SUDDIKSHANA KANNADA NEWS/ DAVANAGERE/ DATE:04-06-2023
ದಾವಣಗೆರೆ (DAVANAGERE): ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಜನಪರವಾಗಿ ಮಾಧ್ಯಮಗಳು ಕೆಲಸ ನಿರ್ವಹಿಸಬೇಕು. ಸರ್ಕಾರ ತಪ್ಪು ಮಾಡಿದಾಗ ಪ್ರತಿಭಟನೆಯ ರೀತಿಯಲ್ಲಿ ತೋರಿಸಬೇಕು. ಜನಸ್ನೇಹಿ ಕೆಲಸ ಮಾಡಿದಾಗ
ಮಾಧ್ಯಮಗಳು ಬೆಂಬಲಿಸುವ ಮೂಲಕ ಜನಪರವಾಗಿರಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಡಾ. ಪ್ರಭಾ ಮಲ್ಲಿಕಾರ್ಜುನ್ (PRABHA MALLIKARJUN) ಅವರು ಅಭಿಪ್ರಾಯಪಟ್ಟರು.
ನಗರದ ರಾಜಯೋಗಿನಿ ಬ್ರಹ್ಮಕುಮಾರಿ ಈಶ್ವರೀಯ ಸಮಾಜದ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಮಹಾಸಭೆ ಮತ್ತು ಪತ್ರಿಕಾದಿನಾಚರಣೆ, ಪತ್ರಿಕೋದ್ಯಮದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೆ ಪತ್ರಿಕೆಗಳಲ್ಲಿ ಯಾವುದೇ ಒಂದು ಸುದ್ದಿ ಪ್ರಕಟಿಸುವ ಮುನ್ನ ಅದರ ಸತ್ಯ ಅಸತ್ಯತೆಗಳ ಬಗ್ಗೆ ಪರಾಮರ್ಶಿಸಿ ದಾಖಲೆ ಸಮೇತ ವರದಿ (REPORT) ಪ್ರಕಟಿಸಲಾಗುತಿತ್ತು. ಈಗಲೂ ಆ ವ್ಯವಸ್ಥೆ ಇದೆಯೇ, ಅಂತಹ ನಿಯಮಗಳನ್ನು ಪಾಲನೆ ಮಾಡಲಾಗುತ್ತಿದೆಯೇ ಎಂಬ ಅನುಮಾನ ಮೂಡುವಂತಾಗಿದೆ. ಸಾರ್ವಜನಿಕರು ಪತ್ರಿಕೆಗಳ ಮೇಲೆ ಅಪಾರವಾದ ನಂಬಿಕೆ ಗೌರವ ಇಟ್ಟುಕೊಂಡಿದ್ದು ಸತ್ಯ ಸುದ್ದಿಗಳನ್ನು ನೀಡುವ ಮೂಲಕ ಆ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಹೇಳಿದರು.
ಪತ್ರಿಕೆಗಳಲ್ಲಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ, ಅಭಿವೃದ್ಧಿಪರ ಚಿಂತನೆಗಳನ್ನು ಬಿತ್ತುವ ಸುದ್ದಿ(NEWS)ಗಳ ಬಗ್ಗೆ ಹೆಚ್ಚು ಗಮನಹರಿಸಬೇಕು ಎನ್ನುವುದು ನನ್ನ ಅನಿಸಿಕೆ. ಪತ್ರಿಕೋದ್ಯಮ ಎನ್ನೋದು ವಿಶೇಷ ವಿಭಾಗ. ಇಲ್ಲಿ ಕಾರ್ಯನಿರ್ವಹಿಸುವುದು ಒಂದು ಪವಿತ್ರ ಕಾರ್ಯ. ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಮೂಲಕ, ಸಾರ್ವಜನಿಕರಿಗೆ ಉತ್ತಮ ಸಂದೇಶ ನೀಡಲು ಇರುವ ಮಾರ್ಗವೇ ಈ ಪತ್ರಿಕೋದ್ಯಮ ಎಂದರೆ ತಪ್ಪಾಗಲಾರದು
ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಬ್ಲಾಕ್ ಮೇಲ್ ಮಾಡುವುದು ಪತ್ರಿಕೋದ್ಯಮದ ಧರ್ಮವಲ್ಲ. ಪತ್ರಕರ್ತರಿಗೆ ಎಲ್ಲರ ಜೊತೆ ಸಂಬಂಧ ಇರಬೇಕು. ಕೇವಲ ವ್ಯವಹಾರಿಕಾವಾಗಿ ಇರಬಾರದು. ಸಮಾಜದಲ್ಲಿನ ಅಂಕುಡೊಂಕು ತಿದ್ದುವವರು ಮಾತ್ರ ನಿಜವಾದ ಪತ್ರಕರ್ತರು. ಮಾಧ್ಯಮ ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಸುಳ್ಳು ಹಾಗೂ ಕಾರ್ಯಮರೆತ ಪತ್ರಕರ್ತರಿಗೆ ಕಡಿವಾಣ ಹಾಕಬೇಕಾದ ಅವಶ್ಯಕತೆ ಇದೆ. ಇದಕ್ಕೆ ಕಡಿವಾಣ ಬೀಳದಿದ್ದರೆ ನೈಜ ಪತ್ರಕರ್ತರಿಗೆ ಉಳಿಗಾಲ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಯೂಟ್ಯೂಬ್, ವೆಬ್ ಚಾನೆಲ್ ಗಳ ಹೆಸರಿನಲ್ಲಿ ಇಂದು ಹೆಚ್ಚಿನ ಪತ್ರಕರ್ತರು ಹುಟ್ಟಿಕೊಳ್ಳುತ್ತಿದ್ದಾರೆ. ರಾತ್ರಿ ಯ್ಯೂಟೂಬ್ ಚಾನೆಲ್ ಶುರು ಮಾಡಿ, ಬೆಳಿಗ್ಗೆ ಲೋಗೊ ಹಿಡಿದು ಪ್ರಶ್ನೆ ಕೇಳಲು ಶುರು ಮಾಡೋರಿಗೆ ಮಾಧ್ಯಮರಂಗದ ಗಂಧಗಾಳಿಯೂ ಗೊತ್ತಿರುವುದಿಲ್ಲ ಎಂದರು.
ಪತ್ರಕರ್ತರಾದವರು ಸಮಾಜ ಪರಿವರ್ತನೆ ಮಾಡಬೇಕೆ ಹೊರತು, ಸಮಾಜ ಒಡೆಯಬಾರದು. ಆದರೆ, ಇಂದು ಸಮಾಜ ಒಡೆಯುವ ಪತ್ರಕರ್ತರ ಸಂಖ್ಯೆಯೂ ಹೆಚ್ಚುತ್ತಿದ್ದು ಅಂತವರನ್ನು ಆಚೆ ಕಳುಹಿಸಿ ನಮ್ಮ ಮನೆ ನಾವು ಶುದ್ಧಗೊಳಿಸಿಕೊಳ್ಳಬೇಕು. ಸಮಾಜ ಪತ್ರಕರ್ತರ ಬಗ್ಗೆ ಇಟ್ಟುಕೊಂಡಿರುವ ಕನಿಷ್ಠ ಗೌರವ ಕಾಪಾಡಬೇಕಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತರಾದ ಶಾಂತಕುಮಾರ್, ನಾಗರಾಜ್ ಬಡದಾಳ್, ಚಂದ್ರಹಾಸ್ ಹಿರೇಮಳಲಿ, ಆರ್. ಜಿ. ಹಳ್ಳಿ ನಾಗರಾಜ್, ಬಿ.ಎನ್. ಮಲ್ಲೇಶ್, ಎಲ್. ಮಂಜುನಾಥ್, ತಾರಾನಾಥ್, ವಿವೇಕ್ ಎಲ್. ಬದ್ಧಿ, ಸಾಯಿಪ್ರಸಾದ್ ಸೇರಿ ಮಹಿಳಾ ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತರಿಗೆ ಸಹಾಯಧನ ವಿತರಿಸಲಾಯಿತು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಕುಮಾರಿಯ ಲೀಲಾಜಿ ಮತ್ತು ಬಸವರಾಜ್ ರಾಜ ಋಷಿ ಸಾನಿಧ್ಯ ವಹಿಸಿದ್ದರು. ಉದ್ಯಮಿ ಅಥಣಿ ವೀರಣ್ಣ, ಜಿ.ಸಿ. ಲೋಕೇಶ್, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಕೆ.ಏಕಾಂತಪ್ಪ, ಸಾಮಾಜಿಕ ಚಿಂತಕ ಮಹಾಂತೇಶ್ ಒಣರೊಟ್ಟಿ, ದೇವರಮನೆ ಶಿವಕುಮಾರ್, ಕೆ.ಎಸ್. ಒಡೆಯರ್, ಕಾನಿಪಸಂ ಪ್ರಧಾನ ಕಾರ್ಯದರ್ಶಿ ಫಕೃದ್ದೀನ್ ಉಪಸ್ಥಿತರಿದ್ದರು. ರುದ್ರಾಕ್ಷಿ ಬಾಯಿ ಪ್ರಾರ್ಥಿಸಿದರು. ಬದರಿನಾಥ್ ವಂದಿಸಿದರು.