ಮಧ್ಯಪ್ರದೇಶ: ಎರಡು ವರ್ಷಗಳಿಂದ ಅಕ್ರಮ ಸಂಬಂಧದಲ್ಲಿದ್ದ ಸೋದರಳಿಯ ಮದುವೆಯಾಗುವಂತೆ ನಿರಂತರ ಒತ್ತಾಯ ಮಾಡುತ್ತಿದ್ದ ಕಾರಣಕ್ಕೆ ಆತನನ್ನೇ ದುಪ್ಪಟ್ಟಾದಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಸತ್ಯಪ್ರಕಾಶ್ ಗುಪ್ತಾ ಎಂದು ಗುರುತಿಸಲಾಗಿದ್ದು, ಆರೋಪಿ ಮಹಿಳೆಯನ್ನು ಆತನ ಅತ್ತೆ ಪ್ರಿಯಾ ಗುಪ್ತಾ (ದಿವಂಗತ ಸುನಿಲ್ ಗುಪ್ತಾ ಅವರ ಪತ್ನಿ) ಎಂದು ಗುರುತಿಸಲಾಗಿದೆ.
ಘಟನೆಯ ಹಿನ್ನೆಲೆ:
ಪ್ರಿಯಾ ಮತ್ತು ಸತ್ಯಪ್ರಕಾಶ್ ನಡುವೆ ಕಳೆದ ಎರಡು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಆದರೆ ಸತ್ಯಪ್ರಕಾಶ್ ಇತ್ತೀಚೆಗೆ ತನ್ನನ್ನು ಮದುವೆಯಾಗುವಂತೆ ಪ್ರಿಯಾ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದ. ಇದರಿಂದ ಇಬ್ಬರ ನಡುವೆ ಆಗಾಗ ತೀವ್ರ ಜಗಳ ನಡೆಯುತ್ತಿತ್ತು. ಜುಲೈ 31ರಂದು ರಾತ್ರಿ ಇಬ್ಬರ ನಡುವಿನ ಗಲಾಟೆ ತೀವ್ರರೂಪ ಪಡೆದುಕೊಂಡಾಗ, ಪ್ರಿಯಾ ತನ್ನ ದುಪ್ಪಟ್ಟಾದಿಂದ ಸತ್ಯಪ್ರಕಾಶ್ ಅವರ ಕತ್ತನ್ನು ಬಿಗಿದು ಕೊಲೆ ಮಾಡಿದ್ದಾಳೆ.
ಸಿಸಿಟಿವಿಯಿಂದ ಬಯಲಾಯ್ತು ರಹಸ್ಯ:
ಕೊಲೆಯ ನಂತರ ಆರೋಪಿ ಪ್ರಿಯಾ, ಸತ್ಯಪ್ರಕಾಶ್ ಮೃತದೇಹವನ್ನು ಆತನ ಮಾರುತಿ ಸುಜುಕಿ ಎಸ್-ಪ್ರೆಸ್ಸೋ ಕಾರಿನ ಚಾಲಕನ ಸೀಟಿನಲ್ಲಿ ಕುಳ್ಳಿರಿಸಿದ್ದಾಳೆ. ಬಳಿಕ ಅನುಮಾನ ಬಾರದಂತೆ ಸತ್ಯಪ್ರಕಾಶ್ ಸಹೋದರ ರಾಹುಲ್ ಗುಪ್ತಾಗೆ ಕರೆ ಮಾಡಿ, ಆತ ಕಾರಿನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾನೆ ಎಂದು ಮಾಹಿತಿ ನೀಡಿದ್ದಾಳೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ವೈದ್ಯರು ಸತ್ಯಪ್ರಕಾಶ್ ಮೃತಪಟ್ಟಿರುವುದಾಗಿ ಘೋಷಿಸಿದರು.
ತನಿಖೆ ಕೈಗೆತ್ತಿಕೊಂಡ ಸಿಂಗ್ರೌಲಿಯ ಮೊರ್ವಾ ಠಾಣೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಧ್ಯರಾತ್ರಿ ಪ್ರಿಯಾ ಸತ್ಯಪ್ರಕಾಶ್‌ನನ್ನು ಕಾರಿನ ಬಳಿಗೆ ಕರೆದೊಯ್ಯುತ್ತಿರುವುದು ಕಂಡುಬಂದಿದೆ. ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಆರೋಪಿ ಪ್ರಿಯಾ ಗುಪ್ತಾಳನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 103(1) ಮತ್ತು 238(A) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.





Leave a comment