ಮಂಗಳೂರು/ಉಡುಪಿ : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎರಡು ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪೊಳಲಿ ಸಮೀಪದ ಅಮ್ಮುಂಜೆ ಗ್ರಾಮದ ಸುಮಾರು ಎಂಟು ಮನೆಗಳಿಗೆ ನದಿ ನೀರು ನುಗ್ಗಿದೆ. ತಹಸೀಲ್ದಾರ್ ಅರ್ಚನಾ ಭಟ್ ಅವರ ನಿರ್ದೇಶನದಂತೆ ತಾಲೂಕು ಆಡಳಿತ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳ ನೆರವಿನಿಂದ ಎಲ್ಲ ಕುಟುಂಬಗಳನ್ನು ರಕ್ಷಿಸಲಾಗುತ್ತಿದೆ. ನೀರಿನ ಮೇಲೆ ಕಸದ ರಾಶಿಗಳು ತೇಲುತ್ತಿದ್ದು ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ಅರ್ಚನಾ ಭಟ್ ಹೇಳಿದ್ದಾರೆ. ಇದಲ್ಲದೆ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯು ಬಿದ್ದಿರುವ ವಿದ್ಯುತ್ ಕಂಬಗಳು ಮತ್ತು ಕೇಬಲ್ಗಳನ್ನು ತೆರವುಗೊಳಿಸಲು ಹೆಚ್ಚುವರಿ ಜನರನ್ನು ನಿಯೋಜಿಸಿದೆ.
ಇನ್ನೂ ಉಡುಪಿ ಜಿಲ್ಲೆಯಲ್ಲಿ ಕಳೆದ 72 ಗಂಟೆಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಾರ್ಕಳ ತಾಲೂಕಿನಲ್ಲಿ ಬುಧವಾರ ಭಾರಿ ಮಳೆಯಾಗಿದ್ದು, ಶಾಂಭವಿ ಸೇರಿದಂತೆ ಹಲವು ನದಿಗಳು ತುಂಬಿ ಹರಿಯುತ್ತಿವೆ. 24 ಗಂಟೆಗಳ ಅವಧಿಯಲ್ಲಿ ಪಶ್ಚಿಮಘಟ್ಟದ ತಪ್ಪಲಿನ ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ಒಟ್ಟು 319.5 ಮಿ.ಮೀ ಮಳೆಯಾಗಿದ್ದರೆ, ಕಾರ್ಕಳದ ಸಾಣೂರಿನಲ್ಲಿ 289.5 ಮಿ.ಮೀ, ಕುಂದಾಪುರದ ಮಡಾಮಕ್ಕಿಯಲ್ಲಿ 278.5 ಮಿ.ಮೀ, ಶಿರ್ತಾಡಿಯಲ್ಲಿ 269 ಮಿ.ಮೀ. ಮಳೆಯಾಗಿದೆ. ಕಾರ್ಕಳದ ಸಾಣೂರಿನಿಂದ ನಿಟ್ಟೆ, ಬೋಳ, ಮುಂಡ್ಕೂರು ಗ್ರಾಮಗಳಿಗೆ ಹರಿಯುವ ಶಾಂಭವಿ ನದಿ ಇತ್ತೀಚಿನ ವರ್ಷಗಳಲ್ಲಿ ಹಿಂದೆಂದೂ ಕಂಡರಿಯದ ಪ್ರವಾಹವನ್ನು ಎದುರಿಸುತ್ತಿದೆ.
ಹಲವು ಮನೆಗಳು, ಅಂಗಡಿಗಳು, ಗೃಹ ಕೈಗಾರಿಕೆಗಳು ಜಲಾವೃತಗೊಂಡಿವೆ. ಮುಂಡ್ಕೂರು ಗ್ರಾಮ ಪಂಚಾಯಿತಿ ಸದಸ್ಯರಾದ ಅಶೋಕ್ ಶೆಟ್ಟಿ, ಸುರೇಶ್ ಶೆಟ್ಟಿ, ಭಾಸ್ಕರ ಶೆಟ್ಟಿ ಅವರ ಮನೆಗಳು ಧ್ವಂಸಗೊಂಡಿವೆ. ಸಾವಿರಕ್ಕೂ ಹೆಚ್ಚು ತೆಂಗಿನ ಮರಗಳು ಧರೆಗುರುಳಿವೆ ಎಂದು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡದ ಫಲ್ಗುಣಿ ಮತ್ತು ಉಡುಪಿ ಜಿಲ್ಲೆಯ ಶಾಂಭವಿ ನದಿಗಳು ತುಂಬಿ ಹರಿಯುತ್ತಿವೆ. ಭಾರೀ ಮಳೆಯ ಪರಿಣಾಮವಾಗಿ ಉಡುಪಿ ಜಿಲ್ಲೆಯ ನೆಲ್ಲಿಕಾರು ಗ್ರಾಮದಲ್ಲಿ ಮನೆ ಭಾಗಶಃ ಕುಸಿದು 56 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗೋಡೆ ಕುಸಿದು ಬಿದ್ದಾಗ ಮಹಿಳೆ ಮನೆಯಲ್ಲಿ ಒಬ್ಬರೇ ಇದ್ದರು. ಆಕೆಯ ಮೂವರು ಮಕ್ಕಳು ಮನೆಯ ಸೋರುತ್ತಿರುವ ಮೇಲ್ಛಾವಣಿಯನ್ನು ಟಾರ್ಪಾಲಿನ್ ಶೀಟ್ನಿಂದ ಮುಚ್ಚಲು ತೊಡಗಿದ್ದರು, ಆದರೆ ಏಕಾಏಕಿ ನೀರಿನ ರಭಸಕ್ಕೆ ಗೋಡೆ ಒಡೆದಿದೆ. ಆದಾಗ್ಯೂ, ಆಕೆಯನ್ನು ಅವಶೇಷಗಳಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಆದರೆ ಗುರುವಾರ ನಸುಕಿನ ವೇಳೆಯಲ್ಲಿ ಆಕೆ ಸಾವನ್ನಪ್ಪಿದ್ದಾರೆ ಎಂದು ನೆಲ್ಲಿಕಾರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಪ್ರಶಾಂತ್ ಜೈನ್ ತಿಳಿಸಿದ್ದಾರೆ. ಆಗಸ್ಟ್ 1 ರಂದು ಫಲ್ಗುಣಿ ನದಿಯಲ್ಲಿ ನೀರಿನ ಮಟ್ಟವು ಹಠಾತ್ ಏರಿಕೆ ಕಂಡಿದೆ ಮತ್ತು ಕಡಪ ಮತ್ತು ಕರಿಯಾ ಗ್ರಾಮಗಳಲ್ಲಿ ಕನಿಷ್ಠ ಎಂಟು ಮನೆಗಳು ಜಲಾವೃತಗೊಂಡಿವೆ.