SUDDIKSHANA KANNADA NEWS/ DAVANAGERE/ DATE:29-10-2024
ದಾವಣಗೆರೆ: ಲೋಕಸಭಾ ಚುನಾವಣೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಮಾತನಾಡಿದವರ ವಿರುದ್ಧ ದೂರು ನೀಡಲಿ. ಬೇಡವೆಂದವರು ಯಾರು? ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಅವರು ಮಾಜಿ ಸಂಸದ ಸಿದ್ದೇಶ್ವರ ಅವರ ಆಪ್ತರಿಗೆ ಸಲಹೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ನಡೆದ ಸಭೆಯಲ್ಲಿ ಪಾಲ್ಗೊಂಡವರು ಯಾರು ಎಂಬುದು ಗೊತ್ತು. ಫೋಟೋಗೋಸ್ಕರ ತಪ್ಪು ಮಾಹಿತಿ ನೀಡಿದ್ದಾರೆ. ಪಕ್ಷ ನಿಷ್ಠೆ ಬಗ್ಗೆ ನಮಗೆ ಪಾಠ ಹೇಳುವ ಅವಶ್ಯಕತೆ ಇಲ್ಲ. ಯಾರೇ ರಾಜ್ಯಾಧ್ಯಕ್ಷರ ವಿರುದ್ಧ ಮಾತನಾಡಿದರೂ ದೂರು ನೀಡಲಿ ಎಂದು ಹೇಳಿದರು.
ದಾವಣಗೆರೆ ಜಿಲ್ಲೆಯಲ್ಲಿ ಯಾವುದೇ ಬಣಗಳಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರ ಸೂಚನೆಯಂತೆ ನಾವು ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದೇವೆ. ಯಾರೋ ಕೆಲವರು ನೋಂದಣಿ ಬಗ್ಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ.
ಇದಕ್ಕೆಲ್ಲಾ ಉತ್ತರ ಕೊಡುವ ಅವಶ್ಯಕತೆ ಇಲ್ಲ ಎಂದು ತಿರುಗೇಟು ನೀಡಿದರು.
ಮೂರ್ನಾಲ್ಕು ಮಂದಿಗೆ ವಿಜಯೇಂದ್ರರ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಇವರು ನಿಷ್ಠಾವಂತರಲ್ಲ. ನಿಮ್ಮಿಂದನೇ ಪಾರ್ಟಿನಾ. ನಿಮಗೆ ಪಕ್ಷ ನಿಷ್ಠೆಯೇ ಇಲ್ಲ. ವಿಜಯೇಂದ್ರ ಟೀಕೆ ಮಾಡುವುದು ಮೂವರಿಗೆ ಬಾಯಿಚಟವಾಗಿದೆ. ವಿಜಯಪುರದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿದ್ದು ನೀವು. ಪಕ್ಷದಿಂದ ಸಸ್ಪೆಂಡ್ ಆಗಿದ್ದು ಮರೆತುಬಿಟ್ಟಿದ್ದಾರೆ. ಜೆಡಿಎಸ್ ಗೆ ಹೋಗಿದ್ದವರನ್ನು ಕರೆತಂದಿದ್ದು ಯಡಿಯೂರಪ್ಪ. ಬಿಜೆಪಿಗೆ ಸೇರಿಸಿಕೊಂಡಿದ್ದಕ್ಕೆ ಈ ರೀತಿ ಮಾತನಾಡುತ್ತೀರಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಆರ್ ಎಸ್ ಎಸ್ ಸೂಚನೆ ಇದೆ. ಹಾಗಾಗಿ ಹೆಚ್ಚು ಮಾತನಾಡುತ್ತಿಲ್ಲ. ವಿನಾಕಾರಣ ಗೊಂದಲ ಸೃಷ್ಟಿಸಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಏಟಿಗೆ ಎದಿರೇಟು ನೀಡ್ತೇವೆ ಎಂದು ಹೇಳಿದರು.