ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ಸಚಿವ- ಸಂಸದೆ ಅಪರೂಪದ ಜೋಡಿ”… “ಎಲ್ಲರ ಮನದಲಿ ನೆಲೆಸಿದೆ ನೋಡಿ”: ಜಿ. ಆರ್. ರಾಘವೇಂದ್ರ ಗೌಡ

On: September 21, 2025 6:46 PM
Follow Us:
ಜೋಡಿ
---Advertisement---

ಜಿ. ಆರ್. ರಾಘವೇಂದ್ರ ಗೌಡ, ಜಿಲ್ಲಾಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ದಾವಣಗೆರೆ ಜಿಲ್ಲಾ ಘಟಕ

ರಾಜ್ಯ ರಾಜಕಾರಣದಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹೆಗ್ಗುರುತು ಇತಿಹಾಸ ಪುಟದಲ್ಲಿ ದಾಖಲಾಗಿದೆ. ಅದೃಷ್ಟ ರಾಜಕಾರಣಿ ಎಂದೇ ಮಲ್ಲಿಕಾರ್ಜುನ್ ಅವರನ್ನು ಕರೆಯಲು ಒಂದು ಕಾರಣವಿದೆ. ಮಲ್ಲಣ್ಣ ಚುನಾವಣೆಯಲ್ಲಿ ಜಯಿಸಿದಾಗಲೆಲ್ಲಾ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಯಾವಾಗಲೂ ಜನರಿಗಾಗಿ ಮಲ್ಲಣ್ಣರ ಮನ ಮಿಡಿಯುತ್ತದೆ. ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ಜನಸೇವೆ ಮರೆಯದ ಅಭಿವೃದ್ಧಿ ಚಿಂತನೆಯುಳ್ಳ ನಾಯಕರು.

1999ರಿಂದಲೂ ಮಲ್ಲಿಕಾರ್ಜುನ್ ಅವರ ಚುನಾವಣೆಯಲ್ಲಿ ಪರದೆ ಹಿಂದೆ ಇದ್ದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸಕ್ರಿಯ ರಾಜಕಾರಣಕ್ಕೆ ಬಂದದ್ದು 2024ರಲ್ಲಿ. ಅದು ದಾವಣಗೆರೆ ಲೋಕಸಭೆಯ ಕಾಂಗ್ರೆಸ್ ಅಭ್ಯರ್ಥಿ ಆಗುವ ಮೂಲಕ. ಮಲ್ಲಿಕಾರ್ಜನ್ ಅವರನ್ನು 1999ರಲ್ಲಿ ವರಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಸುಮಾರು 25 ವರ್ಷಗಳ ಕಾಲ ಡಾ. ಶಾಮನೂರು ಶಿವಶಂಕರಪ್ಪ ಅಪ್ಪಾಜಿ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಎಲ್ಲಾ ಚುನಾವಣೆಗಳಲ್ಲಿಯೂ ಪ್ರಚಾರ ನಡೆಸಿದವರು. ಅದೇ ರೀತಿಯಲ್ಲಿ 2023ರಲ್ಲಿ ಮಲ್ಲಿಕಾರ್ಜುನ್ ಅವರು ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಲು ಪ್ರಮುಖ ಕಾರಣಕರ್ತರಾದವರು. ಹಗಲಿರುಳು ಎನ್ನದೇ ಪತಿ ಗೆಲುವಿಗಾಗಿ ಪ್ರಚಾರ ನಡೆಸಿ ಜನಮನ ಗೆದ್ದ ನಾಯಕಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು. ದಾವಣಗೆರೆಯಲ್ಲಿ ಅಪರೂಪದ ಜೋಡಿ. ಸಚಿವರು, ಸಂಸದರು ಜನರ ಮನದಲ್ಲಿ ನೆಲೆಸಿದೆ.

ಸಂಸತ್ ಇತಿಹಾಸದ ಹೆಗ್ಗುರುತು:

ರಾಷ್ಟ್ರ ರಾಜಕಾರಣದಲ್ಲಿ ದಾವಣಗೆರೆ ಲೋಕಸಭಾ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರದ್ದು ಅಚ್ಚಳಿಯದ ಹೆಸರು. ಯಾಕೆಂದರೆ ಇಲ್ಲಿಂದ ಗೆದ್ದು ದೆಹಲಿ ಗದ್ದುಗೆ ಏರಿದ ಪ್ರಥಮ ಮಹಿಳಾ ಸಂಸದೆ. ಲೋಕಸಭೆ ಚುನಾವಣೆಯಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ದಾವಣಗೆರೆಗೆ ಬಂದು ಬಿಜೆಪಿ ಅಭ್ಯರ್ಥಿ ಪರ ಭರ್ಜರಿ ಪ್ರಚಾರ ನಡೆಸಿ ಹೋಗಿದ್ದರು. ದೇಶಾದ್ಯಂತ ಮೋದಿ ಹವಾ ಇದ್ದರೂ ದಾವಣಗೆರೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್, ಎಸ್. ಎಸ್. ಮಲ್ಲಿಕಾರ್ಜುನ್ ಅವರ ಹವಾ ಇತ್ತು.

ಶಾಮನೂರು ಮನೆತನದಿಂದ ಬಂದರೂ ಪಕ್ಷಕ್ಕಾಗಿ, ಅಭ್ಯರ್ಥಿಗಳ ಗೆಲುವಿಗೆ ಓಡಾಡಿದ್ದವರು. ತೆರೆಮರೆಯಲ್ಲಿ ಇದ್ದರೂ ಪಕ್ಷಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದ ಇತಿಹಾಸದಲ್ಲಿ ಗೆದ್ದು ಹೋದ ಜನಪ್ರತಿನಿಧಿಗಳಿಗಿಂತ ಡಾ.
ಪ್ರಭಾ ಮಲ್ಲಿಕಾರ್ಜುನ್ ಅವರು ಭಿನ್ನ. ಕೇವಲ ಒಂದು ಕಾಲು ವರ್ಷದಲ್ಲಿಯೇ ಸಂಸತ್ ನಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದವರು. ಕರ್ನಾಟಕದ ಬಿಜೆಪಿ ಸಂಸದರು ಮಾತನಾಡುವುದೇ ಇಲ್ಲ ಎಂಬಂಥ ಸ್ಥಿತಿಯಲ್ಲಿ ಮೊದಲ ಬಾರಿಗೆ
ಸಂಸತ್ ಪ್ರವೇಶಿಸಿದರೂ ಬಿಜೆಪಿಯ ಘಟಾನುಘಟಿ ನಾಯಕರೇ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ ಅಪ್ರತಿಮ ನಾಯಕಿ.

ಡಾ. ಪ್ರಭಾ ಗೆಲುವಲ್ಲಿ ಎಸ್ಎಸ್ಎಂ ಪಾತ್ರ:

ಇನ್ನು ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿನಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಪಾತ್ರ ದೊಡ್ಡದು. ಪಕ್ಷದ ಕಾರ್ಯಕರ್ತರು, ಮುಖಂಡರ ಹುರಿದುಂಬಿಸಿ ಗೆಲುವಿಗೆ ಪ್ರಮುಖ ಕಾರಣಕರ್ತರಾದವರು. ಸಭೆ, ಗೆಲುವಿಗೆ ರಣವ್ಯೂಹ, ಪ್ರಚಾರದ ವೈಖರಿ ಸೇರಿದಂತೆ ಎಲ್ಲಾ ಉಸ್ತುವಾರಿಯನ್ನು ನೋಡಿಕೊಂಡಿದ್ದೇ ಮಲ್ಲಿಕಾರ್ಜುನ್ ಅವರು. ಚುನಾವಣಾ ಅಖಾಡದಲ್ಲಿ ಚಾಣಕ್ಯನಂತೆ ರಣವ್ಯೂಹ ರಚಿಸಿದ ಮಲ್ಲಿಕಾರ್ಜುನ್ ಅವರು ಕೇಸರಿಪಡೆ ಭದ್ರಕೋಟೆ ಧೂಳೀಪಟವಾಗಲು ಕಾರಣಕರ್ತರಾದರು. ಬರೋಬ್ಬರಿ 25 ವರ್ಷಗಳ ಬಳಿಕ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆಯ ಕಾಂಗ್ರೆಸ್ ವಿಜೃಂಭಿಸುವಂತೆ ಮಾಡಿದ ನಾಯಕ.

ಅಪರೂಪದ ಜೋಡಿ:

ದಾವಣಗೆರೆ ಇತಿಹಾಸದಲ್ಲಿ ಇದುವರೆಗೆ ಪತಿ ಸಚಿವ, ಪತ್ನಿ ಸಂಸದರಾಗಿದ್ದು ಇಲ್ಲ. ಇತಿಹಾಸ ಪುಟದಲ್ಲಿ ಇದೂ ಒಂದು ದಾಖಲೆಯೇ. ಸಚಿವರಾಗಿ ಮಲ್ಲಿಕಾರ್ಜುನ್ ಅವರು ಕೈಗೊಳ್ಳುತ್ತಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಕೇಂದ್ರ ಸರ್ಕಾರದ ವಿರುದ್ಧ ಸಮರ್ಥ ಹೋರಾಟ,
ರಾಜ್ಯಕ್ಕೆ ಆಗಿರುವ ಅನ್ಯಾಯ, ಜಿಲ್ಲೆಗೆ ಬರಬೇಕಿರುವ ಯೋಜನೆಗಳಿಗೆ ಅನುದಾನ, ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಒತ್ತಾಯಿಸುವ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮಲ್ಲಿಕಾರ್ಜುನ್ ಅವರೇ ರಾಜಕೀಯ ಗುರುಗಳು.

ಪತಿ ಯಶಸ್ಸಿನ ಹಿಂದೆ ಪತ್ನಿ:

ಎಸ್. ಎಸ್. ಮಲ್ಲಿಕಾರ್ಜುನ್ ಅವರ ಯಶಸ್ಸಿನ ಹಿಂದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇದ್ದಾರೆ ಎಂದು ಹೇಳುವುದರಲ್ಲಿ ಯಾವುದೇ ಅನುಮಾನ ಇಲ್ಲ. ಅದೇ ರೀತಿಯಲ್ಲಿ ಎದುರಿಸಿದ ಲೋಕಸಭೆ ಮೊದಲ ಚುನಾವಣೆಯಲ್ಲಿ ಜಯಭೇರಿ ಬಾರಿಸಲು ಮಲ್ಲಿಕಾರ್ಜುನ್ ಅವರ ಶ್ರಮವೂ ಕಾರಣ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಇಂದಿಗೂ ಪ್ರಭಾ ಮಲ್ಲಿಕಾರ್ಜುನ್ ಅವರದ್ದು ಮಗುವಿನಂತ ಮನಸ್ಸು. ಮನೆಗೆ ಹಾಗೂ ಕಚೇರಿಗೆ ಬರುವವರು ಎಷ್ಟು ಚಿಕ್ಕವರಾದರೂ ಆತ್ಮೀಯವಾಗಿ ಬರಮಾಡಿಕೊಂಡು ಮಾತನಾಡಿಸುವ, ಸಂಕಷ್ಟ ಆಲಿಸುವ ಪರಿ ಜನರ ಬಗ್ಗೆ ತೋರುವ ಕಾಳಜಿಗೆ ಸಾಕ್ಷಿ. ಅದೇ ರೀತಿಯಲ್ಲಿ ಹಿರಿಯರು, ಮಹಿಳೆಯರು, ಯುವಕರು, ಯುವತಿಯರು ಸೇರಿದಂತೆ ಎಲ್ಲಾ ವಯೋಮಾನದವರ ನೆಚ್ಚಿನ ನಾಯಕಿಯಾಗಿ ಹೊರಹೊಮ್ಮಿದ್ದಾರೆ.

ಮಲ್ಲಣ್ಣ ನಮಗೆ ಹೆಮ್ಮೆ:

ಯಾವಾಗಲೂ ಅಭಿವೃದ್ಧಿ ವಿಚಾರವಾಗಿ ಚಿಂತಿಸುವ ಮಲ್ಲಿಕಾರ್ಜುನ್ ಅವರು ದಾವಣಗೆರೆ ರಾಜಕಾರಣದಲ್ಲಿ ಅಭಿವೃದ್ಧಿ ಪರ ಚಿಂತನೆಯುಳ್ಳ ನಾಯಕ. ಕ್ರೀಡಾ ಸಚಿವರಾಗಿ, ತೋಟಗಾರಿಕೆ ಸಚಿವರಾಗಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಭ್ರಷ್ಟಾಚಾರ ರಹಿತ ಆಡಳಿತ, ಅರ್ಹ ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಿಕೊಡುವ, ಬಡವರು, ಹಿಂದುಳಿದವರು, ದಲಿತರು, ಶೋಷಿತರು ಸೇರಿದಂತೆ ಎಲ್ಲಾ ಸಮುದಾಯದವರ ಏಳಿಗೆಗೆ ಶ್ರಮಿಸಿದ, ಶ್ರಮಿಸುತ್ತಿರುವ ಮಾಣಿಕ್ಯ ಮಲ್ಲಿಕಾರ್ಜುನ್ ಅವರು.

ಕೇವಲ ಒಂದೂವರೆ ವರ್ಷದಲ್ಲಿ ಇಷ್ಟೊಂದು ಸಾಧನೆ ಮಾಡಿದ್ದಾರೆ ಪ್ರಭಾ ಮಲ್ಲಿಕಾರ್ಜುನ್. ಇನ್ನು ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಇಷ್ಟೊಂದು ಮಟ್ಟದಲ್ಲಿ ರಾಷ್ಟ್ರ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿರುವ ಶ್ರೇಯ ಸೇರುತ್ತದೆ. ಸಚಿವರು ಹಾಗೂ ಸಂಸದರ ಜೋಡಿ ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ತಮ್ಮದೇ ಆದ ಕನಸು ಕಂಡಿದ್ದು, ಒಂದೊಂದಾಗಿಯೇ ಈಡೇರುವ ಕಾಲ ಸನ್ನಿಹಿತವಾಗಿದೆ. ಇಂಥ ನಾಯಕತ್ವ ಪಡೆದ ನಾವೇ ಧನ್ಯರು.

ಹೃದಯವಂತಿಕೆ ಸಾಹುಕಾರ

ಹಲೋ..!ಅಣ್ಣಾ ನಾನು ಗೌಡ, ಹೇಳೋ ಗೌಡ. ಅಣ್ಣಾ ನಮ್ಮ ಅತ್ತೆಗೆ ಕೊರೊನಾ ಪಾಸಿಟಿವ್ ಬಂದಿದೆ. ಆಸ್ಪತ್ರೆಯಲ್ಲಿ ಬೆಡ್ ಸಿಗ್ತಾ ಇಲ್ಲ. ವೆಂಟಿಲೇಟರ್ ಪ್ರಾಬ್ಲಂ ಇದೆ ಅಣ್ಣಾ. ಗೌಡ ಒಂದು ಕೆಲಸ ಮಾಡು. ಹೈಟೆಕ್ ಹಾಸ್ಪಿಟಲ್ ಗೆ ಹೋಗು. ಅಲ್ಲಿ ನಾಗರಾಜ್ ಅಂತಾ ಇರ್ತಾರೆ. ನೀನೇ ಫೋನ್ ಮಾಡಿ ಕೊಡು, ಸ್ಯಾಚಿರೇಷನ್ ಎಷ್ಟು ಇದೆ? 50 ಇದೆ. ಹಾಗದ್ರೆ ಬೇಗ ಹೋಗಿ ಕಾಲ್ ಮಾಡಿ ಕೊಡು ಗೌಡ.

ಇದು ಕೊರೊನಾ ಟೈಮ್ ಅಲ್ಲಿ ಅನೇಕ ರೋಗಿಗಳಿಗೆ ಈ ರೀತಿ ಸಹಾಯ ಮಾಡಿದವರು ನಮ್ಮ ನೆಚ್ಚಿನ ಸಾಹುಕಾರರು ಎಸ್. ಎಸ್. ಮಲ್ಲಣ್ಣನವರು. ಅಧಿಕಾರ ಹೋಗುತ್ತೆ, ಬರುತ್ತೆ. ಆದ್ರೆ ಸಹಾಯ ಮಾಡೋ ಮನೋಭಾವನೆ ಇಟ್ಟುಕೊಳ್ಳಿ ಎಂದು ಯುವಕರಿಗೆ ಮಲ್ಲಣ್ಣರು ಸದಾ ಹೇಳುವಂತ ಮಾತು. ಕೆಲವರಿಗೆ ಮಾತುಗಳು ಒರಟು ಎನಿಸಬಹುದು. ಆದ್ರೆ, ಹೃದಯ ಮಾತ್ರ ಅಪ್ಪಟ ದಾವಣಗೆರೆ ಬೆಣ್ಣೆ ತರ.

ನಾನು ನೋಡಿದಂತೆ ಸುಳ್ಳು, ನಟನೆ ಮಾಡೋರು ಎರಡು ಎರಡು ದೋಣಿ ಮೇಲೆ ಕಾಲ್ ಇಡೋರ್ ನ ಸಾಹುಕಾರರು ಎಂದು ನಂಬೋಲ್ಲ. ತಪ್ಪು ಮಾಡಿದವರು ಯಾರೇ ಆದರೂ ಎದುರುಗಡೆನೇ ಮಂಗಳಾರತಿ ಕಟ್ಟಿಟ್ಟ ಬುತ್ತಿ. ಇದುನ್ನ ಏನಕ್ಕೆ ಹೇಳ್ದೆ ಅಂದ್ರೆ, ಇಂತವರಿಂದ ನಿಷ್ಠಾವಂತರಿಗೆ ಅನ್ಯಾಯ ಆಗಬಾರದು ಅನ್ನೋ ಮನೋಭಾವನೆ ಮಲ್ಲಣ್ಣ ಅವರದ್ದು. ಈ ವ್ಯಕ್ತಿತ್ವದಿಂದಲೇ ಎಲ್ಲರ ಮನ ಗೆದ್ದವರು ನೆಚ್ಚಿನ ಸಚಿವರು.

ಎಸ್. ಎಸ್. ಮಲ್ಲಿಕಾರ್ಜುನ್

ಎಸ್ ಎಸ್ ಮಲ್ಲಣ್ಣ ಅವರ ಬಗ್ಗೆ ಹೇಳುತ್ತಾ ಹೋದರೆ ಸಾವಿರಾರು ಕಥೆಗಳಿವೆ. ಲಕ್ಷಾಂತರ ಜನರಿಗೆ ಸಹಾಯ ಮಾಡಿದ ಘಟನೆಗಳಿವೆ. ಎಷ್ಟೇ ಹೊತ್ತಾದರೂ ಮಲ್ಲಣ್ಣ ಅವರು ಕರೆ ಸ್ವೀಕರಿಸಿ ಸ್ಪಂದಿಸುತ್ತಾರೆ. ಒಮ್ಮೆ ಮಲ್ಲಣ್ಣರ ಗಮನಕ್ಕೆ ಹೋದರೆ ಕೆಲಸ ಆಯಿತು ಎಂದೇ ಅರ್ಥ. ಅಧಿಕಾರ ಇಲ್ಲದಿರುವಾಗಲೂ ಮಲ್ಲಿಕಾರ್ಜುನ್ ಅವರು ಮಾಡುತ್ತೇನೆ ಎಂಬ ಭರವಸೆ ಕೊಟ್ಟರೆ ಕೆಲಸ ಆಯ್ತು ಎಂದೇ ಅರ್ಥ. ಅಷ್ಟು ಪವರ್ ಫುಲ್ ನಾಯಕರು.

ರೈತರ ಪರ, ಜನ ಸಾಮಾನ್ಯರ ಪರ ಎನ್ನೋದಕ್ಕೂ ನೂರಾರು ನಿದರ್ಶನಗಳಿವೆ. ಒಂದು ಘಟನೆ ಹೇಳ್ಬೇಕಂದ್ರೆ ಸಹಕಾರ ಸಪ್ತಾಹ ಕಾರ್ಯಕ್ರಮಕ್ಕೆ ಸಚಿವರಾದ ಎಸ್. ಎಸ್. ಮಲ್ಲಣ್ಣ ಅವರನ್ನು ಮುಖ್ಯ ಅತಿಥಿಯಾಗಿ ಕರೆದಿರುತ್ತಾರೆ. ಆ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ಸಚಿವರು ದಾವಣಗೆರೆ ಜಿಲ್ಲೆಗೆ ಡಿಸಿಸಿ ಬ್ಯಾಂಕ್ ಸ್ಥಾಪನೆ ಮಾಡುವುದಕ್ಕೆ ಎಷ್ಟು ಹೋರಾಟ ಮಾಡಲಾಯಿತು? ಯಾವೆಲ್ಲಾ ಅಡೆತಡೆಗಳು ಇದ್ದವು? ಹೇಗೆ ನಿಭಾಹಿಸಿ ಈ ಡಿಸಿಸಿ ಬ್ಯಾಂಕ್ ಸ್ಥಾಪನೆ ಬಗ್ಗೆ ನಡೆದ ಹೋರಾಟದ ಬಗ್ಗೆ ವಿವರವಾಗಿ ಆ ಕಾರ್ಯಕ್ರಮದಲ್ಲಿ ನೆರಿದಿದ್ದ ಜನತೆಗೆ ತಿಳಿಸಿದರು. ಅದರ ಉದ್ದೇಶದ ಬಗ್ಗೆನೂ ಸವಿಸ್ತಾರವಾಗಿ ಮಾತನಾಡಿದ್ದರು. ನಮ್ಮ ಜಿಲ್ಲೆಯ ರೈತರು ಸ್ವಾವಲಂಬಿಗಳಾಗಬೇಕು, ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆದು ಉಪಯೋಗಪಡೆದುಕೊಳ್ಳಬೇಕು ಅನ್ನೋದು ಮಲ್ಲಣ್ಣರ ಮಹದಾಸೆ ಆಗಿತ್ತು ಎಂದು ಅವರ ಮಾತಿನ ಶೈಲಿಯಲ್ಲಿ ಹೇಳಿದ್ದರು. ಹಾಗೆಯೇ ಅಧಿಕಾರದಲ್ಲಿರುವ ನೀವುಗಳು ಬರೀ ನಿಮ್ಮ ಸಂಬಂಧಿಕರಿಗೆ ಸಾಲ ಕೊಟ್ಟು ಬೇರೆಯವರಿಗೆ ಕೊಡದೆ ಇರುವುದು ಸರಿಯಲ್ಲ. ಎಲ್ಲಾ ರೈತರಿಗೆ ಸಾಲ ನೀಡಿ. ಅವ್ರು ಟ್ರ್ಯಾಕ್ಟರ್ ಹೊಲ ಮನಿ ಕೆಲಸಕ್ಕೆ ಬೇಕಾದ ಸಲಕರಣೆಗಳನ್ನು ತೆಗೆದುಕೊಳ್ಳುವುದಕ್ಕೆ ಅನುಕೂಲ ಮಾಡಿಕೊಡಿ. ಅವ್ರು ಮುನ್ನೆಲೆಗೆ ಬರಲಿ ಎಂದು ಕಿವಿಮಾತು ಹೇಳಿದ್ದರು. ಇಂಥ ಗುಣಗಳು ಮತ್ತು ಆಲೋಚನೆಗಳೇ ಎಸ್ ಎಸ್ ಮಲ್ಲಣ್ಣನವರನ್ನು “ಸಾಹುಕಾರ ”ಅನ್ನುವುದಕ್ಕೆ ಕಾರಣ.

ಮಲ್ಲಣ್ಣರ ಮಾನವೀಯತೆ:

ದಾವಣಗೆರೆ ಹೊರವಲಯದ ಜಿನ್ನೆಸಿಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿಯಾಗಿ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನೊಬ್ಬನನ್ನು ಆಸ್ಪತ್ರೆಗೆ ಸೇರಿಸಲು ಸಹಾಯ ಮಾಡುವ ಸಚಿವರಾದ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಮಾನವೀಯತೆ ಮೆರೆದರು. ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿ ಎಂದು ಹೇಳಿ ಬೇರೆ ಯಾರಾದರೂ ಹೊರಟು ಹೋಗುತ್ತಿದ್ದರು. ಆದ್ರೆ, ಮಲ್ಲಣ್ಣ ಅವರು ಗಾಯಗೊಂಡ ತಾಲೂಕಿನ ಅಮೃತ ನಗರದ ಮಂಜು ಎಂಬ ಬೈಕ್ ಸವಾರನಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದರು. ಇದು ಮಲ್ಲಣ್ಣರ ಬದ್ಧತೆಗೆ ಸಾಕ್ಷಿ.

ಶಾಮನೂರು ಶಿವಶಂಕರಪ್ಪ

ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಮಲ್ಲಿಕಾರ್ಜುನ್ ಎಂದರೆ ಮಾನವೀಯತೆಯ ಪ್ರತಿರೂಪ. ಸಾಮಾಜಿಕ ಕಾರ್ಯಗಳು, ಬಡವರಿಗೆ ಸೂರು, ನೀರಾವರಿ ಸೌಲಭ್ಯ, ದಾವಣಗೆರೆ ನಗರಕ್ಕೆ ಕುಡಿಯುವ ನೀರು, ಅಭಿವೃದ್ಧಿಗಾಗಿ ಮಾಡಿರುವ ತಪಸ್ಸು ವರ್ಣಿಸಲು ಪದಪುಂಜಗಳೇ ಸಾಲದು. ನಮ್ಮೆಲ್ಲರ ನೆಚ್ಚಿನ ಸಾಹುಕಾರರಾದ ಮಲ್ಲಣ್ಣ ಅವರು 58ನೇ ವರ್ಷದ ಜನುಮದಿನದ ಸಂಭ್ರಮದಲ್ಲಿದ್ದು, ರಾಜಕೀಯದಲ್ಲಿ ಮತ್ತಷ್ಟು ಉತ್ತುಂಗಕ್ಕೆ ಏರಲಿ, ಆಯಸ್ಸು, ಆರೋಗ್ಯ, ಜನಸೇವೆ ಮಾಡಲು ಮತ್ತಷ್ಟು ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಜಿ. ಆರ್. ರಾಘವೇಂದ್ರ ಗೌಡ, ಜಿಲ್ಲಾಧ್ಯಕ್ಷರು, ರಾಜೀವ್ ಗಾಂಧಿ ಪಂಚಾಯತ್ ರಾಜ್ ದಾವಣಗೆರೆ ಜಿಲ್ಲಾ ಘಟಕ

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

Leave a Comment