SUDDIKSHANA KANNADA NEWS/ DAVANAGERE/ DATE:02-12-2023
ದಾವಣಗೆರೆ: ನಗರದ ಮಾಗಾನಹಳ್ಳಿ ರಸ್ತೆಯ ರಿಂಗ್ ರೋಡ್ ಸಮೀಪದ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆಗೆ ವಿರೋಧ ವ್ಯಕ್ತಪಡಿಸಿದ ಎಸ್ ಯು ಸಿ ಐ ಕಮ್ಯೂನಿಸ್ಟ್ ಪಕ್ಷದ ಮುಖಂಡರೂ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಹೆಗಡೆ ನಗರದಲ್ಲಿ 412ಕ್ಕೂ ಹೆಚ್ಚು ಮಂದಿ ವಾಸವಿದ್ದು, ಭಾತಿಯಲ್ಲಿ ಜಾಗ ಗುರುತಿಸಲಾಗಿದೆ ಎಂದು ಹೇಳಲಾಗಿದೆ. ಆದ್ರೆ, ಯಾವುದೇ ಮೂಲಭೂತ ಸೌಲಭ್ಯವಿಲ್ಲದೇ, ಮನೆಯಿಲ್ಲದೇ ಎಲ್ಲಿಗೆ ಹೋಗಬೇಕು. ಮೊದಲು ಎಲ್ಲಾ ಸೌಲಭ್ಯ ಕಲ್ಪಿಸಿ ಮನೆ ಕಟ್ಟಿಕೊಟ್ಟು ಸ್ಥಳಾಂತರ ಮಾಡಲಿ. ಅದನ್ನು ಬಿಟ್ಟು ಪೊಲೀಸರ ಸಹಕಾರದಿಂದ ಬಲವಂತವಾಗಿ ತೆರವುಗೊಳಿಸಲಾಗುತ್ತಿರುವುದು ಸರಿಯಲ್ಲ. ಜನವಿರೋಧಿಯಾಗಿ ವರ್ತಿಸುತ್ತಿರುವ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಹಾಕಿದರು.
ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ 20ಕ್ಕೂ ಹೆಚ್ಚು ಮಂದಿಯನ್ನು ಮೊದಲು ವಶಕ್ಕೆ ಪಡೆದು ಆ ಬಳಿಕ ಬಂಧಿಸಿದರು.
ಈ ವೇಳೆ ಮಹಿಳಾ ಹೋರಾಟಗಾರ್ತಿಯರನ್ನು ಎಳೆದೊಯ್ದು ಪೊಲೀಸ್ ವಾಹನ ಹತ್ತಿಸಿದ್ದು ಪ್ರತಿಭಟನಾಕಾರರು ಮತ್ತಷ್ಟು ಕೆರಳುವಂತೆ ಮಾಡಿತು. ಜನರಿಗೆ ಸೂಕ್ತ ಸೌಲಭ್ಯ ಕಲ್ಪಿಸದೇ ಎತ್ತಂಗಡಿ ಮಾಡಿದರೆ ಎಲ್ಲಿಗೆ ಹೋಗಬೇಕು. ಇಲ್ಲಿ ವಾಸವಿರುವ ಎಷ್ಟೋ ಮಂದಿಗೆ ಹಕ್ಕುಪತ್ರ ನೀಡಿಲ್ಲ, ನಿವೇಶನ ಎಲ್ಲಿ ನೀಡಲಾಗಿದೆ ಎಂಬ ಮಾಹಿತಿಯೂ ಇಲ್ಲ. ಕೆಲವರಿಗಷ್ಟೇ ಹಕ್ಕುಪತ್ರ ನೀಡಲಾಗಿದೆ. ಇಲ್ಲಿ ವಾಸವಿರುವ ಬಹುತೇಕರು ಕೂಲಿ ಕಾರ್ಮಿಕರು. ದುಡಿದು ಜೀವನ ಸಾಗಿಸಬೇಕು. ಇಂಥ ಸ್ಥಿತಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿಕೊಳ್ಳುವುದಾದರೂ ಹೇಗೆ? ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಪೊಲೀಸ್ ಡಿಆರ್ ಗ್ರೌಂಡ್ ಗೆ ಕರೆದುಕೊಂಡು ಹೋದರು. ಅಲ್ಲಿಯೂ ಸಹ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಬಂಧಿತರು ಆಕ್ರೋಶ ವ್ಯಕ್ತಪಡಿಸಿದರು. ಸ್ ಯು ಸಿ ಐ ಕಮ್ಯೂನಿಸ್ಟ್ ಪಕ್ಷದ
ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮಹಿಳಾ ನಾಯಕಿ ಕೆ. ಭಾರತಿ, ಪರಶುರಾಮ್, ಪೂಜಾ, ಹೆಗಡೆ ನಗರದ ಸ್ಥಳೀಯರು, ನಾಯಕರನ್ನು ಬಂಧಿಸಲಾಯಿತು.
ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆಯಲ್ಲಿ ಇರುವ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ತೀವ್ರ ವಿರೋಧ ವ್ಯಕ್ತವಾಯಿತು. ಈ ಮುನ್ಸೂಚನೆ ಇದ್ದ ಕಾರಣಕ್ಕೆ ಶುಕ್ರವಾರದಂದೇ ಉಪವಿಭಾಗಾಧಿಕಾರಿಗಳು 144 ಸೆಕ್ಷನ್ ಜಾರಿಗೊಳಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಿಗ್ಗೆ ಐದು ಗಂಟೆಯಿಂದ ಡಿ.3ರ ಸಂಜೆ ಐದು ಗಂಟೆವರೆಗೆ ಕಲಂ 144 ಅನ್ವಯ ತೆರವು ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ನಿಷೇಧಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ ದಾವಣಗೆರೆ ಉಪ ವಿಭಾಗಾಧಿಕಾರಿ ದುರ್ಗಾಶ್ರೀ ಅವರು, ಜೆಸಿಬಿ ಯಂತ್ರಗಳ ಸಹಿತ ಬಂದು ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಮನೆಗಳ ತೆರವು ಕಾರ್ಯಾಚರಣೆ ನಡೆಸಿದರು. ಸುಮಾರ 419ಕ್ಕೂ
ಹೆಚ್ಚು ಮನೆಗಳ ತೆರವಿಗೆ ನಿರ್ಧಾರ ಮಾಡಲಾಗಿದ್ದು, ಇದರಲ್ಲಿ ಕೆಲವರಿಗೆ ಬೇರೆ ಕಡೆ ವಾಸಿಸಲು ಹಕ್ಕು ಪತ್ರ ನೀಡಲಾಗಿದೆ. ಹಕ್ಕು ಪತ್ರ ಸಿಗದವರಿಂದ ಆಕ್ರೋಶ ವ್ಯಕ್ತವಾಗಿದೆ. ಹಲವಾರು ವರ್ಷಗಳಿಂದ ವಾಸವಿದ್ದ ತಮಗೆ ತೆರವುಗೊಳಿಸಿ ಎನ್ನುವುದು
ಸರಿಯಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಎಡಿಸಿ ಲೋಕೇಶ್, ಎಎಸ್ ಪಿ ವಿಜಯಕುಮಾರ ಸಂತೋಷ, ಎಸಿ ದುರ್ಗಾಶ್ರೀ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಬಹುತೇಕ ಮನೆಗಳಲ್ಲಿ ಅಲ್ಪಸಂಖ್ಯಾತರೇ ವಾಸವಾಗಿದ್ದು,
ಸ್ಥಳದಲ್ಲಿ ಬಿಗುವಿನ ವಾತಾವರಣವೂ ನಿರ್ಮಾಣವಾಗಿತ್ತು.
ಏಕಾಏಕಿ ಜೆಸಿಬಿಯಿಂದ ಮನೆ ಕೆಡವಿದ್ದರಿಂದ ಸ್ಥಳೀಯರ ಸಹನೆ ಕಟ್ಟೆ ಒಡೆದಿತ್ತು. ಮನೆಯಲ್ಲಿರುವ ವಸ್ತುಗಳನ್ನು ತೆಗೆಯಲು ಬಿಡದೆ ಜೆಸಿಬಿಯಿಂದ ಮನೆ ನೆಲಸಮ ಮಾಡಲಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ನೀವು ಪೋಲಿಸ್ ಜೆಸಿಪಿ ತಂದು ಹೆದರಿಸಿದ್ರೇ ನಾವು ಹೆದರಲ್ಲ. ನೀವು ಹಠ ಸಾಧಿಸುತ್ತಿದ್ದೀರಾ. ಹಠ ಸಾಧಿಸಿ ಏನ್ ಮಾಡ್ತೀರಾ ಎಂದು ಕೆಂಡಮಂಡಲರಾದರು.