Home ದಾವಣಗೆರೆ ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಆಡಳಿತ ಕೊನೆಗಾಣಿಸಿದ್ದ ಹಿರಿಯ ರಾಜಕಾರಣಿ ಯಜಮಾನ್ ಮೋತಿ ವೀರಣ್ಣ ವಿಧಿವಶ
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಕಮ್ಯುನಿಸ್ಟ್ ಆಡಳಿತ ಕೊನೆಗಾಣಿಸಿದ್ದ ಹಿರಿಯ ರಾಜಕಾರಣಿ ಯಜಮಾನ್ ಮೋತಿ ವೀರಣ್ಣ ವಿಧಿವಶ

Share
ದಾವಣಗೆರೆ
Share

ದಾವಣಗೆರೆ: ಒಂದು ಕಾಲದಲ್ಲಿ ಕಮ್ಯುನಿಸ್ಟ್ ಭದ್ರಕೋಟೆಯಾಗಿದ್ದ ದಾವಣಗೆರೆಯಲ್ಲಿ ಬದಲಾವಣೆ ಪರ್ವ ತಂದಿದ್ದ ಹಿರಿಯ ರಾಜಕಾರಣಿ, ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ ವಿಧಿವಶರಾಗಿದ್ದಾರೆ.

ಅವರಿಗೆ 90 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಶನಿವಾರ ಬೆಳಿಗ್ಗೆ 12.07ಕ್ಕೆ ಕೊನೆ ಉಸಿರೆಳೆದರು. ಮೃತರು ಚಿತ್ರ ನಿರ್ಮಾಪಕ ಯಜಮಾನ್ ಮೋತಿ ರಾಜೇಂದ್ರ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ, ನಾಲ್ವರು ಮೊಮ್ಮಕ್ಕಳು, ಓರ್ವ ಮರಿಮೊಮ್ಮಗಳು ಹಾಗೂ ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.

ಯಜಮಾನ್ ಮೋತಿ ವೀರಣ್ಣ: ಒಂದು ಸ್ಮರಣೆ

  • ನಿಧನ: ವಯೋಸಹಜ ಕಾಯಿಲೆಯಿಂದ ಶನಿವಾರ ಬೆಳಿಗ್ಗೆ 12.07ಕ್ಕೆ ನಿಧನರಾದರು (90 ವರ್ಷ).

  • ರಾಜಕೀಯ ಸಾಧನೆ: 1989ರಲ್ಲಿ ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಸುಮಾರು 29 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಮೂಲಕ ದಾವಣಗೆರೆಯಲ್ಲಿ ಸುಮಾರು ಮೂರು ದಶಕಗಳ ಕಾಲ ಇದ್ದ ಕಮ್ಯುನಿಸ್ಟ್ ಆಡಳಿತವನ್ನು ಅಂತ್ಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

  • ಹೆಸರಿನ ವಿಶೇಷತೆ: ಇವರ ಶಿಸ್ತು, ನಡವಳಿಕೆ ಮತ್ತು ಜಮೀನ್ದಾರಿ ಮನೆತನದ ಹಿನ್ನೆಲೆಯಿಂದಾಗಿ ‘ಯಜಮಾನ್’ ಎಂಬ ಅಡ್ಡಹೆಸರು ಇವರ ವ್ಯಕ್ತಿತ್ವದ ಭಾಗವಾಗಿತ್ತು.

  • ಸಾಮಾಜಿಕ ಸೇವೆ: * ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಸೇವೆ.

    • ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಣೆ.

    • ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್‌ನ ಉಪಾಧ್ಯಕ್ಷರಾಗಿ ಸೇವೆ.

ನಗರದ ಮಾಜಿ ಶಾಸಕರೂ, ಕಾಂಗ್ರೆಸ್ ಹಿರಿಯ ಮುಖಂಡರೂ ಆದ ಯಜಮಾನ್ ಮೋತಿ ವೀರಣ್ಣ ಅವರು ದಾವಣಗೆರೆಯಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದವರು. ಸಮಾಜ ಸೇವಕರು, ರಾಜಕೀಯ ಧುರೀಣರು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಕಷ್ಟು ಪ್ರಖ್ಯಾತರಾದವರು. ನಗರಸಭೆ ಮಾಜಿ ಸದಸ್ಯರು, ಮಾಜಿ ಶಾಸಕರು, ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಗಳುು.ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು.

ಅಂತ್ಯಕ್ರಿಯೆ:

ಎಂಸಿಸಿ ಬಿ ಬ್ಲಾಕ್ ನಲ್ಲಿರುವ ಅವರ ಮಾತೆ ಗೌರಿ ನಿವಾಸದಲ್ಲಿ ಮೃತದೇಹದ ಅಂತಿಮ ನಮನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇಂದು ಸಂಜೆ ನಾಲ್ಕು ಗಂಟೆಗೆ ಸ್ಥಳೀಯ ಹದಡಿ ರಸ್ತೆಯಲ್ಲಿರುವ ಶ್ರೀ ಯಜಮಾನ್ ಮೋತಿ ದೊಡ್ಡಪ್ಪ ಟ್ರಸ್ಟ್ ನಿವೇಶನದಲ್ಲಿ ನೆರವೇರಿಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

ಮೋತಿ ವೀರಣ್ಣರಿಗೆ ಯಜಮಾನ್ ಅಡ್ಡ ಹೆಸರು ಬಂದಿದ್ದೇಗೆ?

ಮೋತಿ ವೀರಣ್ಣ ಅವರದ್ದು ಪ್ರತಿಷ್ಠಿತ ಮನೆತನ. ಯಜಮಾನ್ ಮೋತಿ ವೀರಣ್ಣ ಅವರು ಜಮೀನ್ದಾರರಾಗಿದ್ದರು. ಮೋತಿ ದೊಡ್ಡಪ್ಪ ಅವರ ಐದನೇ ಪುತ್ರ. ನಡೆ, ನುಡಿ, ಶಿಸ್ತು ಯಜಮಾನಿಕೆಯಿಂದ ಅವರಿಗೆ ಯಜಮಾನ್ ಎಂಬ
ಅಡ್ಡ ಹೆಸರು ಬಂದಿತ್ತು. ಈ ಕಾರಮದಿಂದಲೇ ಅವರ ಸರ್ ನೇಮ್ ಕೂಡ ಮನೆತನದಲ್ಲಿ ಮುಂದುವರಿದಿದ್ದು ಇತಿಹಾಸ.

ವಿದ್ಯಾರ್ಥಿ ದಿಸೆಯಿಂದಲೇ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಮೋತಿ ವೀರಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ನತರ ದಿನಗಳಲ್ಲಿ ಕಾಂಗ್ರೆಸ್ ಪಕ್ಷದಿಂದ ದಾವಣಗೆರೆ ನಗರಸಭೆ ಸದಸ್ಯರಾಗಿ, ಅವಿಜಭಿತ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.

1985ರಲ್ಲಿ ಅಂದಿನ ದಾವಣಗೆರೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಮ್ಯೂನಿಸ್ಟ್ ಪಕ್ಷದ ಕಾಂ. ಪಂಪಾವತಿ ಅವರ ವಿರುದ್ಧ ಸೋಲು ಕಂಡಿದ್ದರು. ಆದರೂ ಎದೆಗುಂದದೇ ಮತ್ತೆ ಸ್ಪರ್ಧೆ ಮಾಡಿ ಅಂದರೆ 1989ರಲ್ಲಿ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿ ಬರೋಬ್ಬರಿ 29 ಸಾವಿರ ಮತಗಳ ಅಂತರದಿಂದ ಗೆದ್ದು ಮೊದಲ ಬಾರಿಗೆ ಶಾಸಕರಾದರು. ಈ ಮೂಲಕ ಮೂರು ದಶಕಗಳ ಕಮ್ಯುನಿಸ್ಚ್ ಪಕ್ಷದ ಸಾಮ್ರಾಜ್ಯ ಕೊನೆಗಾಣಿಸಿದ ಕೀರ್ತಿ ಮೋತಿ ವೀರಣ್ಣರಿಗೆ ಸಲ್ಲುತ್ತದೆ.

ಯಾವೆಲ್ಲಾ ಹುದ್ದೆ ಅಲಂಕರಿಸಿದ್ದರು?

ಸಾಮಾಜಿಕ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿದ್ದ ಮೋತಿ ವೀರಣ್ಣರು ಹಲವು ಹುದ್ದೆಗಳನ್ನು ಅಲಂಕರಿಸಿದ್ದರು. ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಧರ್ಮದರ್ಶಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಹಳೇಪೇಟೆಯ ಶ್ರೀ
ವೀರಭದ್ರೇಶ್ವರ ದೇಗುಲ, ದೊಡ್ಡಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನ ಸೇರಿದಂತೆ ಹಲವು ಸಾಮಾಜಿಕ ಸಂಘಟನೆಗಳಲ್ಲಿ ಪದಾಧಿಕಾರಿಯಾಗಿದ್ದವರು. ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಶ್ರೀ ಮುರುಘರಾಜೇಂದ್ರ ಶಿವಯೋಗಾಶ್ರಮ ಟ್ರಸ್ಟ್ ಉಪಾಧ್ಯಕ್ಷರೂ ಆಗಿದ್ದರು. ಮೃತರ ನಿಧನಕ್ಕೆ ವಿವಿಧ ಸಂಘಟನೆಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *