SUDDIKSHANA KANNADA NEWS/ DAVANAGERE/ DATE:07-10-2023
ದಾವಣಗೆರೆ (Davanagere): ನಗರದ ಕಲ್ಲೇಶ್ವರ ರೈಸ್ ಮಿಲ್ ನಲ್ಲಿ ವನ್ಯಜೀವಿ ಪತ್ತೆ ಪ್ರಕರಣ ಸಂಬಂಧ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಏಳು ಜನರ ವಿರುದ್ಧ ದಾಖಲಾಗಿದ್ದ ಎಫ್ ಐ ಆರ್ ಅನ್ನು ರಾಜ್ಯ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ. ಈ ಮೂಲಕ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ನಿರಾಳರಾಗಿದ್ದಾರೆ.
Read Also This Story:
Davanagere: ದಾವಣಗೆರೆಯಲ್ಲಿ ಡಿಸೆಂಬರ್ 23, 24ಕ್ಕೆ ದಾವಣಗೆರೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾದ 24 ನೇ ಅಧಿವೇಶನ: ಎರಡು ದಿನಗಳ ಕಾಲ ಆಯೋಜಿಸಲು ನಿರ್ಧರಿಸಿದ್ಯಾಕೆ…?
ಎಸ್. ಎಸ್. ಮಲ್ಲಿಕಾರ್ಜುನ್, ಎಸ್. ಎಸ್. ಗಣೇಶ್, ಕರಿಬಸಪ್ಪ, ಸಂಪನ್ನ ಮುತಾಲಿಕ್ ಸೇರಿದಂತೆ ಏಳು ಮಂದಿ ವಿರುದ್ಧ ಕಳೆದ ವರ್ಷದ ಡಿಸೆಂಬರ್ 18ರಂದು ಎಫ್ ಐ ಆರ್ ದಾಖಲಾಗಿತ್ತು. ನ್ಯಾಯಾಧೀಶರಾದ ನಾಗಪ್ರಸನ್ನ
ಅವರು ಎಫ್ ಐ ಆರ್ ಅನ್ನು ರದ್ದುಗೊಳಿಸಿ ಆದೇಶ ನೀಡಿದ್ದಾರೆ ಎಂದು ಸಚಿವರ ಪರ ವಕೀಲರಾದ ಹೆಚ್. ಎಸ್. ಚಂದ್ರಮೌಳಿ ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಸಿಸಿಬಿ ಪೊಲೀಸರು ಸೆಂಥಿಲ್ ಕುಮಾರ್ ಎಂಬಾತನನ್ನು ಬೆಂಗಳೂರಿನಲ್ಲಿ ಜಿಂಕೆ ಕೊಂಬು ಸೇರಿದಂತೆ ವನ್ಯಜೀವಿಗಳ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಿದ್ದರು. ಆ ಬಳಿಕ ಕಲ್ಲೇಶ್ವರ ರೈಸ್ ಮಿಲ್ ಗೆ ಕರೆದುಕೊಂಡು ಬಂದು ಸ್ಥಳ ಮಹಜರ್ ಮಾಡಿದ್ದರು. ಈ ವೇಳೆ ಪ್ರಾಣಿಗಳು ಪತ್ತೆಯಾಗಿದ್ದವು. ಈ ಸಂಬಂಧ ಎಸ್. ಎಸ್. ಮಲ್ಲಿಕಾರ್ಜುನ್, ಸಂಪನ್ನ ಮುತಾಲಿಕ್, ಕರಿಬಸಪ್ಪ ಸೇರಿದಂತೆ ಹಲವರ ಮೇಲೆ ಎಫ್ ಐ ಆರ್ ದಾಖಲಿಸಲಾಗಿತ್ತು.
ಈ ಪ್ರಕರಣವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿತ್ತು. ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ನೇತೃತ್ವದಲ್ಲಿ ಹೋರಾಟ ನಡೆಸಲಾಗಿತ್ತು. ಮಲ್ಲಿಕಾರ್ಜುನ್ ಸೇರಿದಂತೆ ಆರೋಪಿಗಳ ಬಂಧನಕ್ಕೆ ಒತ್ತಾಯಿಸಿತ್ತು. ಆಗಿನ ಸಿಎಂ ಬಸವರಾಜ್ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೂ ಮನವಿ ಸಲ್ಲಿಸಿತ್ತು. ನ್ಯಾಯಾಲಯದಲ್ಲಿಯೂ ಹೋರಾಟ ಮಾಡಿತ್ತು. ಆದ್ರೆ, ಅಂತಿಮವಾಗಿ ಎಫ್ ಐ ಆರ್ ಅನ್ನು ನ್ಯಾಯಾಲಯವು ರದ್ದುಗೊಳಿಸುವ ಮೂಲಕ ಆದೇಶಿಸಿದ್ದು, ಮಲ್ಲಿಕಾರ್ಜುನ್ ಅಭಿಮಾನಿಗಳು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದಾರೆ.