SUDDIKSHANA KANNADA NEWS/DAVANAGERE/DATE:29_10_2025
ದಾವಣಗೆರೆ: ಅ. 30ರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಇ-ಟೆಂಡರ್ ವಹಿವಾಟಿನಲ್ಲಿ ಮೆಕ್ಕೆಜೋಳ ಕ್ವಿಂಟಾಲ್ ಒಂದಕ್ಕೆ ₹2000.00 ಕ್ಕಿಂತ ಕಡಿಮೆ ದರ ನಮೂದು ಮಾಡಬಾರದೆಂದು ಜಿಲ್ಲಾಧಿಕಾರಿ ಮತ್ತು ಎಪಿಎಂಸಿ ಆಡಳಿತಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಅವರು ಮೆಕ್ಕೆಜೋಳ ವರ್ತಕರಿಗೆ ತಾಕೀತು ಮಾಡಿದ್ದಾರೆ.
READ ALSO THIS STORY: ಒಗ್ಗಟ್ಟಿನ ಮಂತ್ರ ಜಪಿಸಿದ ಲಿಂಗಾಯತ ಪಂಚಮಸಾಲಿ ಪೀಠಗಳ ವಚನಾನಂದ ಶ್ರೀ ಮತ್ತು ಬಸವಜಯ ಮೃತ್ಯುಂಜಯ ಸ್ವಾಮೀಜಿ!
ಈ ಸಂದರ್ಭದಲ್ಲಿ ಜಿಲ್ಲಾ ರೈತರ ಒಕ್ಕೂಟದ ಅಧ್ಯಕ್ಷ ಕೊಳೇನಹಳ್ಳಿ ಬಿ ಎಂ ಸತೀಶ್ ರವರು ಮಾತನಾಡಿ, ನಿರಂತರ ಮಳೆ ಸಿಲುಕಿ ತೇವಾಂಶ ಹೆಚ್ಚಳದಿಂದ ಇಳುವರಿ ಕಡಿಮೆ ಬಂದಿರುವುದಲ್ಲದೆ ದರ ಕುಸಿತದಿಂದ ಮೆಕ್ಕೆಜೋಳ ಬೆಳೆದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ. ಕೆಲ ತಿಂಗಳುಗಳ ಹಿಂದೆ ₹2400 ರಿಂದ ₹2600 ರವರೆಗೆ ಇದ್ದ ದರ ಈಗ ₹1500 ರಿಂದ ₹1700 ರವರೆಗೆ ಇದೆ. ಇದರಿಂದ ತೀವ್ರ ಅತಿವೃಷ್ಟಿಯಲ್ಲು ಕಷ್ಟಪಟ್ಟು ಮೆಕ್ಕೆಜೋಳ ಬೆಳೆದ ರೈತ ದರ ಕುಸಿತದಿಂದ ಕಂಗಾಲಾಗಿದ್ದಾನೆ. ಅವನ ನೆರವಿಗೆ ಜಿಲ್ಲಾಡಳಿತ ಧಾವಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ಮೆಕ್ಕೆಜೋಳ ವರ್ತಕ ಕೆ.ಜಾವೀದ್ ಸಾಬ್ ರವರು ಮಾತನಾಡಿ ರೈತರು ಒಣಗಿಸಿ ತಂದ್ರೆ ಏನಾದ್ರೂ ದರದಲ್ಲಿ ಸ್ವಲ್ಪ ಮಟ್ಟಿಗೆ ಹೆಚ್ಚು ಮಾಡಬಹುದು. ಆದರೆ ರೈತರು ಹಸಿ ಮಾಲು ತರುತ್ತಾರೆ. ನಮಗೆ ಹೆಚ್ಚಿನ ವಹಿವಾಟು ಮಾಡುವುದಕ್ಕೆ ಸಾಧ್ಯವಿಲ್ಲ ಎಂದರು.
ಆಗ ಜಿಲ್ಲಾಧಿಕಾರಿ ಗಂಗಾಧರಸ್ವಾಮಿಯವರು ಮಧ್ಯೆ ಪ್ರವೇಶಿಸಿ ರೈತರ ಗೋಳು ಹೇಳತೀರದು. ಮಾರುಕಟ್ಟೆಯಲ್ಲಿ ಒಣಗಿಸಲು ವ್ಯವಸ್ಥೆ ಮಾಡಬೇಕು. ದಿನಕ್ಕೆ ಎರಡು ಸಲ ಇ-ಟೆಂಡರ್ ವ್ಯವಸ್ಥೆ ಮಾಡಲಾಗುವುದು. ವರ್ತಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಹೆಚ್ ಸಿ ಎಂ ರಾಣಿ, ಸಹಾಯಕ ನಿರ್ದೇಶಕ ಜೆ ಪ್ರಭು, ದಲಾಲರ ಸಂಘದ ಅಧ್ಯಕ್ಷ ಬೂದಿಹಾಳ ಹಾಲೇಶಗೌಡ್ರು, ಒಬ್ಬನಳ್ಳಿ ಜಾವೀದ್, ಆರ್.ಜಿ.ರುದ್ರೇಶ್, ಬಾಳನಗೌಡ್ರು, ದೊಗ್ಗಳ್ಳಿ ಬಸವರಾಜು, ರೈತ ಮುಖಂಡರಾದ ಹೂವಿನಮಡು ನಾಗರಾಜ್, ಕೋಲ್ಕುಂಟೆ ಬಸಪ್ಪ, ಚಿನ್ನಸಮುದ್ರ ಭೀಮನಾಯ್ಕ್, ಐಗೂರು ನಾಗರಾಜಪ್ಪ, ದೊಗ್ಗಳ್ಳಿ ಬಾಬುರಾಜೇಂದ್ರ, ಸಂಜಯ್, ದಶರಥರಾಜು ಮುಂತಾದವರು ಉಪಸ್ಥಿತರಿದ್ದರು.








