ಇಂದೋರ್: ಪ್ರೀತಿಸಿದ ಗೆಳತಿಯನ್ನೇ ಅಮಾನುಷವಾಗಿ ಹತ್ಯೆ ಮಾಡಿ, ಆಕೆಯ ಶವದೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಬೆಚ್ಚಿಬೀಳಿಸುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಈ ಪ್ರಕರಣದ ಆರೋಪಿ ಪಿಯೂಷ್ ಧಮ್ನೋಟಿಯಾ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಆತ ತೋರುತ್ತಿರುವ ನಿರ್ಲಕ್ಷ್ಯ ಮತ್ತು ವಿಕೃತಿ ಪೊಲೀಸರನ್ನೇ ಬೆಚ್ಚಿಬೀಳಿಸಿದೆ.
ಘಟನೆಯ ಹಿನ್ನೆಲೆ:
ಫೆಬ್ರವರಿ 10 ರಂದು ಇಂದೋರ್‌ನ ದ್ವಾರಕಾಪುರಿ ಪ್ರದೇಶದ ಬಾಡಿಗೆ ಮನೆಯೊಂದರಲ್ಲಿ ಈ ಕೊಲೆ ನಡೆದಿದೆ. ಮದುವೆಯ ವಿಚಾರವಾಗಿ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಆರೋಪಿ ಪಿಯೂಷ್, ಯುವತಿಯ ಕೈಕಾಲು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಹಗ್ಗದಿಂದ ಉಸಿರುಗಟ್ಟಿಸಿ ಕೊಂದಿದ್ದಾನೆ. ಕೊಲೆಯ ನಂತರವೂ ವಿಕೃತಿ ಮೆರೆದ ಆತ, ಶವದ ಜೊತೆ ದೈಹಿಕ ಸಂಬಂಧ ಬೆಳೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ವಿಕೃತ ಮನಸ್ಥಿತಿಯ ಪರಾಕಾಷ್ಠೆ:
ಕೊಲೆಯಾದ ನಂತರ ಶವದ ಪಕ್ಕದಲ್ಲೇ ಕುಳಿತು ಮದ್ಯಪಾನ ಮಾಡಿದ್ದ ಆರೋಪಿ, ನಂತರ ಅಲ್ಲಿಂದ ಪನ್ವೇಲ್‌ಗೆ ಪರಾರಿಯಾಗಿದ್ದ. ಅಲ್ಲಿ ಈತ ಯೂಟ್ಯೂಬ್‌ನಲ್ಲಿ “ಸತ್ತವರ ಆತ್ಮದೊಂದಿಗೆ ಮಾತನಾಡುವುದು ಹೇಗೆ?” ಮತ್ತು “ತಾಂತ್ರಿಕ ವಿಧಿವಿಧಾನಗಳ ಮೂಲಕ ಪ್ರೇತಾತ್ಮಗಳನ್ನು ಕರೆಯುವುದು ಹೇಗೆ?” ಎಂದು ಹುಡುಕಾಟ ನಡೆಸಿದ್ದಾನೆ. ಅಲ್ಲದೆ, ಯುವತಿಯ ಫೋನ್ ಬಳಸಿ ಆಕೆಯ ಚಾರಿತ್ರ್ಯಕ್ಕೆ ಧಕ್ಕೆ ತರುವಂತಹ ವಿಡಿಯೋಗಳನ್ನು ಕಳುಹಿಸಿದ್ದಾನೆ.
“ಆಗಿದ್ದು ಆಗಿಹೋಗಿದೆ”:
ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ಯುವಾಗ ಮಾಧ್ಯಮದವರು ಹತ್ಯೆಯ ಉದ್ದೇಶ ಕೇಳಿದಾಗ, ಕಿರುನಗೆ ಬೀರುತ್ತಲೇ “ಆಗಿದ್ದು ಆಗಿಹೋಗಿದೆ, ಈಗ ಕೇಳಿ ಏನು ಮಾಡುವಿರಿ?” ಎಂದು ಅಹಂಕಾರದ ಮಾತುಗಳನ್ನಾಡಿದ್ದಾನೆ. ಸದ್ಯ ಆರೋಪಿಯನ್ನು
ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಆತನ ಮಾನಸಿಕ ಸ್ಥಿತಿಯ ಬಗ್ಗೆಯೂ ತನಿಖೆ ನಡೆಯುತ್ತಿದೆ.





Leave a comment