SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ಕೊರೊನಾ ಸಂಕಷ್ಟದ ವೇಳೆಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ ಬಳಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ವಿಧಿವಶರಾಗಿದ್ದಾರೆ.
READ ALSO THIS STORY: ಇಬ್ಬರು ಪಿಎಸ್ಐ ಸೇರಿದಂತೆ 7 ಆರೋಪಿತರ ಸೆರೆ, ದಾವಣಗೆರೆ ಪೊಲೀಸರ ಭಾಗಿ ಇಲ್ಲ: ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ!
ಐಎಎಸ್ ಅಧಿಕಾರಿಯಾಗಿದ್ದ ಮಹಾಂತೇಶ್ ಬೀಳಗಿ ಅವರು ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಅನೇಕ ಜನಪರ ಕಾರ್ಯಕ್ರಮಗಳ ಮೂಲಕ, ಜನಸೇವೆಯಿಂದ ಮನೆಮಾತಾಗಿದ್ದರು.
ಕರ್ನಾಟಕ ರಾಜ್ಯ ಮಿನರಲ್ ಕಾರ್ಪೊರೇಷನ್ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಾಂತೇಶ್ ಬೀಳಗಿ ಅವರು, ಉಡುಪಿ, ದಾವಣಗೆರೆ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸಿದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಆಗಿದ್ದ ಅವರು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿ ಬೆಂಗಳೂರಿಗೆ ಹೋಗಿದ್ದ ಮಹಾಂತೇಶ್ ಬೀಳಗಿ ಅವರು ಬೆಳಗಾವಿ ಜಿಲ್ಲೆಯ ರಾಮದುರ್ಗ ಮೂಲದವರು. ಅಧ್ಯಾಪಕರಾಗಿ, ಐಎಎಸ್, ಐಪಿಎಸ್ ಕೋಚಿಂಗ್ ಕೂಡ ಮಾಡಿ ಜನಪ್ರಿಯರಾಗಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದವರು.
ಕಾರು ಅಪಘಾತ: ಮೂವರ ಸಾವು:
ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಸೇರಿದಂತೆ ಮೂವರು ಪ್ರಯಾಣಿಸುತ್ತಿದ್ದ ಕಾರು ಆಕ್ಸಿಡೆಂಟ್ ಆಗಿದೆ. ಕಪ್ಪು ಬಣ್ಣದ ಇನ್ನೋವಾ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಅಪಘಾತದ ರಭಸ ನೋಡಿದರೆ ಅಪಘಾತದ ಭಯಾನಕತೆ ಗೊತ್ತಾಗುತ್ತದೆ.
ಕಲಬುರಗಿಗೆ ವಿಜಯಪುರದಿಂದ ಇನ್ನೋವಾ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದ ವೇಳೆ ಕಾರು ಅಪಘಾತಕ್ಕೀಡಾಗಿದೆ. ಕಾರಿನಲ್ಲಿ ಒಟ್ಟು ಐವರು ಇದ್ದರು ಎಂಬ ಮಾಹಿತಿ ಲಭಿಸಿದೆ. ಈ ಸಂಬಂಧ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾಂತೇಶ್ ಬೀಳಗಿ ಸಹೋದರರಾದ ಶಂಕರ ಬೀಳಗಿ ಹಾಗೂ ಈರಣ್ಣ ಶಿರಸಂಗಿ ಮೃತ ದುರ್ದೈವಿಗಳು. ಸಂಬಂಧಿಕರೊಬ್ಬರ ಮದುವೆಗೆ ಹೋಗಿ ವಾಪಸ್ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಜೇವರ್ಗಿ ತಾಲೂಕಿನ ಗೌನಳ್ಳಿ ಕ್ರಾಸ್ ಬಳಿ ಈ ದುರ್ಘಟನೆ ನಡೆದಿದ್ದು, ಅಡ್ಡ ಬಂದ ನಾಯಿ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ KA 04, NC 7982 ಸಂಖ್ಯೆಯ ಇನ್ನೋವಾ ಕಾರು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರೆ, ಅವರ ಸಹೋದರ ಶಂಕರ ಬೀಳಗಿ ಮತ್ತು ಈರಣ್ಣ ಶಿರಸಂಗಿ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.






Leave a comment