SUDDIKSHANA KANNADA NEWS/ DAVANAGERE/ DATE:13-03-2025
ದಾವಣಗೆರೆ: ಕಡ್ಡಾಯವಾಗಿ ಸ್ಪರ್ಧಾತ್ಮಕ ಪರೀಕ್ಷೆ ಓದುಗರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯದ ಒಳಗಡೆ ತಮ್ಮ ಮೊಬೈಲ್ಗಳನ್ನು ನಿಷೇಧಿಸಬೇಕು. ಶಾಖಾ ಗ್ರಂಥಾಲಯಗಳಲ್ಲಿ ಇ-ಗ್ರಂಥಾಲಯ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಗ್ರಂಥಾಲಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ 6ನೇ ಸಭೆ ಮತ್ತು ಪ್ರಸಕ್ತ ಸಾಲಿನ ಅಂದಾಜು ಆಯ-ವ್ಯಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿನ ಅಂದಾಜು ಆಯ-ವ್ಯಯಕ್ಕೆ ಮಂಜೂರಾತಿ ನೀಡಿದರು.
ಶೇಖರಪ್ಪ ನಗರದ ಕೊಳಚೆ ಪ್ರದೇಶದ ಗ್ರಂಥಾಲಯವನ್ನು 14 ನೇ ವಾರ್ಡಿನಲ್ಲಿರುವ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಲಾಗಿರುವ ಕಟ್ಟಡಕ್ಕೆ ಸ್ಥಳಾಂತರಿಸಬೇಕೆಂದರು. ನ್ಯಾಮತಿ ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ಪಡೆದು ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಹರಿಹರ ನಗರ ವ್ಯಾಪ್ತಿಯಲ್ಲಿ ಬರುವ ಹರಲಾಪುರ ಗ್ರಂಥಾಲಯಕ್ಕೆ ನಿವೇಶನ ಪಡೆಯಲು ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾದಿಂದ ಪಡೆದು ಕ್ರಮ ಕೈಗೊಳ್ಳುವಂತೆ ಅನುಮೋದನೆ ನೀಡಿದರು.
ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಓದುಗರಿಗಾಗಿ ಸಮರ್ಪಕ ವಿದ್ಯುತ್ ವ್ಯವಸ್ಥೆಗಾಗಿ ಎಲ್.ಇ.ಡಿ ಬದಲಾಗಿ ಟ್ಯೂಬಲೈಟ್ಗಳನ್ನು ಅಳವಡಿಸಬೇಕು. ಗ್ರಂಥಾಲಯಕ್ಕೆ ಬರುವ ಸ್ಪರ್ಧಾತ್ಮಕ ಓದುಗರಿಗಾಗಿ ಯಾವ ಯಾವ
ಪರೀಕ್ಷೇಗಳಿಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಓದುಗರಿಂದ ನಿರ್ದಿಷ್ಟ ಫಾರಂನಲ್ಲಿ ಮಾಹಿತಿ ಪಡೆದು ಪ್ರತ್ಯೇಕವಾಗಿ ಓದುಗರನ್ನು ವಿಂಗಡಣೆ ಮಾಡಿ ಓದಲು ವ್ಯವಸ್ಥೆಗೊಳಿಸಬೇಕು ಎಂದು ಸೂಚಿಸಿದರು.
ಗ್ರಂಥಾಲಯಕ್ಕೆ ಭೇಟಿ ನೀಡುವ ಎಲ್ಲ ಓದುಗರ ಪಾದರಕ್ಷೆಗಳನ್ನು ಇಡಲು ಸೂಕ್ತವಾದ ವ್ಯವಸ್ಥೆಯನ್ನು ಮಾಡಬೇಕು. ಸ್ಮಾರ್ಟ್ ಸಿಟಿ ವತಿಯಿಂದ ನಡೆಸುವ ಇ-ಲರ್ನಿಂಗ್ ಸೆಂಟರ್ಗಳಲ್ಲಿರುವ ಕಂಪ್ಯೂಟರ್ಗಳಿಗೆ ಪ್ರಸ್ತುತವಾಗಿರುವ 4 ಜಿಬಿ ರ್ಯಾಮಗಳನ್ನು 8 ಜಿಬಿಗೆ ರ್ಯಾಮ್ಗೆ ಹೆಚ್ಚಿಸುವಂತೆ ಸೂಚಿಸಿದರು. ಸ್ಪರ್ಧಾತ್ಮಕ ಓದುಗರ ವಿಭಾಗದಲ್ಲಿ ಪ್ರಸ್ತುತವಾಗಿರುವ ಆಸನಗಳನ್ನು ಬದಲಾಯಿಸಿ ಆರಾಮದಾಯಕ ಕುರ್ಚಿಗಳನ್ನು ಹಂತ ಹಂತವಾಗಿ ವ್ಯವಸ್ಥೆಗೊಳಿಸಬೇಕು ಎಂದರು.
ಹೆರಿಟೆಜ್ ಕಟ್ಟಡವಾಗಿರುವುದರಿಂದ ಈ ಕಟ್ಟಡದ ವಿನ್ಯಾಸವನ್ನು ಬದಲಾಯಿಸದೇ ಗ್ರಂಥಾಲಯದ ಆವರಣದಲ್ಲಿ ನೂತನವಾಗಿ ಯಾವುದೇ ಕಟ್ಟಡವನ್ನು ನಿರ್ಮಿಸದಂತೆ ಸೂಚನೆ ನೀಡಿದರು.
ಖಾಲಿ ಜಾಗಕ್ಕೆ ಫ್ಲೇವರ್ಸ್ ಅಳವಡಿಸಲು ಪ್ರಸ್ತುತ ಸಾಲಿನಲ್ಲಿ ಅಥವಾ ಮುಂದಿನ ಆರ್ಥಿಕ ವರ್ಷದಲ್ಲಿ ಕ್ರಮ ಕೈಗೊಳ್ಳಲು ಸೂಚಿಸಿದರು. ಆವರಣದಲ್ಲಿ ಓದುಗರಿಗಾಗಿ ಬೆಂಚಗಳನ್ನು ಅಳವಡಿಸುವಂತೆ ತಿಳಿಸಿದರು. ಓದುಗರ ವಸ್ತುಗಳನ್ನು ಇಡಲು ಪಿಜನ್ ರ್ಯಾಕ್ಸ್ ಗಳನ್ನು ಹೆಚ್ಚುವರಿಯಾಗಿ ಅಳವಡಿಸಿ ಪ್ರತಿ ಅಂತಸ್ತಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಸ್ಪರ್ಧಾತ್ಮಕ ವಿಭಾಗದ ಕಟ್ಟಡದಲ್ಲಿ ಪ್ರತಿ ಸೋಮವಾರ, ಎರಡನೇ ಮಂಗಳವಾರ ಹಾಗೂ ನಾಲ್ಕನೇ ಶನಿವಾರ ರಜೆಯ ಬದಲಾಗಿ ಗ್ರಂಥಾಲಯವನ್ನು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ತೆರೆಯಬೇಕೆಂದರು.
ನಂತರ ಮಧ್ಯಾಹ್ನ 3 ಗಂಟೆಗೆ ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಬರುವ ಶಾಖಾ ಗ್ರಂಥಾಲಯಗಳಾದ ಸಿಲ್ವರ್ ಜ್ಯೂಬಿಲಿ, ಆಂಜನೇಯ ಬಡಾವಣೆ ಹಾಗೂ ದೇವರಾಜ್ ಅರಸ್ ಬಡಾವಣೆಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು.
ಮಹಾನಗರಪಾಲಿಕೆ ಆಯುಕ್ತೆ ರೇಣುಕಾ, ಡಿಡಿಪಿಐ ಕೊಟ್ರೇಶ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರು, ದಾವಣಗೆರೆ ಉತ್ತರ ವಲಯದ ಬಿ.ಇ.ಓ, ಗ್ರಂಥಾಲಯದ ಅಧಿಕಾರಿ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.