SUDDIKSHANA KANNADA NEWS/ DAVANAGERE/ DATE: 06-09-2023
ದಾವಣಗೆರೆ: ಮಾಯಕೊಂಡ (Mayakonda) ಪ್ರವಾಸಿ ಮಂದಿರದ ಹಿಂಭಾಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ 38 ಮಕ್ಕಳು ಅಸ್ವಸ್ಥರಾಗಿದ್ದು, ಈ ಪೈಕಿ 15 ವಿದ್ಯಾರ್ಥಿಗಳನ್ನು ದಾವಣಗೆರೆ ಸಿಜೆ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿದ ಮಾಯಕೊಂಡ (Mayakonda) ಶಾಸಕ ಕೆ. ಎಸ್. ಬಸವಂತಪ್ಪ ಅವರು, ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಹಾಗೂ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಹಾಸ್ಟೆಲ್ ನಲ್ಲಿನ ಕುಡಿಯುವ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಂದಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾದ ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಇಲ್ಲಿನ ಕುಡಿಯಲು ನೀರು ಯೋಗ್ಯವಾಗಿದೆಯೋ ಅಥವಾ ಇಲ್ಲವೋ ಎಂಬ ಕುರಿತಂತೆ ನೀರಿನ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದರು. ವರದಿ ಬಂದಿದ್ದು, ಕುಡಿಯಲು ನೀರು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಜೊತೆಗೆ ಫುಡ್ ಪಾಯಿಸನ್ ಆಗಿರುವುದೂ ಸಹ ಗೊತ್ತಾಗಿದ್ದು, ಈ ಎರಡು ಕಾರಣಗಳಿಂದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ:
Davanagere: ಸರ್ಕಾರ ತೀರ್ಮಾನಿಸಿದಂತೆ 100 ದಿನ ಭದ್ರಾ ನೀರು ಹರಿಸಲೇಬೇಕು ಎಂಬುದೂ ಸೇರಿದಂತೆ ಮತ್ತೆ ಯಾವೆಲ್ಲಾ ಬೇಡಿಕೆ ಇಟ್ಟಿದೆ ಭಾರತ ರೈತ ಒಕ್ಕೂಟ…?
ಸರ್ಕಾರಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ. ಹೂಕೋಸಿನ ಸಾಂಬಾರು ಮಾಡಲಾಗಿತ್ತು. ರಾತ್ರಿ ಈ ಸಾಂಬಾರು ಹಾಗೂ ಅನ್ನ ಊಟ ಮಾಡಿದ್ದರು. ಕಳೆದ ಭಾನುವಾರ ಚಿಕನ್ ಸಾಂಬಾರು ಮಾಡಲಾಗಿತ್ತು. ಆ ಸಾಂಬಾರನ್ನು ಅಂದು ಮತ್ತು ಮಾರನೇ ದಿನವೂ ವಿದ್ಯಾರ್ಥಿಗಳು ಸೇವಿಸಿದ್ದರು. ಜೊತೆಗೆ ರಾತ್ರಿ ಮಾಡಿದ್ದ ಹೂಕೋಸಿನ ಸಾಂಬಾರು ಹಾಗೂ ಬೆಳಿಗ್ಗೆ ಪುಳಿಯೊಗರೆ ಸೇವಿಸಿದ್ದ ವಿದ್ಯಾರ್ಥಿಗಳು ಇದ್ದಕ್ಕಿದ್ದಂತೆ ವಾಂತಿ, ಬೇಧಿ ಮಾಡಿಕೊಳ್ಳಲು ಶುರು ಮಾಡಿದರು. ತೀವ್ರ ತರನಾಗಿ ಸುಸ್ತಾದರು. ಸದ್ಯಕ್ಕೆ ಆರು ವಿದ್ಯಾರ್ಥಿಗಳನ್ನು ದಾವಣಗೆರೆಯ ಸಿ. ಜೆ. ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಬರಲಾಗಿದೆ.
ಉಳಿದ 32 ವಿದ್ಯಾರ್ಥಿಗಳಿಗೆ ಮಾಯಕೊಂಡ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿತೊಂಡಿದ್ದು, ಯಾವುದೇ ಅಪಾಯ ಇಲ್ಲ. ವಿಷಾಹಾರ ಹಾಗೂ ನೀರು ಸೇವನೆ ಕಾರಣದಿಂದ ವಿದ್ಯಾರ್ಥಿಗಳು ಸುಸ್ತಾಗಿದ್ದಾರೆ. ಸದ್ಯಕ್ಕೆ ಚಿಕಿತ್ಸೆ ನೀಡಲಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ. ಆರು ವಿದ್ಯಾರ್ಥಿಗಳು ಮಾತ್ರ ತೀವ್ರವಾಗಿ ಸುಸ್ತಾದ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ದಾವಣಗೆರೆಯ ಸಿ. ಜೆ. ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಈ ವಿದ್ಯಾರ್ಥಿಗಳು ಸಹ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಾಸಕರ ತರಾಟೆ:
ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತಿದ್ದಂತೆ ಮಾಯಕೊಂಡ(Mayakonda)ಕ್ಕೆ ಶಾಸಕ ಕೆ. ಎಸ್. ಬಸವಂತಪ್ಪ ಭೇಟಿ ನೀಡಿದರು. ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
ಹಾಸ್ಟೆಲ್ ನಲ್ಲಿನ ಊಟ ಸೇರಿದಂತೆ ಬೇರೆ ಯಾವೆಲ್ಲಾ ಸಮಸ್ಯೆಗಳಿಗೆ ಎಂಬ ಕುರಿತಂತೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದುಕೊಂಡರು.
ಇದೇ ವೇಳೆ ಹಾಸ್ಟೆಲ್ ವಾರ್ಡನ್, ಸಿಬ್ಬಂದಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಊಟ ಸರಿಯಿಲ್ಲ, ಕುಡಿಯಲು ನೀರು ಸಹ ಯೋಗ್ಯವಲ್ಲ ಎಂಬ ಮಾಹಿತಿ ಇದೆ. ಇಷ್ಟಾದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದು ಯಾಕೆ? ವಿದ್ಯಾರ್ಥಿಗಳ ಶಿಕ್ಷಣ, ಆರೋಗ್ಯ, ವಸತಿ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಿಕೊಡಬೇಕು. ಮಕ್ಕಳ ಜೀವದ ಜೊತೆಗೆ ಆಟವಾಡಿದರೆ ಸಹಿಸಲು ಆಗುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಹಾಸ್ಟೆಲ್ ವಾರ್ಡನ್ ವಿರುದ್ಧವೂ ಬೆಂಕಿಯುಗುಳಿದ ಬಸವಂತಪ್ಪ ಅವರು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಯಾಕೆ ಕೊಟ್ಟಿಲ್ಲ, ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಸಹ ಬಂದಿದೆ. ಇಷ್ಟಾದರೂ ಇಷ್ಟೊಂದು ದಿನ ಯಾಕೆ ನಿರ್ಲಕ್ಷ್ಯ ವಹಿಸಿದ್ದು? ವಿದ್ಯಾರ್ಥಿಗಳು ಊಟ ಸರಿ ಇರುವುದಿಲ್ಲ ಎಂಬ ಮಾಹಿತಿ ನೀಡಿದ್ದಾರೆ. ಸರ್ಕಾರವು ಎಲ್ಲಾ ರೀತಿಯ ನೆರವು ನೀಡಿದರೂ ನಿಮಗೆ ವಿದ್ಯಾರ್ಥಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಏನಾಗಿದೆ. ಕರ್ತವ್ಯ ಲೋಪ, ನಿರ್ಲಕ್ಷ್ಯ ವಹಿಸಿದರೆ ಸಹಿಸಲು ಸಾಧ್ಯವಿಲ್ಲ. ಕೆಲಸ ಮಾಡುವುದಿದ್ದರೆ ಇಲ್ಲಿರಿ, ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಾಸಕರು ಎಚ್ಚರಿಕೆ ನೀಡಿದರು.
ಪೋಷಕರ ಆಕ್ರೋಶ:
ವಿದ್ಯಾರ್ಥಿಗಳ ಜೀವದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ. ಹಾಸ್ಟೆಲ್ ನಲ್ಲಿ ಸೂಕ್ತ ವ್ಯವಸ್ಥೆ ಇರುತ್ತದೆ ಎಂಬ ಕಾರಣಕ್ಕೆ ಬಿಟ್ಟಿರುತ್ತೇವೆ. ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು
ಎಂದು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.