ದಾವಣಗೆರೆ: ಎಲ್ಲರೂ ನವೆಂಬರ್ ಅಂತಿದ್ದಾರೆ. ನವೆಂಬರ್ ನಲ್ಲಿ ಏನೂ ಆಗಲ್ಲ. ಡಿಸೆಂಬರ್ ತಿಂಗಳು ಕಳೀಲಿ. ಮುಂದಿನ ವರ್ಷದ ಜನವರಿ ತಿಂಗಳಿನಲ್ಲಿ ಹೇಳ್ತೇನೆ. ಅಲ್ಲಿಯವರೆಗೆ ಕಾಯಿರಿ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಮತ್ತು ಡಿಸಿಎಂ ಡಿ. ಕೆ. ಶಿವಕುಮಾರ್ ಆಪ್ತ ಬಸವರಾಜ್ ವಿ. ಶಿವಗಂಗಾ ಹೊಸ ಬಾಂಬ್ ಸಿಡಿಸಿದ್ದಾರೆ.
READ ALSO THIS STORY: ಮುಜುಗರ ತರುವ ಹೇಳಿಕೆಗೆ ಹೈಕಮಾಂಡ್ ಬ್ರೇಕ್ ಹಾಕಲೇಬೇಕು: ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಬುಸುಗುಟ್ಟಿದ ಬಸವರಾಜ್ ಶಿವಗಂಗಾ!
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸೆಂಬರ್ ಮುಗಿದ ಮೇಲೆ ಮಾತನಾಡುತ್ತೇನೆ. ಆಗ ಡಿ. ಕೆ. ಶಿವಕುಮಾರ್ ಸಾಹೇಬರ ಬಗ್ಗೆ ಹೇಳ್ತೇನೆ. ನಮ್ಮಲ್ಲಿ ಯಾವ ಬಣವೂ ಇಲ್ಲ. ವಿರೋಧ ಪಕ್ಷದವರು ವಿರೋಧ ಮಾಡಲು ಇರುವುದು. ಅವರು ಪ್ರೀತಿ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
2033ಕ್ಕೆ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರೆ. ಈಗ ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ. ಗೊಂದಲ ಯಾಕೆ?. ಗೊಂದಲ ಮೂಡಿಸುವಂಥ ಹೇಳಿಕೆ ಯಾರೂ ನೀಡಬಾರದು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ನಾನೇನೂ ಮಾತನಾಡುವುದಿಲ್ಲ. ಡಿ. ಕೆ. ಶಿವಕುಮಾರ್ ಅವರಾಗಬಹುದು. ನಾವು ದೇವಸ್ಥಾನಕ್ಕೆ ಹೋದಾಗ ಉದ್ದ, ಅಡ್ಡ ನಾಮ ಹಚ್ಚುತ್ತೇವೆ. ಶ್ರೀಶೈಲಕ್ಕೆ ಹೋದಾಗ ಅಡ್ಡನಾಮ ಧರಿಸುತ್ತೇವೆ. ಮತ್ತೊಂದು ದೇವಾಲಯಕ್ಕೆ ಹೋದಾಗ ಉದ್ದ ನಾಮ ಹಚ್ಚುತ್ತೇವೆ. ಯಾರೂ ನಮಗೆ ನಾಮ ಹಾಕಲು ಆಗಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಆಗುವ ಅರ್ಹತೆ ಸತೀಶ್ ಜಾರಕಿಹೊಳಿ ಅವರಿಗೆ ಇದೆ. 2033ಕ್ಕೆ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ನೀಡುತ್ತೇನೆ. ಇನ್ನೂ ಸಾಕಷ್ಟು ಸಮಯ ಇದೆ. ಈ ಹೇಳಿಕೆಗೆ ನನ್ನ ಬೆಂಬಲವೂ ಇದೆ. ಯಾವುದೇ ತೆರೆಮರೆಯ ಕಸರತ್ತು ನಡೆದಿಲ್ಲ. ಸತೀಶ್ ಜಾರಕಿಹೊಳಿ ಅವರೇ ಹೇಳಿದ್ದಾರೆ. ಡಿ. ಕೆ. ಶಿವಕುಮಾರ್ ಅವರು ಪಕ್ಷ ಕಟ್ಟಿದ್ದಾರೆ, ಸರ್ಕಾರ ಬರಲು ಕಾರಣೀಕರ್ತರಾಗಿದ್ದಾರೆ ಎಂದಿದ್ದಾರೆ. ವೈಯಕ್ತಿಕ ತೀಟೆಗೆ ಕೆಲವೊಬ್ಬರು ಗೊಂದಲ ನೀಡುವಂಥ ಹೇಳಿಕೆ ನೀಡುತ್ತಾರೆ ಎಂದು ಗರಂ ಆದರು.
ನಾನು ಡಿಕೆ ಶಿವಕುಮಾರ್ ಅವರ ಕಟ್ಟಾ ಬೆಂಬಲಿಗ. ನಾನು ದೇವಾಲಯಕ್ಕೆ ಹೋಗುತ್ತೇವೆ. ನಮ್ಮ ನಂಬಿಕೆ, ಆಚರಣೆ ಮೇಲೆ ನಡೆಯುತ್ತದೆ. ಟೆಂಪಲ್ ರನ್ ಮಾಡಿದರೆ ಮುಖ್ಯಮಂತ್ರಿಯಾಗುತ್ತೇನೆ ಎಂದರೆ ಈಗಿನಿಂದಲೂ ನಾನು ಟೆಂಪಲ್ ರನ್ ಶುರು ಮಾಡುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಗೆ ವ್ಯಂಗ್ಯಭರಿತರಾಗಿ ಉತ್ತರಿಸಿದರು.