ಧ್ಯಾನ ಬದುಕಿನ ಸ್ವಾಸ್ಥ್ಯ ವೃದ್ಧಿಗೆ ಹಾಗೂ ಒತ್ತಡ ನಿವಾರಣೆಗೆ ಸಹಕಾರಿ. ಕುದಿಯುತ್ತಿರುವ ಮೈ-ಮನಗಳನ್ನು ಶಾಂತಗೊಳಿಸಿ, ನಮ್ಮೊಳಗಿನ ಉಲ್ಲಾಸವನ್ನು ಎಚ್ಚರಿಸುವ ಕ್ರಿಯೆಯಿದು.
ಏನನ್ನೂ ಮಾಡದೆ, ಅಂದರೆ ಮೆದುಳಿಗೂ ಕೆಲಸ ನೀಡದೆ, ಎಲ್ಲವನ್ನೂ ಬಿಟ್ಟು ಆಳವಾದ ವಿಶ್ರಾಂತಿಗೆ ಜಾರುವುದು, ಆದರೆ ನಿದ್ದೆ ಮಾಡದೆ ಜಾಗೃತ ಅವಸ್ಥೆಯಲ್ಲೇ ಇರುವುದು ಈ ಕ್ರಮದ ಮುಖ್ಯವಾದ ಅಂಗ. ಎಲ್ಲಕ್ಕಿಂತ ಮೊದಲು ನಮಗೆ ಅರಿವಿಗೆ ಬರುವ ಪ್ರಯೋಜನವೆಂದರೆ ಶರೀರದ ಚೈತನ್ಯ ಹೆಚ್ಚುವುದು. ನಮ್ಮ ಆಲೋಚನೆ, ಕ್ರಿಯೆ ಮತ್ತು ಉಸಿರಾಟಕ್ಕೂ ನಮ್ಮಲ್ಲಿ ಪ್ರವಹಿಸುವ ಚೈತನ್ಯಕ್ಕೂ ಗಾಢವಾದ ನಂಟಿದೆ. ಈ ಚೈತನ್ಯವೇ ನಮ್ಮಲ್ಲಿ ಧನಾತ್ಮಕ ಆಲೋಚನೆಗಳನ್ನು ಉಂಟು ಮಾಡುವುದು. ನಮ್ಮ ಆರೋಗ್ಯದಲ್ಲಿನ ಸುಧಾರಣೆ. ಅಂದರೆ ರಕ್ತದೊತ್ತಡ, ಮಧುಮೇಹ, ಹೃದಯದ ತೊಂದರೆಗಳು, ಜೀರ್ಣಾಂಗದ ಸಮಸ್ಯೆಗಳು, ಚರ್ಮದ ತೊಂದರೆಗಳು ಮುಂತಾದ ಹಲವಾರು ಸಮಸ್ಯೆಗಳಿಗೆ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳುವುದು ಪ್ರಬಲ ಔಷಧಿಯಾಗಿ ಕೆಲಸ ಮಾಡುತ್ತದೆ.
ದೇಹ ಮತ್ತು ಮನಸ್ಸುಗಳ ವಿಕಾರಗಳನ್ನು ಮಟ್ಟ ಹಾಕಲು ಇದು ಅಗತ್ಯ. ಬೇಡದ ಆಲೋಚನೆಗಳನ್ನು ತಡೆಯುತ್ತಿದ್ದಂತೆ ನಿದ್ದೆ ಸುಲಲಿತವಾಗಿ ಬರುತ್ತದೆ. ನಿದ್ರಾಹೀನತೆಯಿಂದ ದಾಂಗುಡಿ ಇಡುವ ಲೆಕ್ಕವಿಲ್ಲದಷ್ಟು ಸಮಸ್ಯೆಗಳನ್ನು ದೂರ ಇರಿಸಬಹುದು. ಮಾನಸಿಕ ಏಕಾಗ್ರತೆ, ನೆನಪಿನ ಶಕ್ತಿ ಹೆಚ್ಚಳ, ವಿವೇಕ ಜಾಗ್ರತೆಯಾಗುವುದು, ಯೋಚನೆಯಲ್ಲಿ ಸ್ಪಷ್ಟತೆ, ಗೊಂದಲ ದೂರವಾಗುವುದು, ಒತ್ತಡ ನಿವಾರಣೆ, ಸಂವಹನದಲ್ಲಿ ಸ್ಪಷ್ಟತೆ, ಹೊಸ ಆಲೋಚನೆಗಳು ಹುಟ್ಟುವುದು, ಕಲಿಯುವಲ್ಲಿನ ಚುರುಕುತನ, ಆತ್ಮವಿಶ್ವಾಸ ವೃದ್ಧಿ, ನಿರುಮ್ಮಳತೆ- ಇವೆಲ್ಲ ನಮ್ಮ ಮಾನಸಿಕ ಸ್ಥಿತಿ ಸುಧಾರಿಸಿದ್ದರಿಂದ ಆಗುವ ನೇರ ಪ್ರಯೋಜನಗಳು. Ad