SUDDIKSHANA KANNADA NEWS/ DAVANAGERE/DATE:07_09_2025
ದಾವಣಗೆರೆ: ಶರಣ ಸಾಹಿತ್ಯವನ್ನು ಜಗತ್ತಿನಾದ್ಯಂತ ಪ್ರಚಾರ ಮಾಡಬೇಕೆಂಬ ಹಂಬಲ ಲಿಂಗೈಕ್ಯ ಹಿರಿಯ ಜಗದ್ಗುರುಗಳದಾಗಿತ್ತು, ಶಿವಕುಮಾರ ಶ್ರೀಗಳ ಶ್ರದ್ಧಾಂಜಲಿ ಕಾರ್ಯಕ್ರಮ, ಭಕ್ತಿ ಸಮರ್ಪಣೆ ಅದ್ಧೂರಿಯಲ್ಲ, ಅರ್ಥಪೂರ್ಣ ಕಾರ್ಯಕ್ರಮ ಎಂದು ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಶ್ಲಾಘಿಸಿದರು.
READ ALSO THIS STORY: ಚರಂಡಿ, ಕೊಳಚೆ ನೀರಿನಲ್ಲಿ ಗಣೇಶ ಮೂರ್ತಿ ವಿಸರ್ಜನೆ ಬೇಸರದ ಸಂಗತಿ: ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ 34ನೇ ಶ್ರದ್ಧಾಂಜಲಿ ಕಾರ್ಯಕ್ರಮದ ದಾಸೋಹಕ್ಕೆ ಭಕ್ತಾದಿಗಳಿಂದ ಭಕ್ತಿ ಸಮರ್ಪ ಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು. ಈ ಕಲ್ಯಾಣ ಮಂಟಪ ಕೇವಲ ಮದುವೆ ಕಾರ್ಯಗಳಿಗೆ ಸೀಮಿತವಾಗಬಾರದು. ಸಾಂಸ್ಕೃತಿಕ, ಸಾಹಿತ್ಯಿಕ ಕಾರ್ಯಕ್ರಮಗಳಿಗೂ ಬಳಕೆಯಾಗಬೇಕು. ಆ ಮೂಲಕ ಸಾಹಿತ್ಯಿಕ ಮನಸ್ಸು ಅರಳಿಸುವಂತಾಗಬೇಕು ಎಂದು ಹೇಳಿದರು.
ಮಕ್ಕಳ ನೃತ್ಯ ಪ್ರದರ್ಶನಗಳಿಗೆ ಮನಸೋತ ಶ್ರೀಗಳು, ಭಾಷಣಕ್ಕಿಂತ ಇಂತಹ ನೃತ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಉತ್ಸಾಹ ತುಂಬುತ್ತವೆ. ಮಕ್ಕಳ ನೃತ್ಯ ನಿಮಗೆಲ್ಲಾ ಸಂತೋಷ ತಂದಿರುವುದನ್ನು ಗಮನಿಸಿದ್ದೇನೆ. ನೆರೆದಿದ್ದವರೆಲ್ಲರ ಸಂತೋಷವೇ ನಮ್ಮ ಸಂತೋಷವಾಗಿದೆ ಎಂದು ಹೇಳಿದರು
ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಸಿರಿಗೆರೆ ಮಠ ಹಾಗೂ ಮಠದ ಭಕ್ತರು ಬೇರೆಲ್ಲಾ ಮಠಗಳಿಗೆ ಮಾದರಿಯಾಗಿದ್ದಾರೆ ಎಂದರು. ಸಮಾಜದ ಮುಖಂಡರಾದ ಮಾಗನೂರು ಸಂಗಮೇಶ ಗೌಡ್ರು, ಮಹಾಭಲೇಶ್ವರ ಗೌಡ್ರು, ಶ್ರೀನಿವಾಸ ಶಿವಗಂಗಾ, ಶಿವನಳ್ಳಿ ರಮೇಶ್, ಬಸವನಗೌಡ ಕಕ್ಕರಗೊಳ್ಳ, ಪಂಚಾಕ್ಷರಪ್ಪ, ಶಶಿಧರ ಹೆಮ್ಮನಬೇತೂರು, ಇಂದ್ರಪ್ಪ, ಗುಂಡುಗತ್ತಿ ಮಂಜುನಾಥ್ ಇತರರು ಉಪಸ್ಥಿತರಿದ್ದರು. ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೀರೇಶ ಒಡೇನಪುರ ಸ್ವಾಗತಿಸಿದರು. ಶಿಕ್ಷಕ ಜಗದೀಶ್ ಕೂಲಂಬಿ ನಿರೂಪಿಸಿದರು. ಮುಪ್ಪಣ್ಣ ವಂದಿಸಿದರು. ಕದಳಿ ಮತ್ತು ವಿನೂತನ ಮಹಿಳಾ ಸಮಾಜದವರು ಪ್ರಾರ್ಥಿಸಿದರು. ಸಿರಿಗೆರೆ ಅಕ್ಕನ ಬಳಗದವರು ವಚನ ಗೀತೆ ಗಾಯನ ನಡೆಸಿಕೊಟ್ಟರು.