SUDDIKSHANA KANNADA NEWS/ DAVANAGERE/ DATE:31-07-2023
ಶಿವಮೊಗ್ಗ(Shivamoga): ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ (McGann Teaching District Hospital)ಯ ವೈದ್ಯಕೀಯ ಅಧೀಕ್ಷಕರಾಗಿದ್ದ ಡಾ. ಶ್ರೀಧರ್ ಅವರನ್ನು ಎತ್ತಂಗಡಿ ಮಾಡಲಾಗಿದೆ. ಈ ಜಾಗಕ್ಕೆ ಡಾ. ಟಿ. ಡಿ. ತಿಮ್ಮಪ್ಪ ಅವರನ್ನು ನಿಯೋಜಿಸಲಾಗಿದ್ದು, ಅಧಿಕಾರ ಸ್ವೀಕರಿಸಿದ್ದಾರೆ.
ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ಇ ಎನ್ ಟಿ ವಿಭಾಗದ ಸಹ ಪ್ರಾಧ್ಯಾಪಕರಾಗಿ ಡಾ. ಟಿ. ಡಿ. ತಿಮ್ಮಪ್ಪ ಕಾರ್ಯನಿರ್ವಹಿಸುತ್ತಿದ್ದವರು. ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ(McGann Teaching District Hospital)ಯ ವೈದ್ಯಕೀಯ ಅಧೀಕ್ಷಕರ ಹುದ್ದೆಗೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅಧಿಕ ಪ್ರಭಾದಲ್ಲಿರಿಸಿ ಆದೇಶಿಸಲಾಗಿದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಇ ಎನ್ ಟಿ ವಿಭಾಗದ ಸಹ ಪ್ರಾಧ್ಯಾಪಕ ಶ್ರೀಧರ್ ಅವರನ್ನು ವೈದ್ಯಕೀಯ ಅಧೀಕ್ಷಕರ ಹುದ್ದೆ(McGann Teaching District Hospital)ಗೆ ಅಧಿಕ ಪ್ರಭಾದಲ್ಲಿರಿಸಿ ಆದೇಶಿಸಲಾಗಿರುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ -3 ಎ. ಶ್ರೀನಿಧಿ ಅವರು ತಿಳಿಸಿದ್ದಾರೆ. ಇನ್ನು ತಿಮ್ಮಪ್ಪ ಅವರು ಅಧೀಕ್ಷಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸಿಬ್ಬಂದಿ ಆತ್ಮೀಯವಾಗಿ ಸ್ವಾಗತ ಕೋರಿದರು.
ಈ ಸುದ್ದಿಯನ್ನೂ ಓದಿ:
Bhadra Dam: ರೈತರಿಗೆ ಖುಷಿ ಸುದ್ದಿ, 162 ಅಡಿ ದಾಟಿದ ಭದ್ರಾ ಡ್ಯಾಂ ನೀರಿನ ಸಂಗ್ರಹ: 7550 ಕ್ಯೂಸೆಕ್ ಒಳಹರಿವು, ಆಗಸ್ಟ್ ಮೊದಲ ವಾರದಲ್ಲಿ ನಾಲೆಗಳಿಗೆ ನೀರು…?
ಡಾ. ಶ್ರೀಧರ್ ಅವರು ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆ(McGann Teaching District Hospital)ಯ ವೈದ್ಯಕೀಯ ಅಧೀಕ್ಷಕರಾಗಿದ್ದಾಗಿನಿಂದಲೂ ಹಲವು ದೂರುಗಳು ಕೇಳಿ ಬಂದಿದ್ದವು. ಮೆಗ್ಗಾನ್ ಆಸ್ಪತ್ರೆಯ ಅವ್ಯವಸ್ಥೆಗಳು ಜಗಜ್ಜಾಹೀರಾಗಿದ್ದವು. ಇಲ್ಲಿನ ಲೋಪದೋಷ, ನಿರ್ಲಕ್ಷ್ಯ, ಬೇಜವಾಬ್ದಾರಿತನ ಸೇರಿದಂತೆ ಯಾವುದೇ ರೀತಿಯಲ್ಲಿಯೂ ಕ್ರಮ ಕೈಗೊಳ್ಳದ ಹಾಗೂ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿಯ ಜೊತೆ ಉತ್ತಮ ಸಂಹವನ, ಆಡಳಿತಾತ್ಮಕ ನಿರ್ಧಾರಗಳಿಂದ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಕಳ್ಳತನ, ಹೆರಿಗೆ ಆಸ್ಪತ್ರೆಯೊಳಗೆ ನೀರು ನುಗ್ಗಿದ್ದು, ಶಾರ್ಟ್ ಸರ್ಕ್ಯೂಟ್ ಸೇರಿದಂತೆ ಹತ್ತಾರು ಸಮಸ್ಯೆಗಳು ಇದ್ದವು. ಇನ್ನು ಸಚಿವರಾಗಿದ್ದ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಬಹಿರಂಗವಾಗಿ ಆರೋಪ ಮಾಡಿದ್ದರು, ಟೀಕಿಸಿದ್ದರು. ಸೇವೆಯ ಬಗ್ಗೆ ತುಂಬಾನೇ ಬೇಸರ ವ್ಯಕ್ತಪಡಿಸಿ ಅತೃಪ್ತಿ ವ್ಯಕ್ತಪಡಿಸಿದ್ದರು.
ಮೆಗ್ಗಾನ್ ಆಸ್ಪತ್ರೆಯೆಂದರೆ ಸಮಸ್ಯೆಗಳ ಆಗರ, ಅವ್ಯವಸ್ಥೆಯ ತಾಣ, ಇಲ್ಲಿ ಯಾವ ಚಿಕಿತ್ಸೆಯೂ ಸರಿಯಾಗಿ ಸಿಗುವುದಿಲ್ಲ, ರೋಗಿಗಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ, ಶ್ರೀಧರ್ ಅವರ ಕಾರ್ಯಕ್ಷಮತೆ ಸರಿಯಿರಲಿಲ್ಲ ಎಂದೆಲ್ಲಾ ಆರೋಪ ಮಾಡಿದ್ದರು.
ಕೊನೆಗೂ ರಾಜ್ಯ ಸರ್ಕಾರ ಶ್ರೀಧರ್ ಅವರನ್ನು ಎತ್ತಂಗಡಿ ಮಾಡಿ ಈ ಜಾಗಕ್ಕೆ ಈಗ ಟಿ. ಡಿ. ತಿಮ್ಮಪ್ಪರನ್ನು ನೇಮಕ ಮಾಡಿದ್ದು ಎಲ್ಲರಿಗೂ ಖುಷಿ ತಂದಿದೆ. ತಿಮ್ಮಪ್ಪರು ಈ ಎಲ್ಲಾ ಅವ್ಯವಸ್ಥೆಗಳನ್ನು ಸರಿಪಡಿಸುವ ಗುರುತರ ಜವಾಬ್ದಾರಿ
ಹೊತ್ತುಕೊಂಡಿದ್ದಾರೆ.
ಆರಗ ಜ್ಞಾನೇಂದ್ರ ಏನು ಹೇಳಿದ್ದರು..?
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ 130 ವೈದ್ಯಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರೂ ಶಿಫ್ಟ್ಗಳಲ್ಲಿಯೂ ಇವರು ಕೆಲಸ ಮಾಡಿದರೆ ರೋಗಿಗಳು ಹೊರಹೋಗುವ ಪ್ರಮೇಯವೇ ಎದುರಾಗದು. ನಾನು ಹಿಂದೆಯೂ ಸಹ ಸಾಕಷ್ಟು ಬಾರಿ ಈ ವಿಚಾರವನ್ನು ಸಭೆಗಳಲ್ಲಿ ಪ್ರಸ್ತಾಪ ಮಾಡಿದ್ದೇನೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದರು.
ನಾನು ತೀರ್ಥಹಳ್ಳಿಯವನು. ಅಲ್ಲಿ ಕೂತುಕೊಂಡ್ರೆ ಕರಾಳ ಸತ್ಯ ಬಯಲಾಗುತ್ತೆ. ಶಿವಮೊಗ್ಗದಲ್ಲಿ ಇಂತಹ ಆಸ್ಪತ್ರೆ ಇಟ್ಟುಕೊಂಡು ನೂರಾರು ಜನ ಆಂಬುಲೆನ್ಸ್ನಲ್ಲಿ ಪ್ರತಿದಿನ ಮಣಿಪಾಲ್ಗೆ ಹೋಗಬೇಕಾಗುತ್ತೆ. ಈ ತರಹ ಮಣಿಪಾಲ್ಗೆ ಹೋಗುತ್ತಿದ್ದಾರೆ ಎಂದರೆ ಏನರ್ಥ. ಶಿವಮೊಗ್ಗದಲ್ಲಿ ಒಳ್ಳೆಯ ಚಿಕಿತ್ಸೆ, ಆರೋಗ್ಯಕ್ಕೆ ಸಂಬಂಧಿಸಿದಂತೆ ರೋಗಿಗಳಿಗೆ ಸ್ಪಂದನೆ ಇಲ್ಲ ಎಂದರ್ಥವಲ್ಲವೇ ಎಂಬುದಾಗಿ ಸಭೆಯಲ್ಲಿಯೇ ಹೇಳಿದ್ದರು.
ಇಲ್ಲಿರುವ ವೈದ್ಯರಿರಬಹುದು, ಆಡಳಿತಾಧಿಕಾರಿಗಳಿರಬಹುದು, ಎಲ್ಲಾ ಸಿಬ್ಬಂದಿ ಸಹ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಿಲ್ಲಾಸ್ಪತ್ರೆಯು ಅವ್ಯವಸ್ಥೆ ಮತ್ತು ನಿರ್ಲಕ್ಷ್ಯತೆಯಿಂದಲೇ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಮಲೆನಾಡಿನ ಬಡವರ ಪಾಲಿನ ಹೈಟೆಕ್ ಸರಕಾರಿ ಆಸ್ಪತ್ರೆಯಾಗಿರುವ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಘಟನೆಗಳು ಒಂದೆರಡಲ್ಲ. ಒಳರೋಗಿಯಾಗಿದ್ದ ರೋಗಿಯು ಆವರಣದಲ್ಲಿ ಮೃತಪಟ್ಟಿದ್ದ. ಹೀಗೆ ಒಳರೋಗಿಯು ಜಿಲ್ಲಾಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದು ಯಾಕೆ, ಹೇಗೆ, ಏನಿದು ಮೆಗ್ಗಾನ್ ಜಿಲ್ಲಾಸ್ಪತ್ರೆಯ ಅವಾಂತರ ಎಂದು ಪ್ರಶ್ನಿಸಿದ್ದರು. ಕೇವಲ ಆರಗ ಜ್ಞಾನೇಂದ್ರ ಮಾತ್ರವಲ್ಲ, ಅನೇಕ ಜನಪ್ರತಿನಿಧಿಗಳದ್ದು ಇದೇ ಆರೋಪ ಆಗಿತ್ತು.
ಈಗ ಶ್ರೀಧರ್ ಅವರನ್ನು ಎತ್ತಂಗಡಿ ಮಾಡಿರುವುದರಿಂದ ಎಲ್ಲರಿಗೂ ಸಂತೋಷವಾಗುತ್ತಿದೆ. ಸಿಬ್ಬಂದಿ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಿರಲಿಲ್ಲ. ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಯಾವ ರೀತಿಯ ಗಟ್ಟಿ ನಿರ್ಧಾರ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದೂ ಸೇರಿದಂತೆ ಹಲವು ಆರೋಪಗಳಿದ್ದವು. ಒಟ್ಟಿನಲ್ಲಿ ಕೊನೆಗೂ ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಬೋಧನಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರನ್ನು ಬದಲಾವಣೆ ಮಾಡಲಾಗಿದ್ದು, ತಿಮ್ಮಪ್ಪರಿಂದ ಉತ್ತಮ ಕಾರ್ಯಗಳು ಆಗಲಿ, ಮೆಗ್ಗಾನ್ ನಲ್ಲಿನ ಎಲ್ಲಾ ಅವ್ಯವಸ್ಥೆಗಳು ಸರಿಯಾಗಲಿ ಎಂಬುದು ಎಲ್ಲರ ಆಶಯ.
McGann Teaching District Hospital News, McGann Teaching District Hospital Suddi, McGann Teaching District Hospital Transfer, McGann Teaching District Hospital News Updates, McGann Teaching District Hospital Suddi Flash