Home ಕ್ರೈಂ ನ್ಯೂಸ್ ವರ್ಷಗಟ್ಟಲೆ ಪ್ರೀತಿಸಿ ಮದುವೆಯಾದ ಪತ್ನಿ ಅಸಲಿಗೆ ಗಂಡು: ಮದುವೆಯಾದ 12 ದಿನಕ್ಕೆ ಹೆಂಡತಿ ಹೆಣ್ಣಲ್ಲ ಎಂದು ತಿಳಿದ ಪತಿಗೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕಿ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ವರ್ಷಗಟ್ಟಲೆ ಪ್ರೀತಿಸಿ ಮದುವೆಯಾದ ಪತ್ನಿ ಅಸಲಿಗೆ ಗಂಡು: ಮದುವೆಯಾದ 12 ದಿನಕ್ಕೆ ಹೆಂಡತಿ ಹೆಣ್ಣಲ್ಲ ಎಂದು ತಿಳಿದ ಪತಿಗೆ ಹಾರ್ಟ್ ಅಟ್ಯಾಕ್ ಆಗೋದೊಂದೇ ಬಾಕಿ!

Share
ಹೆಂಡತಿ
Share

ಇಂಡೋನೇಷ್ಯಾದಲ್ಲಿ 1 ವರ್ಷ ಪ್ರೀತಿಸಿ ಮದುವೆಯಾದ 12 ದಿನಗಳ ನಂತರ ತನ್ನ ಮುದ್ದಿನ ಹೆಂಡತಿ ಹೆಣ್ಣಲ್ಲ, ಬದಲಿಗೆ ಆಸ್ತಿ ಲೂಟಿ ಮಾಡಲು ಬಂದ ‘ಗಂಡಸು’ ಎಂಬ ಆಘಾತಕಾರಿ ಸತ್ಯ ಪತಿಗೆ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿರುವ ವಿಲಕ್ಷಣ ಕ್ರೈಂ ಸ್ಟೋರಿ ಇಲ್ಲಿದೆ.

“ಪ್ರೀತಿ ಕುರುಡು” ಎಂಬ ಮಾತನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ಯುವಕನ ಕುರುಡು ಪ್ರೀತಿ ಅವನಿಗೆ ಊಹಿಸಲೂ ಸಾಧ್ಯವಾಗದಂತಹ ಅತಿ ದೊಡ್ಡ ದೋಖಾ ಮಾಡಿದೆ! ವರ್ಷಗಟ್ಟಲೆ ಪ್ರೀತಿಸಿ, ಹಿರಿಯರ ಸಮ್ಮುಖದಲ್ಲಿ ಮದುವೆಯಾದ 12 ದಿನಗಳ ನಂತರ, ತನ್ನ ಮುದ್ದಿನ ಪತ್ನಿ ಹೆಣ್ಣಲ್ಲ… ಬದಲಿಗೆ ಆಸ್ತಿಗಾಗಿ ಬಂದ ‘ಗಂಡಸು’ ಎಂಬ ಆಘಾತಕಾರಿ ಸತ್ಯ ಪತಿಗೆ ತಿಳಿದುಬಂದಿದೆ. ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನಡೆದ ಈ ನಂಬಲಾಗದ ಘಟನೆ ಈಗ ವಿಶ್ವಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಶುರುವಾದ ಪ್ರೇಮಾಯಣ:

ಇಂಡೋನೇಷ್ಯಾದ ನಾರಿಂಗುಲ್ ನಿವಾಸಿಯಾದ 26 ವರ್ಷದ ಎಕೆ (AK) ಎಂಬ ಯುವಕನಿಗೆ ಇನ್‌ಸ್ಟಾಗ್ರಾಮ್/ಫೇಸ್‌ಬುಕ್ ಮೂಲಕ ‘ಅದಿನಾ ಕನ್ಜಾ’ ಎಂಬ ಸುಂದರಿ ಪರಿಚಯವಾಗಿದ್ದಳು. ಇಬ್ಬರ ಸ್ನೇಹ ಬೆಳೆದು ಪ್ರೀತಿಯಾಗಿ ಬದಲಾಗಿತ್ತು. ಒಂದು ವರ್ಷದ ಅವಧಿಯಲ್ಲಿ ಇಬ್ಬರೂ ಹಲವು ಬಾರಿ ಭೇಟಿಯಾಗಿದ್ದರು. ಆದರೆ, ಪ್ರತಿ ಬಾರಿಯೂ ಅದಿನಾ ಮುಖವನ್ನು ಪೂರ್ತಿಯಾಗಿ ಮುಚ್ಚುವ ಮುಸ್ಲಿಂ ಸಂಪ್ರದಾಯದ ‘ನಿಕಾಬ್’ (ಬುರ್ಖಾ) ಧರಿಸಿ ಬರುತ್ತಿದ್ದಳು. ತಾನು ಧರ್ಮನಿಷ್ಠ ಮಹಿಳೆಯಾಗಿದ್ದರಿಂದ ಮದುವೆಗೂ ಮುನ್ನ ಮುಖ ತೋರಿಸುವುದಿಲ್ಲ ಎಂದಾಗ, ಅವಳ ಮೇಲಿನ ಗೌರವದಿಂದ ಯುವಕ ಅದಕ್ಕೆ ಒಪ್ಪಿಕೊಂಡಿದ್ದ.

ಅತ್ಯಂತ ಸರಳವಾಗಿ ನಡೆದ ಮದುವೆ:

ಒಂದು ವರ್ಷದ ಪ್ರೀತಿಯ ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಈ ವೇಳೆ ತನಗೆ ಯಾರೂ ಇಲ್ಲ, ತಾನೊಬ್ಬ ಅನಾಥೆ ಎಂದು ಅದಿನಾ ನಂಬಿಸಿದ್ದಳು. ಇದನ್ನು ನಿಜವೆಂದು ನಂಬಿದ ಯುವಕ ಎಕೆ, ಕಳೆದ ಏಪ್ರಿಲ್ 12 ರಂದು ತನ್ನ ಮನೆಯಲ್ಲೇ ಅತ್ಯಂತ ಸರಳವಾಗಿ ಮದುವೆ ಮಾಡಿಕೊಂಡಿದ್ದನು. ಆದರೆ ಮದುವೆಯ ನಂತರವೂ ಅದಿನಾ ಪತಿಯೊಂದಿಗೆ ಅಂತರ ಕಾಯ್ದುಕೊಳ್ಳುತ್ತಿದ್ದಳು, ಮನೆಯಲ್ಲೂ ನಿಕಾಬ್ ತೆಗೆಯಲು ನಿರಾಕರಿಸುತ್ತಿದ್ದಳು.

ಪತಿಯ ಅನುಮಾನಕ್ಕೆ ಸಿಕ್ಕಿತು ಬಿಗ್ ಟ್ವಿಸ್ಟ್!

ಮದುವೆಯಾಗಿ 12 ದಿನಗಳಾದರೂ ಪತ್ನಿ ಮನೆಯವರೊಂದಿಗೆ ಬೆರೆಯದೆ, ಸದಾ ಮುಖ ಮುಚ್ಚಿಕೊಂಡೇ ಇರುತ್ತಿದ್ದರಿಂದ ಪತಿಗೆ ಆಕೆ ಬಗ್ಗೆ ಅನುಮಾನ ಮೂಡಿದೆ. ತಕ್ಷಣ ಆಕೆಯ ಹಳೆಯ ವಿಳಾಸವನ್ನು ಹುಡುಕಿಕೊಂಡು ಹೋದಾಗ ಆತನಿಗೆ ಜನ್ಮದಲ್ಲೇ ಮರೆಯಲಾಗದ ಆಘಾತ ಕಾದಿತ್ತು. ಅದಿನಾ ಹೇಳಿದಂತೆ ಆಕೆ ಅನಾಥೆಯಾಗಿರಲಿಲ್ಲ, ಆಕೆಯ ತಂದೆ-ತಾಯಿ ಇಬ್ಬರೂ ಬದುಕಿದ್ದರು!

 ‘ಅದಿನಾ’ ಅಸಲಿಗೆ ಹೆಣ್ಣಲ್ಲ… ಗಂಡು!

ಎಕೆ ತನಿಖೆ ನಡೆಸಿದಾಗ ಹೊರಬಂದ ಸತ್ಯ ಕೇಳಿ ಇಡೀ ಕುಟುಂಬವೇ ಬೆಚ್ಚಿಬಿದ್ದಿದೆ. ಅದಿನಾ ಕನ್ಜಾ ಎಂಬ ಹೆಸರಿನಲ್ಲಿ ಯುವಕನನ್ನು ನಂಬಿಸಿದ್ದಾಕೆ ಹೆಣ್ಣಲ್ಲ, ಬದಲಾಗಿ ಹೆಣ್ಣಿನ ವೇಷ ಧರಿಸಿಕೊಂಡು ತಿರುಗುತ್ತಿದ್ದ ‘ಇಎಸ್ ಹೆಚ್’ (ESH) ಎಂಬ ಗಂಡಸು ಎಂದು ಪತ್ತೆಯಾಗಿದೆ! ಆತನ ಧ್ವನಿ ಮತ್ತು ನಡವಳಿಕೆ ಸಂಪೂರ್ಣ ಹೆಣ್ಣಿನಂತಿದ್ದ ಕಾರಣ ಯಾರೂ ಶಂಕಿಸಿರಲಿಲ್ಲ.

ವಂಚನೆಯ ಅಸಲಿ ಉದ್ದೇಶವೇನು?

ವಿಷಯ ತಿಳಿಯುತ್ತಿದ್ದಂತೆ ಎಕೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ, ಎಕೆ ಕುಟುಂಬದ ಆಸ್ತಿಯನ್ನು ಲೂಟಿ ಮಾಡುವ ಏಕೈಕ ಉದ್ದೇಶದಿಂದ ಹೆಣ್ಣಿನ ವೇಷ ಧರಿಸಿ ಪ್ರೀತಿಯ ನಾಟಕವಾಡಿ  ಮದುವೆಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ. ಒಂದು ವರ್ಷ ಕಾಲ ಜೊತೆಯಲ್ಲಿದ್ದರೂ, ಕೈ ಕೈ ಹಿಡಿದು ತಿರುಗಿದರೂ ತನ್ನ ಸಂಗಾತಿ ಗಂಡು ಎಂಬುದನ್ನು ಪತ್ತೆಹಚ್ಚಲು ಪತಿಗೆ ಸಾಧ್ಯವಾಗದಿರುವುದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

Share

Leave a comment

Leave a Reply

Your email address will not be published. Required fields are marked *

Related Articles