SUDDIKSHANA KANNADA NEWS/ DAVANAGERE/ DATE:06-12-2024
ಬೆಂಗಳೂರು: ಕರ್ನಾಟಕ ಮಾತ್ರವಲ್ಲ, ಇಡೀ ರಾಜ್ಯಾದ್ಯಂತ ರಾಜಕೀಯ ರಂಗದಲ್ಲಿ ಕೋಲಾಹಲ ಎಬ್ಬಿಸಿದ್ದ ಲೋಕಾಯುಕ್ತ ದಾಳಿ ವೇಳೆಯ ಲಂಚ ಪ್ರಕರಣದ ಚಾರ್ಜ್ ಶೀಟ್ ಅನ್ನು ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದೋಷಾರೋಪಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
ಆಗಿನ ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಮತ್ತು ಮಾರ್ಜಕ ನಿಗಮ ನಿಯಮಿತ ಟೆಂಡರ್ ಪ್ರಕ್ರಿಯೆಯಲ್ಲಿ ನಿಗಮ ಅಧ್ಯಕ್ಷರು ಆಗಿದ್ದರು. ಈ ವೇಳೆ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಪ್ರಶಾಂತ್ ಕುಮಾರ್ ಎಂ. ವಿ. ಟೆಂಡರ್ ನೀಡಿಕೆಯಲ್ಲಿ ಹಸ್ತಕ್ಷೇಪ ಮಾಡಿದ್ದರು. ಜೊತೆಗೆ ಗುತ್ತಿಗೆದಾರರಿಂದ 90 ಲಕ್ಷ ರೂಪಾಯಿ ಪಡೆಯುವಾಗ ಬಲೆಗೆ ಬಿದ್ದಿದ್ದರು. ಈ ಆರೋಪದ ಮೇರೆಗೆ ಮಾಡಾಳ್ ವಿರೂಪಾಕ್ಷಪ್ಪರು ಬಂಧನಕ್ಕೆ ಒಳಗಾಗಿದ್ದರು.
ಈ ಪ್ರಕರಣ ಕೇವಲ ಕರ್ನಾಟಕ ಮಾತ್ರವಲ್ಲ, ಇಡೀ ದೇಶಾದ್ಯಂತ ಬಿಜೆಪಿ ಶಾಸಕರ ಲಂಚವಾತಾರ ಎಂದೇ ಬಿಂಬಿತವಾಗಿತ್ತು. ಕರ್ನಾಟಕ ಬಿಜೆಪಿಗೆ ಸಾಕಷ್ಟು ಮುಜುಗರವಾಗಿತ್ತು. ಆಗಿನ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್, ಅರವಿಂದ್ ಕೇಜ್ರಿವಾಲ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರಿಂದ ಹಿಡಿದು ಕಾಂಗ್ರೆಸ್ ನ ಪ್ರತಿಯೊಬ್ಬ ನೇತಾರರೂ ಬಿಜೆಪಿ ಶಾಸಕರ ಲಂಚ ಪ್ರಕರಣ ಪ್ರಸ್ತಾಪಿಸಿ ಚುನಾವಣಾ ಭಾಷಣ ಮಾಡಿದ್ದರು. ಇದು ಬಿಜೆಪಿಗೆ ವಿಧಾನಸಭೆ ಚುನಾವಣೆಯಲ್ಲಿ ಹಿನ್ನೆಡೆಗೂ ಕಾರಣವಾಗಿತ್ತು.
ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಎಂ. ವಿ. ಪ್ರಶಾಂತ್ ಕುಮಾರ್ ಲಂಚ ಪಡೆಯುವಾಗ ಲೋಕಾಯುಕ್ತರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ರಾಸಾಯಿನಿಕ ಪೂರೈಕೆದಾರರಿಂದ 90 ಲಕ್ಷ ರೂಪಾಯಿ ಪಡೆಯಲು ಪ್ರಯತ್ನಿಸಿರುವುದು ಸತ್ಯ ಎಂದು ತನಿಖೆಯಲ್ಲಿ ಖಚಿತವಾಗಿದೆ ಎಂದು ಲೋಕಾಯುಕ್ತ ಪೊಲೀಸರು ಕೋರ್ಟ್ ಗೆ ಸಲ್ಲಿಸಿರುವ ಚಾರ್ಜ್ ಶೀಟ್ ನಲ್ಲಿ ತಿಳಿಸಿದ್ದಾರೆ.
ಭ್ರಷ್ಟಾಚಾರ ನಡೆಸಲು ಒಳಸಂಚು ರೂಪಿಸಿ ಲಂಚ ಸ್ವೀಕರಿಸಲು ಯತ್ನಿಸಿದ್ದರ ಕುರಿತ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದಾರೆ. ಜಲಮಂಡಳಿ ಅಧಿಕಾರಿ ಪ್ರಶಾಂತ್ ಕುಮಾರ್ ಅಲಿಯಾಸ್ ಪ್ರಶಾಂತ್ ಮಾಡಾಳ್, ಮೆಸರ್ಸ್ ಕರ್ನಾಟಕ ಅರೋಮಾಸ್ ಕಂಪನಿಯ ಮೂವರು ಸಿಬ್ಬಂದಿ ವಿರುದ್ಧ ದೋಷಾರೋಪ ಪಟ್ಟಿಯನ್ನು ತನಿಖಾಧಿಕಾರಿಗಳು ಸಲ್ಲಿಸಿದ್ದಾರೆ.
ಆರೋಪಿ ಪ್ರಶಾಂತ್ ಕುಮಾರ್ ತನ್ನ ಕಚೇರಿ ಲೆಕ್ಕ ಸಹಾಯಕ ಸುರೇಂದ್ರ ಅವರ ಮುಖಾಂತರ ಲಂಚದ ಹಣ ಸ್ವೀಕರಿಸಲು ಪ್ರಯತ್ನಿಸಿದ್ದರು. ಜತೆಗೆ, ಕೆಎಸ್ಡಿಎಲ್ ವ್ಯವಹಾರವನ್ನು ಕ್ರೆಸೆಂಟ್ ರಸ್ತೆಯಲ್ಲಿನ ತನ್ನ ಅಣ್ಣನ ಕಚೇರಿಯಲ್ಲಿ ನಡೆಸುತ್ತಿದ್ದರು ಎಂಬುದಕ್ಕೆ ಪೂರಕ ದಾಖಲೆಗಳು ಸಿಕ್ಕಿವೆ ಎಂದು ಈ ಮೂಲಗಳು ಹೇಳಿವೆ.
ಪ್ರಕರಣದ ಮೊದಲ ಆರೋಪಿ ಪ್ರಶಾಂತ್ ಮಾಡಾಳ್, ಅರೋಮಾಸ್ ಕಂಪನಿ ನೌಕರರಾದ ಆಲ್ಬರ್ಟ್ ನಿಕೋಲಸ್, ಸಿ.ಎಚ್. ಗಂಗಾಧರ, ಮ್ಯಾನೇಜರ್ ದೀಪಕ್ ಜಾಧವ್ ಅವನ್ನೂ ಆರೋಪಿಗಳನ್ನಾಗಿಸಲಾಗಿದೆ. ಅರೋಮಾಸ್ ಕಂಪನಿ ನೌಕರರು ಪ್ರಶಾಂತ್ ಅವರಿಗೆ ನೀಡಲು ತಂದಿದ್ದ 90 ಲಕ್ಷ ರೂ. ನಗದು, ರಾಸಾಯನಿಕ ಮಾದರಿಯನ್ನು ಸಾಕ್ಷ್ಯಗಳನ್ನಾಗಿ ಪರಿಗಣಿಸಲಾಗಿದೆ. ಜತೆಗೆ, ಕೆಎಸ್ಡಿಎಲ್ ಅಧಿಕಾರಿಗಳು ಹಾಗೂ ಆರೋಮಾಸ್ ಕಂಪನಿ ಸಹ ನೌಕರರೂ ಸೇರಿದಂತೆ ಹಲವರನ್ನು ಸಾಕ್ಷಿದಾರರನ್ನಾಗಿಸಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಪ್ರಶಾಂತ್ ಕುಮಾರ್ ಜಲಮಂಡಳಿಯ ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು. ಆದರೆ, ಕೆಎಸ್ಡಿಎಲ್ ಅಧ್ಯಕ್ಷರಾಗಿದ್ದ ತಂದೆ ಮಾಡಾಳ್ ವಿರೂಪಾಕ್ಷಪ್ಪ ಅವರ ಹೆಸರು ಬಳಕೆ ಮಾಡಿಕೊಂಡು ನಿಗಮದ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಕೆಎಸ್ಡಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅರೋಮಾಸ್ ಕಂಪನಿ ಮಾಲೀಕರ ಜತೆ ಮೊಬೈಲ್ ನ ವಾಟ್ಸಪ್ ನಲ್ಲಿ ಮಾಡಿರುವ ಚಾಟ್ ಸಂದೇಶಗಳನ್ನು ರಿಟ್ರೀವ್ ಮಾಡಲಾಗಿದ್ದು, ಇದರಲ್ಲಿ ಬೆಳಕಿಗೆ ಬಂದಿದೆ.
ಈ ಪೈಕಿ 2023ರ ಜ.18ರಂದು ಬೆಳಗ್ಗೆ 9.42ರ ಸುಮಾರಿಗೆ ಅರೋಮಾಸ್ ಕಂಪನಿ ಮಾಲೀಕ ವಿನಯ್ರಾಜ್, ಬೇರೆ ಕಂಪನಿಯ ಸುಗಂಧದ್ರವ್ಯ (ರಾಸಾಯನಿಕ) ಮಾದರಿ ತಿರಸ್ಕರಿಸುವಂತೆ ಪ್ರಶಾಂತ್ಕುಮಾರ್ ಅವರಿಗೆ ವಾಟ್ಸಾಪ್ ಸಂದೇಶ ಕಳಿಸಿದ್ದರು. ಅದೇ ದಿನ 10.2ರ ಸುಮಾರಿಗೆ ಪ್ರಶಾಂತ್ ಕುಮಾರ್, ಕೆಎಸ್ಡಿಎಲ್ ಎಂಡಿ ಡಾ.ಮಹೇಶ್ ಅವರಿಗೆ ವಾಟ್ಸಾಪ್ ಮೂಲಕ ‘ದಯವಿಟ್ಟು ಎಸ್ಪಿ ಕಂಪನಿಯ ಸುಗಂಧದ್ರವ್ಯ ತಿರಸ್ಕರಿಸಿ’ ಎಂದು ಸಂದೇಶ ಕಳಿಸಿದ್ದಾರೆ. ಈ ಸಂದೇಶಗಳು ಆರೋಪಿ ಪ್ರಶಾಂತ್ಕುಮಾರ್, ಕೆಎಸ್ಡಿಎಲ್ ಟೆಂಡರ್ ಪ್ರಕ್ರಿಯೆಯಲ್ಲಿ ಪ್ರಭಾವ ಬೀರುತ್ತಿದ್ದರು ಎಂಬುದನ್ನು ಪುಷ್ಠೀಕರಿಸುತ್ತವೆ ಎಂದು ಹೇಳಲಾಗಿದೆ.