SUDDIKSHANA KANNADA NEWS/DAVANAGERE/DATE:29_10_2025
ದಾವಣಗೆರೆ: ಲಿಂಗಾಯತ ಪಂಚಮಸಾಲಿ ಸಮಾಜದ ದಾವಣಗೆರೆ ಜಿಲ್ಲೆಯ ಹರಿಹರ ಪೀಠ ಮತ್ತು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: RRB NTPC ಪದವೀಧರ ನೇಮಕಾತಿ: 5,810 ಸ್ಟೇಷನ್ ಮಾಸ್ಟರ್, ಕ್ಲರ್ಕ್ ಮತ್ತು ಇತರ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ದಾವಣಗೆರೆಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಪಾದಯಾತ್ರೆ ಮೂಲಕ ಆಗಮಿಸಿದ್ದ ವೇಳೆ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಸಾಥ್ ಕೊಟ್ಟಿದ್ದರು. ಆ ಬಳಿ ಉಭಯ ಮಠಗಳ ಪೀಠಾಧಿಪತಿಗಳ ನಡುವೆ ಸಂಬಂಧ ಹಳಸಿತ್ತು. ಬಹಿರಂಗವಾಗಿಯೇ ಹಲವು ಬಾರಿ ಹೇಳಿಕೆಗಳು ಬೆಂಬಲಿಗರಿಂದ ಬಂದಿದ್ದವು. ಶ್ರೀಗಳ ನಡುವೆ ಹೇಳಿಕೊಳ್ಳುವಂಥ ಬಾಂಧವ್ಯ ಇರಲಿಲ್ಲ. ಆ ಬಳಿಕ ಎರಡೂ ಪೀಠಗಳ ಒಗ್ಗೂಡಿಸುವಿಕೆ ಕಾರ್ಯ ಮುಂದುವರಿಯುತ್ತಲೇ ಇತ್ತು.
ಕೂಡಲಸಂಗಮದ ಪಂಚಮಸಾಲಿ ಪೀಠದಿಂದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರನ್ನು ಹುನಗುಂದ ಶಾಸಕ ವಿಜಯಾನಂದ ಕಾಶಂಪ್ಪನವರ್ ಮತ್ತವರ ಟೀಂ ಹೊರ ಹಾಕುತ್ತಿದ್ದಂತೆ ಶ್ರೀಗಳು ಬೇರೆ ಪೀಠ ಮಾಡುವುದಾಗಿ ಘೋಷಿಸಿದ್ದರು. ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಶ್ರೀಗಳಿಗೆ ಕೈ ಜೋಡಿಸಿದ್ದರು.
ಈ ಬೆಳವಣಿಗೆ ಆದ ಬಳಿಕ ಬಾಗಲಕೋಟೆಯಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜವು ವೀರರಾಣಿ ಕಿತ್ತೂರು ಚೆನ್ನಮ್ಮನ 247ನೇ ಜಯಂತಿ, 201 ನೇ ವಿಜಯೋತ್ಸವ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾರೋಟಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಪಂಚಮಸಾಲಿ ಶ್ರೀಗಳು ಒಗ್ಗಟ್ಟಿನ ಮಂತ್ರ ಜಪಿಸಿದರು. ಉಭಯ ಸ್ವಾಮೀಜಿಗಳಿಂದ ಒಗ್ಗಟ್ಟಿನ ಮಂತ್ರ,ಶಕ್ತಿ ಪ್ರದರ್ಶನವಾಗಿದ್ದು, ವಿರೋಧಿಗಳಿಗೆ ಭಾರೀ ಸಂದೇಶ ನೀಡಿದ್ದಾರೆ.
ಹರಿಹರ ಪಂಚಮಸಾಲಿ ಪೀಠಾಧ್ಯಕ್ಷ ವಚನಾನಂದ ಶ್ರೀ ಹಾಗೂ ಕೂಡಲಸಂಗಮ ಪಂಚಮಸಾಲಿ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಜಂಟಿಯಾಗಿ ಭಾಗಿಯಾಗುತ್ತಿದ್ದಂತೆ ಭಕ್ತಾದಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.
ಬಾಗಲಕೋಟೆಯ ನಗರದ ಬೀಳೂರ ಗುರುಬಸವ ಅಜ್ಜನವರ ಗುಡಿಯಿಂದ ಮೆರವಣಿಗೆ ಆರಂಭಗೊಂಡಿತು. ಚನ್ನಮ್ಮಾಜಿ ಜಯಂತ್ಯೋತ್ಸವದ ಮೆರವಣಿಗೆಯಲ್ಲಿ ಪಂಚಮಸಾಲಿ ಪೀಠಾಧಿಪತಿಗಳು ಭಾಗಿಯಾದರು. ಬಾಗಲಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ವೀರರಾಣಿ ಚನ್ನಮ್ಮಾಜಿ ಭಾವಚಿತ್ರ ಮೆರವಣಿಗೆಗೆ ಕುಂಭ ಮೆರವಣಿಗೆ ಜನಪದ ಕಲಾ ತಂಡಗಳು ಮತ್ತಷ್ಟು ಮೆರಗು ನೀಡಿದವು.
ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ , ಸಂಸದರಾದ ಪಿ.ಸಿ. ಗದ್ದಿಗೌಡರು, ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲರು, ಸಮುದಾಯದ ಬಾಂಧವರು ಉಪಸ್ಥಿತರಿದ್ದರು.









