SUDDIKSHANA KANNADA NEWS/ DAVANAGERE/ DATE:09-02-2025
ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ವಿರುದ್ಧ ಮಾತನಾಡಿದಾಕ್ಷಣ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೊಡ್ಡ ಮನುಷ್ಯ ಆಗಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಟಾಂಗ್ ನೀಡಿದ್ದಾರೆ.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಮಾರಿ ಹಬ್ಬದ ವೇಳೆ ಐದು ವರ್ಷ, ಹತ್ತು ವರ್ಷ, ಹದಿನೈದು ವರ್ಷಗಳ ಕಾಲ ಕೋಣ ಬೆಳೆಸುತ್ತಾರೆ. ಆ ನಂತರ ಆ ಕೋಣ ಬಲಿಕೊಡುವ ಸಂಸ್ಕೃತಿ ಇದೆ. ಮಾರಿಹಬ್ಬದಲ್ಲಿ ಎಣ್ಣೆ ಹಾಕಿ ಚೆನ್ನಾಗಿ ಫಳಫಳ ಹೊಳೆಯುವಂತೆ ಮಸಾಜ್ ಮಾಡ್ತಾರೆ. ಸುಣ್ಣ ಉಪ್ಪಿನ ನೀರು ಕುಡಿಸಿ ಬಲಿ ಕೊಡ್ತಾರೆ. ಅದೇ ರೀತಿಯಲ್ಲಿ ಯತ್ನಾಳ್ ಜೊತೆಗಿರುವವರೇ ಬಲಿ ಕೊಡುತ್ತಾರೆ ಎಂದು ವ್ಯಂಗ್ಯವಾಡಿದರು.
ಯತ್ನಾಳ್ ಜೊತೆಗೆ ಇರುವವರು ಮೂರ್ಖರು. ಅಭಿವೃದ್ಧಿ ಕೆಲಸ ಮಾಡದೇ ಅಹಂಕಾರ ತೋರಿಸಿ ಸೋತು ಸುಣ್ಣ ಆಗಿರುವವರಿಗೆ ದಂಡನಾಯಕ. ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ನಮಗೂ ಗೊತ್ತು. ರಾಜಕಾರಣ
ಮಾಡಲು ನಮಗೂ ಬರುತ್ತದೆ. ನಾವೂ ಮಾಡಿ ತೋರಿಸುತ್ತೇವೆ ಎಂದು ಸವಾಲು ಹಾಕಿದರು.
ಹೊನ್ನಾಳಿಯಲ್ಲಿ ವೀರಭದ್ರೇಶ್ವರ ಸ್ವಾಮಿ ಆಶೀರ್ವಾದ ನಮ್ಮ ಮೇಲಿದೆ. ಲೋಕ ಕಲ್ಯಾಣಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿ ಬಂದಿದ್ದೇನೆ. ರಾಷ್ಟ್ರೀಯ ನಾಯಕರು ಸೂಚನೆ ನೀಡಿದ್ದರಿಂದ ರಾಜನಹಳ್ಳಿಗೆ ಬರುತ್ತಿದ್ದ ಬಿ. ವೈ. ವಿಜಯೇಂದ್ರ
ಅವರು ರಾಷ್ಟ್ರೀಯ ನಾಯಕರ ಸೂಚನೆ ಮೇರೆಗೆ ನವದೆಹಲಿಗೆ ತೆರಳಿದ್ದು, ರಾಜ್ಯಾಧ್ಯಕ್ಷರ ಬದಲಾವಣೆ ಪ್ರಶ್ನೆ ಇಲ್ಲ. ವಿಜಯೇಂದ್ರ ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ಯಾರು ಏನು ಬೇಕಾದರೂ ಹೇಳಲಿ ಎಂದು ರೇಣುಕಾಚಾರ್ಯ ಹೇಳಿದರು.