SUDDIKSHANA KANNADA NEWS/ DAVANAGERE/ DATE:14-04-2023
ದಾವಣಗೆರೆ(DAVANAGERE): ಮಾಯಕೊಂಡ ಕ್ಷೇತ್ರಕ್ಕೆ ಬಸವರಾಜ್ ನಾಯ್ಕ್ ಅವರಿಗೆ ಬಿಜೆಪಿ (BJP)ಟಿಕೆಟ್ (TICKET) ಘೋಷಿಸುತ್ತಿದ್ದಂತೆ ಆಕಾಂಕ್ಷಿಗಳ ಅಸಮಾಧಾನದ ಸ್ಫೋಟ ಭುಗಿಲೆದ್ದಿದೆ. ಹಾಲಿ ಶಾಸಕ ಹಾಗೂ ಮಾಜಿ ಶಾಸಕರನ್ನು ಹೊರತುಪಡಿಸಿ ಹೊಸಬರಿಗೆ ಟಿಕೆಟ್ (TICKET)ನೀಡುವ ಭರವಸೆ ನೀಡಿದ್ದ ವರಿಷ್ಠರ ನಿರೀಕ್ಷೆ ಹುಸಿಯಾಗಿದೆ. ಹಾಗಾಗಿ, ಹತ್ತು ಆಕಾಂಕ್ಷಿಗಳೆಲ್ಲರೂ ಸೇರಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಆರ್. ಎಲ್. ಶಿವಪ್ರಕಾಶ್ ಅವರನ್ನು ಬಂಡಾಯ (REBEL) ಅಭ್ಯರ್ಥಿಯಾಗಿ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.
ಬಸವರಾಜ್ ನಾಯ್ಕ್ ಪರವಾಗಿ ಯಾವುದೇ ಕಾರಣಕ್ಕೂ ನಾವೆಲ್ಲರೂ ಕೆಲಸ ಮಾಡುವುದಿಲ್ಲ. ಇನ್ನು ಕಾಲಾವಕಾಶ ಇದೆ. ಈಗ ನೀಡಿರುವ ಅಭ್ಯರ್ಥಿಗೆ ಬಿ ಫಾರಂ ನೀಡದೇ, ಹನ್ನೊಂದು ಆಕಾಂಕ್ಷಿಗಳ ಪೈಕಿ ಯಾರಿಗಾದರೂ ಕೊಟ್ಟರೆ ಸರಿ. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಶಿವಪ್ರಕಾಶ್ (SHIVAPRAKASH) ಕಣಕ್ಕಿಳಿಯುವುದು ಖಚಿತ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಯಕೊಂಡ ಬಿಜೆಪಿ (BJP) ಟಿಕೆಟ್ ಆಕಾಂಕ್ಷಿಗಳು ತಿಳಿಸಿದರು.
ಬಿಜೆಪಿ ರಾಜ್ಯ ಮಾಜಿ ಕಾರ್ಯದರ್ಶಿ ಹೆಚ್. ಕೆ. ಬಸವರಾಜ್ ಮಾತನಾಡಿ, ಹಳ್ಳಿಹಳ್ಳಿಗಳಲ್ಲಿ ಪ್ರಾಮಾಣಿಕವಾಗಿ ಪಕ್ಷ ಸಂಘಟಿಸುವ ಕೆಲಸ ಮಾಡಿದ್ದೇವೆ. ಹತ್ತು ಆಕಾಂಕ್ಷಿಗಳೆಲ್ಲರೂ ಒಟ್ಟಾಗಿದ್ದೇವೆ. ಹೊಸ ಮುಖಗಳಿಗೆ ಆದ್ಯತೆ
ನೀಡುವುದಾಗಿ ಹೇಳಿ ಕೊನೆ ಕ್ಷಣದಲ್ಲಿ ಜಿಲ್ಲಾ ವರಿಷ್ಠರ ಒತ್ತಡಕ್ಕೆ ಮಣಿದು ಬಸವರಾಜ್ ನಾಯ್ಕ್ ಗೆ ಟಿಕೆಟ್ ನೀಡಲಾಗಿದೆ. ಜಾತಿ ಸಮೀಕರಣದಲ್ಲಿಯೂ ಮಾದಿಗ ಸಮುದಾಯಕ್ಕೆ ಟಿಕೆಟ್ ನೀಡಬೇಕಿತ್ತು. ಛಲವಾದಿ, ಭೋವಿ,
ಬಂಜಾರ ಹಾಗೂ ಮಾದಿಗ ಸಮಾಜದ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಒಟ್ಟಾಗಿ ಸೇರಿಕೊಂಡು ಶಿವಪ್ರಕಾಶ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಗೆಲ್ಲಿಸಿ ಮತ್ತೆ ಬಿಜೆಪಿಗೆ ಸೇರ್ಪಡೆ ಮಾಡುತ್ತೇವೆ ಎಂದು ಹೇಳಿದರು.
ಬಸವರಾಜ್ ನಾಯ್ಕ್ ಗೆ ಟಿಕೆಟ್ ಕೊಟ್ಟಿರುವುದರಿಂದ ಬಿಜೆಪಿಯ ಎಲ್ಲಾ ಮುಖಂಡರು ಬೇಸರವಾಗಿದ್ದಾರೆ. ನಿಗಮ ಮಂಡಳಿಗೂ ಅವಕಾಶ ಕೊಡಲಾಗಿದೆ. 2018ರ ಚುನಾವಣೆಯಲ್ಲಿ ಬಿಜೆಪಿ ಬಿಟ್ಟು ಹೋಗಿ ಜೆಡಿಯುನಿಂದ ಸ್ಪರ್ಧಿಸಿ
ಪಕ್ಷಕ್ಕೆ ದ್ರೋಹ ಬಗೆದಿದ್ದರು. ಅಂಥವರಿಗೆ ನಿಗಮ ಮಂಡಳಿಗಳಲ್ಲಿ ಸ್ಥಾನ ನೀಡಲಾಗಿದೆ. ಇದುವರೆಗೆ ಬಸವರಾಜ್ ನಾಯ್ಕ್ ಕ್ಷೇತ್ರದಲ್ಲಿ ಯಾವುದೇ ಕೆಲಸ ಮಾಡಿಲ್ಲ. ಕಳೆದ ಐದು ವರ್ಷಗಳಿಂದ ಪಕ್ಷ ಸಂಘಟನೆಗೆ ಪ್ರಯತ್ನಿಸಿಲ್ಲ. ಇಂಥವರಿಗೆ
ಟಿಕೆಟ್ ನೀಡಿರುವುದು ಅನುಮಾನಕ್ಕೂ ಕಾರಣವಾಗಿದೆ. ಶಾಸಕ ಎಸ್. ಎ. ರವೀಂದ್ರನಾಥರ ಒತ್ತಡದ ಹಿನ್ನೆಲೆಯಲ್ಲಿ ಟಿಕೆಟ್ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದ ನಾವೆಲ್ಲರೂ ಏನು ಮಾಡಬೇಕು ಎಂದು ಪ್ರಶ್ನಿಸಿದರು.
ಪಕ್ಷದಲ್ಲಿ ಕಳೆದ 30 ವರ್ಷಗಳಿಂದ ಕೆಲಸ ಮಾಡಿದವರು ಇದ್ದಾರೆ. ನಾವೆಲ್ಲರೂ ಬಿಜೆಪಿ ಕಟ್ಟಾ ಕಾರ್ಯಕರ್ತರು ಮತ್ತು ಸಂಘಟಕರು. ಸಾಮಾಜಿಕ ನ್ಯಾಯದಡಿ ನ್ಯಾಯಕ್ಕಾಗಿ ಹೋರಾಟಕ್ಕೆ ಅಣಿಯಾಗಿದ್ದೇವೆ. ಹಿಂದಕ್ಕೆ ಸರಿಯುವ
ಪ್ರಶ್ನೆಯೇ ಇಲ್ಲ. ಹತ್ತು ಆಕಾಂಕ್ಷಿಗಳು ಒಟ್ಟಾಗಿ ಸೇರಿ ಮನೆ ಮನೆಗೆ ತೆರಳಿ ಮತಯಾಚಿಸುತ್ತೇವೆ. ಆದ್ರೆ, ಬೇರೆ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಚಾರ ನಡೆಸುತ್ತೇವೆ. ಮಾಯಕೊಂಡದಲ್ಲಿ ನಾವು ನಿರ್ಧರಿಸಿರುವ ಅಭ್ಯರ್ಥಿಯ ಗೆಲುವಿಗೆ ಪ್ರಾಮಾಣಿಕ
ಪ್ರಯತ್ನ ನಡೆಸುತ್ತೇವೆ ಎಂದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ. ಮಂಜಾನಾಯ್ಕ 2008ರಲ್ಲಿ ಕೊನೆ ಕ್ಷಣದಲ್ಲಿ ಕಾಂಗ್ರೆಸ್ (CONGRESS) ನಿಂದ ಬಿಜೆಪಿ (BJP)ಗೆ ಬಂದಿದ್ದ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ (TICKET) ನೀಡಲಾಗಿತ್ತು. ನಾವೆಲ್ಲರೂ ವರಿಷ್ಠರ ಆದೇಶದಂತೆ ಕೆಲಸ ಮಾಡಿದೆವು. ಯಾವುದೇ ವಿರೋಧ ಮಾಡಲಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಿ ಗೆಲ್ಲಿಸಿಕೊಂಡು ಬಂದೆವು. ಆದ್ರೆ, ಶಾಸಕರಾಗಿದ್ದ ಅವಧಿಯಲ್ಲಿ ಸರಿಯಾದ ಕೆಲಸ ಮಾಡಲಿಲ್ಲ. ಹೀಗಾಗಿಯೇ 2013ರಲ್ಲಿ ಬಿಜೆಪಿ ಹೀನಾಯ ಸ್ಥಿತಿಗೆ ಬಂದಿತ್ತು. ಬಸವರಾಜ್ ನಾಯ್ಕ್ ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದರು. ಆದ್ರೂ, ಈ ಬಾರಿ ಮತ್ತೆ ಬಸವರಾಜ್ ನಾಯ್ಕ್ ಗೆ ಟಿಕೆಟ್ ನೀಡಿರುವುದು ಸರಿಯಾದ ಕ್ರಮವಲ್ಲ. ಜನರ ವಿಶ್ವಾಸ ಗಳಿಸಿಲ್ಲ. ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಂಡಿಲ್ಲ. ಆದ್ರೂ, ಪಕ್ಷಕ್ಕೆ ದುಡಿದವರನ್ನು ಬಿಟ್ಟು ಚುನಾವಣೆ (ELECTIION) ವೇಳೆ ಬಂದವರಿಗೆ ಟಿಕೆಟ್ ನೀಡಲಾಗಿದೆ ಎಂದು ತಿಳಿಸಿದರು.
ಮಾಯಕೊಂಡ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಕ್ಷಕ್ಕಾಗಿ ದುಡಿದಿದ್ದಾರೆ. ನಮ್ಮದೇನಿದ್ದರೂ ಒಂದೇ. ಪಕ್ಷ ಉಳಿಯಬೇಕು. ನಿಷ್ಠಾವಂತರಿಗೆ ಟಿಕೆಟ್ ನೀಡಬೇಕಿತ್ತು. ಆರು ತಿಂಗಳ ಮುಂಚೆಯೇ ಕ್ಷೇತ್ರದಲ್ಲಿ ಓಡಾಡಿ, ಪ್ರಚಾರ ಮಾಡಿ ಎಂದು ಹೇಳಲಾಗಿತ್ತು. ಅದರಂತೆ ನಾವೆಲ್ಲರೂ ಓಡಾಡಿದ್ದೇವೆ. ಕೊನೆ ಕ್ಷಣದಲ್ಲಿ ಯಾಕೆ ಬಸವರಾಜ್ ನಾಯ್ಕ್ ಗೆ ಟಿಕೆಟ್ ನೀಡಲಾಯಿತು ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಗೋಷ್ಠಿಯಲ್ಲಿ ಬಿಜೆಪಿ ಎಸ್ಪಿ ಮೋರ್ಚಾ ಜಿಲ್ಲಾಧ್ಯಕ್ಷ ಎನ್. ಹನುಮಂತನಾಯ್ಕ, ರಮೇಶ್ ನಾಯ್ಕ, ಆಲೂರು ನಿಂಗರಾಜ್, ಬಿಜೆಪಿ ಮುಖಂಡರಾದ ಕಲಿಂಗಪ್ಪ, ಮೋಹನ್ ಸೇರಿದಂತೆ ಇತರರು ಹಾಜರಿದ್ದರು.