ್ನು ಸಂಪರ್ಕಿಸಿದಾಗ ಮೃತ ಶವದ ಗುರುತು ಪತ್ತೆ ಆಗಿತ್ತು.
ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಅರಕೆರೆ ಗ್ರಾಮದ ನೇತ್ರಾವತಿ (47) ಎಂದು ತಿಳಿದು ಬಂದಿತ್ತು. ಈ ಮಹಿಳೆಯ ಕೊಲೆ ಪ್ರಕರಣದಲ್ಲಿ ಎಲ್ಲಾ ಆಯಾಮಗಳಲ್ಲಿ ತೀವ್ರ ಕಾರ್ಯಾಚರಣೆ ಕೈಗೊಂಡು, ಮಹಿಳೆಯ ಕೊಲೆ ಪ್ರಕರಣದಲ್ಲಿನ ಆರೋಪಿತರಾದ ಅರಕೆರೆ ಗೇಟ್ ನ ಕುಮಾರ ಹೆಚ್. ಜಿ. ನಾಗೊಲೆ (50), ಭದ್ರಾವತಿ ತಾಲೂಜಿನ ಅರಕೆರೆ ಗ್ರಾಮದ ಚಿದಾನಂದಪ್ಪ (54)ರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಲಾಯಿತು.
ಈ ವೇಳೆ ಮೃತ ನೇತ್ರಾವತಿಯು ಕಳೆದ ಏಪ್ರಿಲ್ 20ರಂದು ಕೊಲೆ ಆರೋಪಿತರ ಜಮೀನಿನಲ್ಲಿ ಅಡಿಕೆ ಗಿಡಗಳನ್ನು ಕಡಿದಿದ್ದರಿಂದ ಕೋಪಗೊಂಡು ಆಕೆಯನ್ನು ಜಮೀನಿನಲ್ಲಿ ಕೊಲೆ ಮಾಡಿ ನಂತರ ಜಮೀನಿನ ಸಮೀಪದ ಭದ್ರಾ ಚಾನಲ್ ನಲ್ಲಿ ಹಾಕಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪ್ರಕರಣದ ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಹಾಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಕೊಲೆ ಪ್ರಕರಣವನ್ನು ಭೇಧಿಸಿ ಆರೋಪಿತರ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಸಂತೇಬೆನ್ನೂರು ಸಿಪಿಐ ಗೋಪಾಲ ನಾಯ್ಕ್, ಬಸವಾ ಪಟ್ಟಣ ಪೊಲೀಸ್ ಠಾಣೆಯ ಪಿಎಸ್ಐ ವೀಣಾ ಕೆ., ಸಿಬ್ಬಂದಿಯಾದ ಇದಾಯತ್, ಎಎಸ್ಐ, ರಂಗನಾಥ, ರುದ್ರೇಶ್, ಸತೀಶ್, ವೀರಭದ್ರಪ್ಪ, ಪರಶುರಾಮ, ರವಿ, ಇರ್ಷಾದ್, ಮಂಜುನಾಥ, ಇಬ್ರಾಹೀಂ, ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಅಭಿನಂದಿಸಿದ್ದಾರೆ.