SUDDIKSHANA KANNADA NEWS/ DAVANAGERE/ DATE:03-05-2023
ದಾವಣಗೆರೆ(DAVANAGERE): ಬಂಡಾಯ ವಿಚಾರದಿಂದಲೇ ಅತ್ಯಂತ ಗಮನ ಸೆಳೆದಿರುವ ಎಸ್ಸಿ ಕ್ಷೇತ್ರ ಮಾಯಕೊಂಡ. ಕಾಂಗ್ರೆಸ್ (CONGRESS), ಬಿಜೆಪಿ (BJP) ಎರಡೂ ಪಕ್ಷಗಳಲ್ಲಿ ಬಂಡಾಯದ ಬಿರುಗಾಳಿಯೇ ಎದ್ದಿತ್ತು. ಬಂಡಾಯ ಶಮನ ಆಗಲೇ ಇಲ್ಲ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಪಕ್ಷೇತರ, ಬಿಜೆಪಿ (BJP) ಟಿಕೆಟ್ ಸಿಗದ ಕಾರಣ ಪುಷ್ಪಾ (PUSHPA)ವಾಗೀಶ್ ಸ್ವಾಮಿ ಇಂಡಿಪೆಂಡೆಂಟ್ ಆಗಿ ಸ್ಪರ್ಧಾ ಕಣದಲ್ಲಿದ್ದಾರೆ. ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ನಲ್ಲಿದ್ದ ಹೆಚ್. ಆನಂದಪ್ಪ ಅವರು ಜೆಡಿಎಸ್ (JDS) ಕದನಕಲಿ ಆಗಿದ್ದಾರೆ. ತೀವ್ರ ಬಂಡಾಯದಿಂದಲೇ ಈ ಬಾರಿ ಗಮನ ಸೆಳೆದಿರುವ ಕ್ಷೇತ್ರ ಇದು.
ಕಾಂಗ್ರೆಸ್ (CONGRESS) ನ ಟಿಕೆಟ್ ಆಕಾಂಕ್ಷಿಯಾಗಿದ್ದ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಟಿಕೆಟ್ ಸಿಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಈ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಬಸವಂತಪ್ಪ ಅವರನ್ನು ಸೋಲಿಸಲೇಬೇಕೆಂಬ ಹಠ ತೊಟ್ಟಿದ್ದಾರೆ. ಮಹಿಳೆಯ ತೇಜೋವಧೆ ಮಾಡಿರುವ ಇಂಥ ಅಭ್ಯರ್ಥಿ ಬೇಕಾ ಎಂದು ಪ್ರಶ್ನಿಸುತ್ತಾ ಮತಯಾಚಿಸುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಬಯಸಿದ್ದ ಹೆಚ್. ಆನಂದಪ್ಪರಿಗೆ ಸಿಗಲಿಲ್ಲ. ಹಾಗಾಗಿ, ಜೆಡಿಎಸ್ ಪಕ್ಷಕ್ಕೆ ಸೇರಿ ಕದನಕಲಿಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ (CONGRESS) ಅಭ್ಯರ್ಥಿ ವಿರುದ್ಧ ತೊಡೆತಟ್ಟಿದ್ದಾರೆ.
ಮತ್ತೊಂದೆಡೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಸ್ವೀಕೃತಿಯಾಗದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದ ವಾಗೀಶ್ ಸ್ವಾಮಿ ಅವರ ನಾಮಪತ್ರ ತಿರಸ್ಕೃತಗೊಂಡಿತ್ತು. ಆದ್ರೆ, ಅವರ ಪತ್ನಿ ಪುಷ್ಪಾ ಅವರ ಉಮೇದುವಾರಿಕೆ
ಪಾಸ್ ಆಗಿದೆ. ಈ ಕಾರಣಕ್ಕಾಗಿ ಪಕ್ಷೇತರ ಅಭ್ಯರ್ಥಿ ಪುಷ್ಪ ವಾಗೀಶ್ ಸ್ವಾಮಿ ತೀವ್ರ ಪೈಪೋಟಿ ನೀಡುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಭಾರೀ ವಿಶ್ವಾಸದೊಂದಿಗೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಆರ್. ಎಲ್.
ಶಿವಪ್ರಕಾಶ್ ಅವರದ್ದು ತೋರ್ಪಡಿಕೆಗಾಗಿ ಮಾಡಿದ ಪ್ರದರ್ಶನವಾಯ್ತು ಅಷ್ಟೇ. ಮಾತ್ರವಲ್ಲ, ಮೋದಿ ಹೇಳಿದರೂ ನಾಮಪತ್ರ ವಾಪಸ್ ಪಡೆಯಲ್ಲ ಎಂದವರು ಜಿಲ್ಲಾ ವರಿಷ್ಠರ ಮನವಿಗೆ ಮಣಿದು ಸ್ಪರ್ಧಾ ಕಣದಿಂದ ಹಿಂದೆ ಸರಿಯುವುದಾಗಿ ಹೇಳುವ ಮೂಲಕ ಬಂಡಾಯ ಕೇವಲ ಪ್ರದರ್ಶನಕ್ಕೆಂದಷ್ಟೇ ಎಂಬುದು ಸಾಬೀತಾಯಿತು. ಉಳಿದ 8 ಆಕಾಂಕ್ಷಿಗಳು ಸಹ ಇದಕ್ಕೆ ಸಮ್ಮತಿ ಸೂಚಿಸಿದರು. ಪುಷ್ಪಾ ವಾಗೀಶ್ ಸ್ವಾಮಿ ಸ್ಪರ್ಧೆ ಬಿಜೆಪಿಗೆ ತಲೆನೋವು ತಂದಿದೆ.
ಮಾಯಕೊಂಡ ಬಿಜೆಪಿ(BJP)ಯ ಭದ್ರಕೋಟೆ. ಕಳೆದ ಬಾರಿ ಪ್ರೊ. ಲಿಂಗಣ್ಣ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಬಾರಿ ಟಿಕೆಟ್ ನೀಡಿಲ್ಲ. ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ ಬಿ ಫಾರಂ ನೀಡಿದೆ. ಕಾಂಗ್ರೆಸ್ ನಿಂದ ಬಸವಂತಪ್ಪ ಸ್ಪರ್ಧಿಸಿದ್ದರೆ, ಜೆಡಿಎಸ್ ನಿಂದ ಹೆಚ್. ಆನಂದಪ್ಪ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಬಂಡಾಯ ಹೆಚ್ಚಾಗಿರುವ ಕಾರಣ ಮತದಾರ ಯಾರ ಕೈ ಹಿಡಿಯುತ್ತಾನೆ ಎಂಬುದು ನಿಗೂಢವಾಗಿದೆ. ಪುಷ್ಪಾರ ಸ್ಪರ್ಧೆ ಬಿಜೆಪಿಗೆ ನಡುಕ ಹುಟ್ಟಿಸಿದ್ದರೆ, ಹೆಚ್. ಆನಂದಪ್ಪ ಹಾಗೂ ಸವಿತಾ ಬಾಯಿ ಮಲ್ಲೇಶ್ ನಾಯ್ಕ್ ಕಾಂಗ್ರೆಸ್ (CONGRESS)ಗೆ ತಲೆನೋವು ತಂದಿದೆ. ಮಾಯಕೊಂಡ ಈಗ ಬಂಡಾಯದ ಬಿಸಿಯಿಂದ ಬೇಯುತ್ತಿರುವ ಕ್ಷೇತ್ರವಾಗಿದೆ.
1978 ರಲ್ಲಿ ನಡೆದ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾಗಮ್ಮ ಕೇಶವಮೂರ್ತಿ (NAGAMMA KESHAVAMURTHY), 1983 ರಲ್ಲಿ ಜನತಾ ಪಕ್ಷದ ಕೆ. ಜಿ. ಮಹೇಶ್ವರಪ್ಪ, 1985ರಲ್ಲಿ ಕಾಂಗ್ರೆಸ್ ನ ಕನ್ನಾವರ ಮಲ್ಲಪ್ಪ, 1989ರಲ್ಲಿ ನಾಗಮ್ಮ ಕೇಶವಮೂರ್ತಿ ಗೆದ್ದು ಬೀಗಿದ್ದರು. 1994, 1999, 2004ರ ಚುನಾವಣೆಯಲ್ಲಿ ಬಿಜೆಪಿಯ ಎಸ್. ಎ. ರವೀಂದ್ರನಾಥ್ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರು. 2008ರಲ್ಲಿ ಕಾಂಗ್ರೆಸ್ ನಲ್ಲಿದ್ದ ಬಸವರಾಜ್ ನಾಯ್ಕ್ ಬಿಜೆಪಿ ಸೇರಿ ಶಾಸಕರಾಗಿ ಆಯ್ಕೆಯಾಗಿದ್ದರು. 2013ರಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಕೆಜೆಪಿ ಕಟ್ಟಿದ ಕಾರಣ ಬಿಜೆಪಿಗೆ ಹಿನ್ನೆಡೆಯುಂಟಾಗಿ ಕೆ. ಶಿವಮೂರ್ತಿ ಜಯ ಗಳಿಸಿದ್ದರೆ, 2018ರಲ್ಲಿ ಪ್ರೊ. ಲಿಂಗಣ್ಣ ಗೆದ್ದಿದ್ದರು.
ಈ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯವರು ಹೆಚ್ಚಿದ್ದಾರೆ. ಬೋವಿ, ಬಂಜಾರ, ಎಸ್ಟಿ ಮತಗಳು ಇಲ್ಲಿವೆ. ಸಾಮಾನ್ಯ ಕ್ಷೇತ್ರವಾಗಿದ್ದ ಬಹುತೇಕ ಲಿಂಗಾಯತ ಸಮುದಾಯವರೇ ಇಲ್ಲಿ ಗೆದ್ದು ಬಂದಿರುವುದು ವಿಶೇಷ. ಎಸ್. ಎ. ರವೀಂದ್ರನಾಥ್ ಅವರು ಸ್ಪರ್ಧೆ ಮಾಡಿದ ಬಳಿಕ ಲಿಂಗಾಯತ ಸಮುದಾಯ ಬಿಜೆಪಿ ಬೆಂಬಲಿಸಿಕೊಂಡು ಬಂದಿತ್ತು. ಮಾಯಕೊಂಡಎಸ್ಸಿ ಕ್ಷೇತ್ರವಾದ ಬಳಿಕ 2008ರಲ್ಲಿ ದಾವಣಗೆರೆ ಉತ್ತರದತ್ತ ರವೀಂದ್ರನಾಥ್ ಮುಖ ಮಾಡಿದ್ದರು.
ಕ್ಷೇತ್ರ ವಿಶೇಷ:
ಚಾಲುಕ್ಯ – ಹೊಯ್ಸಳರು ಆಳಿದ ನಾಡು. ವಿಜಯನಗರ ಅರಸರ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇಲ್ಲಿನ ಶಾಸನ, ವೀರಗಲ್ಲುಗಳಿಂದ ಅನೇಕ ಐತಿಹಾಸಿಕ ಅಂಶಗಳು ತಿಳಿಯುತ್ತದೆ. ಶತ್ರುಗಳಿಂದ ಕೋಟೆ ರಕ್ಷಿಸುವಾಗ ಮಾಯಕೊಂಡದ ವೀರಮಹಿಳೆಯರು ಸಾಮೂಹಿಕವಾಗಿ ರಾಗಿಮುದ್ದೆ, ಬೆಣ್ಣೆ, ರೊಟ್ಟಿ, ಹಾಲು, ಮೊಸರನ್ನು ಕಾವಲು ಕಾಯುತ್ತಿದ್ದ ಸ್ಥಳಕ್ಕೆ ಬಂದು ಸೈನಿಕರಿಗೆ ಕೋಟೆ ಕಾವಲಿಗೆ ನೆರವಾಗುತ್ತಿದ್ದರಂತೆ. ಎಣ್ಣೆ, ಬಿಸಿನೀರು, ಅಂಬಲಿ ಕಾಯಿಸಿ ಶತ್ರುಗಳ ಮೇಲೆ ಸುರಿಯಲು ಸೈನಿಕರಿಗೆ ಸಹಾಯ ಮಾಡುತ್ತಿದ್ದರು ಎಂಬುದು ಇತಿಹಾಸದಲ್ಲಿ ಉಲ್ಲೇಖವಾಗಿದೆ.
ರಾಜರು ಆಳ್ವಿಕೆ ನಡೆಸಿದ ನೆಲ. ಹಿರೇಮದಕರಿ ನಾಯಕನಿಗೂ ಹರಪನಹಳ್ಳಿಯ ಪಾಳೆಗಾರ ಸೋಮಶೇಖರ ನಾಯಕನಿಗೂ ಘನಘೋರ ಯುದ್ಧ ನಡೆದು ಹಿರೇಮದಕರಿನಾಯಕ ಕದನದಲ್ಲಿ ಸಾಯುತ್ತಾನೆ. ಈಗಲೂ ಮಾಯಕೊಂಡದಲ್ಲಿ ಈತನ ಸಮಾಧಿ ಇದೆ. ಈ ಯುದ್ದವನ್ನು ಮಾಯಕೊಂಡ ಲಡಾಯಿ ಅಂತಾ ಈಗಲೂ ಕರೆಯಲಾಗುತ್ತದೆ.
ಒಟ್ಟು ಮತದಾರರು: 191300
ಪುರುಷ ಮತದಾರರು: 96491
ಮಹಿಳಾ ಮತದಾರರು: 94809
ಸೇವಾ ಮತದಾರರು:
80 ವರ್ಷ ಮೇಲ್ಪಟ್ಟ ಮತದಾರರು: 3816
ಒಟ್ಟು ಮತಗಟ್ಟೆಗಳು: 240