SUDDIKSHANA KANNADA NEWS/ DAVANAGERE/ DATE:18-12-2023
ದಾವಣಗೆರೆ: ದಾವಣಗೆರೆಯಲ್ಲಿ ಡಿ.23 ಹಾಗೂ 24ರಂದು ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನದಲ್ಲಿ ಶಕ್ತಿ ಪ್ರದರ್ಶನ ಮಾಡುತ್ತೇವೆ. ಸುಮಾರು ಎರಡರಿಂದ ಮೂರು ಲಕ್ಷಕ್ಕೂ ಹೆಚ್ಚು ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಎಂಬಿಎ ಮೈದಾನದಲ್ಲಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಕ್ಷಕ್ಕೂ ಅಧಿಕ ಖುರ್ಚಿಗಳನ್ನು ಹಾಕಲಾಗಿದೆ. ಊಟ, ವಸತಿ ಸೇರಿದಂತೆ ಎಲ್ಲಾ ರೀತಿಯ ಸಿದ್ಧತೆ
ಮಾಡಿಕೊಳ್ಳಲಾಗುತ್ತಿದೆ. ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದವರು ಸಹ ವಸತಿ, ಊಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ವಚನಾನಂದ ಸ್ವಾಮೀಜಿ ಅವರು ತಿಳಿಸಿದ್ದಾರೆ. ಯಾವುದೇ ರೀತಿಯ ತೊಂದರೆ ಆಗದಂತೆ
ನಾವೂ ವ್ಯವಸ್ಥೆ ಮಾಡಿಕೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಲಕ್ಷಾಂತರ ಜನರು ಪಾಲ್ಗೊಳ್ಳುವುದರಿಂದ ಮುಂಜಾಗ್ರತಾ ಕ್ರಮವಾಗಿ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದ್ದು, ಇದಕ್ಕಾಗಿ ತಂಡಗಳನ್ನು ರಚಿಸಲಾಗಿದೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಿಂದಲೂ ವೀರಶೈವ ಲಿಂಗಾಯತ
ಸಮಾಜದವರು ಪಾಲ್ಗೊಳ್ಳುತ್ತಾರೆ. ಹಾಗಾಗಿ ನಮ್ಮ ನಿರೀಕ್ಷೆಗೂ ಹೆಚ್ಚಿನ ಸಮಾಜದ ಜನರು ಬರುವ ವಿಶ್ವಾಸ ಇದೆ ಎಂದು ಹೇಳಿದರು.
ರಾಷ್ಟ್ರಮಟ್ಟದ ಮಹಾಅಧಿವೇಶನ ಆಗಿರುವ ಕಾರಣಕ್ಕೆ ಬಂದವರೆಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇವೆ. ಅಧಿವೇಶನದ ಯಶಸ್ಸಿಗೆ ಶ್ರಮಿಸಲಾಗುವುದು ಎಂದು ಶಾಮನೂರು ಶಿವಶಂಕರಪ್ಪ ತಿಳಿಸಿದರು.