SUDDIKSHANA KANNADA NEWS/ DAVANAGERE/ DATE:14-12-2023
ದಾವಣಗೆರೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಬಿ. ವೈ. ವಿಜಯೇಂದ್ರ ಅವರನ್ನು ಸೋಲಿಸಲು ಯಾರೆಲ್ಲಾ ಪ್ರಯತ್ನ ಪಟ್ಟಿದ್ದರು ಎಂಬುದು ನನಗೂ ಗೊತ್ತು. ವಿಜಯೇಂದ್ರ ಸೋತರೆ ನಾವು ದೊಡ್ಡವರಾಗ್ತೇವೆಂಬ ಭ್ರಮೆಯಿಂದ ಕುತಂತ್ರ ನಡೆಸಿದ್ದರು. ಆದ್ರೆ, ಇದರಲ್ಲಿ ಯಶಸ್ಸು ಕಾಣಲಿಲ್ಲ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದರು.
ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವಿಜಯೇಂದ್ರ ಗೆದ್ದು ಶಾಸಕರಾದರೆ ಒಳ್ಳೆಯ ಸ್ಥಾನಮಾನ ಸಿಗುತ್ತೆ ಎಂಬ ಕಾರಣಕ್ಕೆ ಸೋಲಿಸಲು ಷಡ್ಯಂತ್ರ ಮಾಡಿದರು. ಆದ್ರೆ, ಯಡಿಯೂರಪ್ಪ ಹಾಗೂ ಜನರ ಆಶೀರ್ವಾದದಿಂದ ಗೆದ್ದು ಬಂದರು. ವಿನಾಕಾರಣ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುದ್ಧ ಮಾತನಾಡಬೇಡಿ ಎಂದು ಮನವಿ ಮಾಡಿದರು.
2019ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ನಾವು ಶಾಸಕರಾಗಿದ್ದೆವು. ನಮ್ಮನ್ನು ಮಂತ್ರಿ ಮಾಡಲಿಲ್ಲ. ಹಾಗೆಂದ ಕಾರಣಕ್ಕೆ ದ್ವೇಷದ ರಾಜಕಾರಣ ಮಾಡಿದ್ದೇವಾ. ಯಾರೂ ಶಾಶ್ವತವಾಗಿ ಶಾಸಕರಾಗಿ ಇರುವುದಿಲ್ಲ. ಸೋತವರು ಗೆಲ್ತಾರೆ, ಗೆದ್ದವರು ಸೋಲ್ತಾರೆ. ಯಡಿಯೂರಪ್ಪರ ವಿರುದ್ದ ವಾಗ್ದಾಳಿ ನಡೆಸುವುದು ಸರಿಯಲ್ಲ. ಉತ್ತರ ಕರ್ನಾಟಕದ ಅಭಿವೃದ್ಧಿಯಾಗಬೇಕು ನಿಜ. ಆದ್ರೆ ಜನರು ಬಂದು ಕೇಳಿದ್ದಾರಾ? ವಿಪಕ್ಷ ನಾಯಕ ಹಾಗೂ ರಾಜ್ಯಾಧ್ಯಕ್ಷ ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಯತ್ನಾಳ್ ದಿನಕ್ಕೊಂದು ಹೇಳಿಕೆ ಕೊಡುತ್ತಿದ್ದಾರೆ. ಬಸವರಾಜ್ ಬೊಮ್ಮಾಯಿ, ಸೋಮಣ್ಣ ಸೋಲಲು ವಿಜಯೇಂದ್ರ ಹಣ ನೀಡಿದ್ದಾರೆ
ಎಂಬ ಆರೋಪ ಮಾಡುವ ಯತ್ನಾಳ್ ಗೆ ನಾಚಿಕೆಯಾಗಲ್ವಾ ಎಂದು ಕೆಂಡಕಾರಿದರು.
ಸ್ವಪಕ್ಷೀಯರ ವಿರುದ್ಧ ಮಾತನಾಡುವುದು ಪಕ್ಷ ವಿರೋಧಿ ಚಟುವಟಿಕೆ ಅಲ್ವಾ. ಬಿ. ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಒಂದು ತಿಂಗಳಾಗಿದೆ. ಮುಜುಗರ ಆಗಬಾರದು ಎಂಬ ಕಾರಣಕ್ಕೆ ನಾವೆಲ್ಲರೂ ಸುಮ್ಮನಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಸ್ಥಾನಗಳಲ್ಲಿ ಗೆಲ್ಲಬೇಕು. ವಿಶ್ವವೇ ನರೇಂದ್ರ ಮೋದಿ ಅವರನ್ನು ಮೆಚ್ಚಿದೆ. ಮತ್ತೊಮ್ಮೆ ಪ್ರಧಾನಿ ಆಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಕೆಲಸ ಮಾಡಬೇಕು. ದೇಶದ ಜನರ ಅಪೇಕ್ಷೆಯೂ ಇದೇ ಆಗಿದೆ. ಎಲ್ಲರೊಟ್ಟಿಗೆ ಚರ್ಚೆ ಮಾಡಲಿ. 28 ಸ್ಥಾನ ಗೆಲ್ಲಬೇಕು. ಯತ್ನಾಳ್, ಸೋಮಣ್ಣ ಅವರಿಗೆ ಬಿಜೆಪಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗೆಲ್ಲಬಾರದು ಎಂಬುದು ಇರಬೇಕು. ಹಾಗಾಗಿ, ಏನೇನೋ ಮಾತನಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.
ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ವರಿಷ್ಠರು ಹೇಳಿದ್ದಕ್ಕೆ ಸ್ಪರ್ಧೆ ಮಾಡಿದ್ದರು. ಮಠ ಮಾನ್ಯಗಳಿಗೆ ಹೋಗಿ ನಾನೇ ವೀರಶೈವ ಲಿಂಗಾಯತ ಸಮಾಜದ ನಾಯಕ ಎಂದು ಫೋಸ್ ಕೊಡುತ್ತಿದ್ದಾರೆ. ದೊಡ್ಡ ನಾಯಕನಾಗಿದ್ದರೆ ಗೆಲ್ಲಬೇಕಿತ್ತು. ಸಿದ್ದರಾಮಯ್ಯರ ವಿರುದ್ದ ಸ್ಪರ್ಧೆ ಮಾಡಿ ಗೆದ್ದು ಸಿಎಂ ಆಗ್ತೇನೆ ಎಂಬ ಭ್ರಮಾಲೋಕದಲ್ಲಿದ್ದರು. ಸೋತಿರುವುದರಿಂದ ಸೋಮಣ್ಣ ಹತಾಶರಾಗಿ, ಹುದ್ದೆ ಸಿಗಲಿಲ್ಲ ಎಂಬ ಕಾರಣಕ್ಕೆ ಯತ್ನಾಳ್ ಟೀಕೆ ಮಾಡುತ್ತಿದ್ದಾರೆ. ನಾವೆಲ್ಲರೂ ಯಡಿಯೂರಪ್ಪ, ವಿಜಯೇಂದ್ರ ಎನ್ನುವುದಕ್ಕಿಂತ ಬಿಜೆಪಿ ಜೊತೆಗೆ ನಿಲ್ಲುತ್ತೇವೆ ಎಂದು ಹೇಳಿದರು.