ದಾವಣಗೆರೆ: ಪದೇ ಪದೇ ನನ್ನನ್ನು ರೌಡಿ ಅಥವಾ ಗೂಂಡಾ ಅಧ್ಯಕ್ಷ ಎಂದು ಹೊನ್ನಾಳಿ ಮಾಜಿ ಶಾಸಕ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಹೇಳಿಕೆ ನೀಡುತ್ತಿದ್ದು, ಇದು ಮುಂದುವರಿದಿದ್ದೇ ಆದಲ್ಲಿ ಯಾವ ಕಾರ್ಯಕ್ರಮದ ವೇದಿಕೆಯಲ್ಲಿ ಇದ್ದರೂ ಅಲ್ಲಿಗೇ ಬಂದು ಕೊರಳಪಟ್ಟಿ ಹಿಡಿದು ಕೇಳಬೇಕಾಗುತ್ತದೆ. ನಿನ್ನ ಪಾಡಿಗೆ ಇದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಏನು ಎಂಬುದನ್ನು ತೋರಿಸಬೇಕಾಗುತ್ತದೆ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬಯಲುಸೀಮೆ ಪ್ರಾಧಿಕಾರದ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.
READ ALSO THIS STORY: ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಎಸ್. ಎಸ್. ಗಣೇಶ್ ಅಭ್ಯರ್ಥಿಯಾಗಲಿ: ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದ ಎಸ್. ಎ. ರವೀಂದ್ರನಾಥ್ ಅಭಿಪ್ರಾಯ!
ಹೊನ್ನಾಳಿಯಲ್ಲಿ ನಡೆದ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಹೊನ್ನಾಳಿ – ನ್ಯಾಮತಿ ಅವಳಿ ತಾಲೂಕಿನಲ್ಲಿ ಮಾಡಿರುವ ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಒಂದೇ ಮನೆಯ ಐವರು ಶಾಸಕರಂತೆ ವರ್ತನೆ, ಗುತ್ತಿಗೆದಾರರಿಗೆ ಬೆದರಿಸಿ ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡಿರುವುದು ಸೇರಿದಂತೆ ದುರಾಡಳಿತಕ್ಕೆ ಜನರು 2023ಕ್ಕೆ ಮನೆಗೆ ಕಳುಹಿಸಿದ್ದಾರೆ. ವಿನಾಕಾರಣ ಕಾಮಗಾರಿ ಕಳಪೆ ಆಗಿದೆ. ಅವೈಜ್ಞಾನಿಕ ಕಾಮಗಾರಿ ಎಂಬ ಆರೋಪ ಮಾಡುವುದನ್ನು ಬಿಟ್ಟು ರಾಜಕೀಯ ಮಾಡಬೇಕು. ವಿನಾಕಾರಣ ಕೆಣಕಿದರೆ ತಕ್ಕ ಉತ್ತರ ನೀಡುತ್ತೇವೆ ಎಂದು ಗುಡುಗಿದ್ದಾರೆ.
ಹೊನ್ನಾಳಿ ಮಾಜಿ ಶಾಸಕ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಪದೇ ಪದೇ ನನ್ನನ್ನು ಗೂಂಡಾ ಅಧ್ಯಕ್ಷ ಎಂದು ಕರೆಯುತ್ತಿದ್ದಾನೆ. ಈ ಹಿಂದೆ ನಾನು ಆಡಿದ್ದ ಮಾತುಗಳ ಆಡಿಯೋ ಇಟ್ಟುಕೊಂಡು ಬೇಕಾಬಿಟ್ಟಿ ಮಾತನಾಡಿದರೆ ಸುಮ್ಮನಿರಲ್ಲ. ನನ್ನ ಮಗಳ ಆಹ್ವಾನ ಪತ್ರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯುವಕನೊಬ್ಬ ಮಾತನಾಡಿದ್ದಕ್ಕೆ ಸಿಟ್ಟು ಬಂದು ಮಾತನಾಡಿದ್ದೇನೆ ವಿನಾಃ ಬೇರೆ ಯಾವ ದುರುದ್ದೇಶ ಇರಲಿಲ್ಲ. ರೇಣುಕಾಚಾರ್ಯ ಇದನ್ನೇ ಬಳಸಿಕೊಂಡು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾನೆ. ಪದೇ ಪದೇ ನನ್ನನ್ನು ರೌಡಿ ಎಂದು ಕರೆದರೆ ಸುಮ್ಮನೆ ಇರೋದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಮಾತೆತ್ತಿದರೆ ಸಾಕು ಸಿಎಂ ಸಿದ್ದರಾಮಯ್ಯರು ರಾಜೀನಾಮೆ ನೀಡಬೇಕು ಎಂದು ರೇಣುಕಾಚಾರ್ಯ ಕೇಳುತ್ತಾನೆ. ಸವಳಂಗ- ಹೊನ್ನಾಳಿ ನಡುವೆ ಇರುವ ಲೈಟ್ ಕಂಬಗಳೇ ರೇಣುಕಾಚಾರ್ಯ ಶಾಸಕನಾಗಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳಿಗೆ ಸಾಕ್ಷಿ. ಭ್ರಷ್ಟಾಚಾರ, ಮನೆಯವರೇ ಗುತ್ತಿಗೆದಾರರು, ಹಿಂಬಾಲಕರ ದುರ್ವರ್ತನೆ ಸೇರಿ ಹಲವು ವಿಚಾರಗಳಿಗೆ ಜನರು ಬೇಸತ್ತು 2023ರ ವಿಧಾನಸಭೆ ಚುನಾವಣೆಯಲ್ಲಿ ಜನರು ಮನೆಗೆ ಕಳುಹಿಸಿದ್ದಾರೆ
ಎಂದು ಕಿಡಿಕಾರಿದ್ದಾರೆ.
ವಿಡಿಯೋಗಳ ಮೇಲೆ ವಿಡಿಯೋಗಳನ್ನು ಮಾಡುವುದು, ಸಾಮಾಜಿಕ ಜಾಲತಾಣಗಳಲ್ಲಿ ಹಾಕೋದು. ಇದೇ ಕೆಲಸ ಆಗಿಬಿಟ್ಟಿದೆ. 2028ಕ್ಕೆ ಮತ್ತೆ ಶಾಸಕನಾಗುತ್ತೇನೆಂಬ ಹುಚ್ಚು ಭ್ರಮೆಯಲ್ಲಿದ್ದಾನೆ ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಮಂಜಪ್ಪ, ಸವಾಲು ಸ್ವೀಕರಿಸಿದ್ದೇವೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರೇಣುಕಾಚಾರ್ಯ ಸ್ಪರ್ಧೆ ಮಾಡಿದರೆ ಸೋಲಕು ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದಾರೆ.





Leave a comment