SUDDIKSHANA KANNADA NEWS/ DAVANAGERE/ DATE_04-07_2025
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿಗೆ ನಾವ್ಯಾರು ಕಾರಣರಲ್ಲ. ಯಾರ ಸೋಲಿಗೂ ಯಾರೂ ಕಾರಣರಲ್ಲ, ಸ್ವಯಂಕೃತ ಅಪರಾಧವೇ ಕಾರಣ ಎಂದು ಕೇಂದ್ರದ ಮಾಜಿ ಸಚಿವ ಡಾ. ಜಿ. ಎಂ. ಸಿದ್ದೇಶ್ವರ
ವಿರುದ್ಧ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಟರಿಗೆ ದೂರು ಕೊಡಲು ಎಲ್ಲರೂ ಸರ್ವ ಸ್ವತಂತ್ರರು. ನಮ್ಮ ವಿರೋಧ ಇಲ್ಲ. ಸೋಲಿಗೆ ನಾವ್ಯಾರು ಕಾರಣರಲ್ಲ, ಸ್ವಯಂಕೃತ ಅಪರಾಧದಿಂದಲೇ ಸೋಲಾಗಿದೆ. ಚುನಾವಣಾ ಫಲಿತಾಂಶ ಬಂದ ಬಳಿಕ ದೆಹಲಿಯಲ್ಲಿ ರಾಜ್ಯ ನಾಯಕರ ಭೇಟಿ ಮಾಡಿ ದಾಖಲೆ ಸಮೇತ ಸಾಕ್ಷ್ಯ ನೀಡಿದ್ದೇವೆ ಎಂದು ತಿಳಿಸಿದರು.
READ ALSO THIS STORY: ಭದ್ರಾ ಡ್ಯಾಂ (Bhadra Dam) ನೀರು ಸಂಗ್ರಹಿಸದೇ ನದಿಗೆ ನೀರು ಬಿಡುಗಡೆ ಯಾಕೆ: ಅಚ್ಚುಕಟ್ಟು ವ್ಯಾಪ್ತಿಯ ರೈತರ ಪ್ರಶ್ನೆಗೆ ಅಧಿಕಾರಿಗಳ ಸ್ಪಷ್ಟನೆ!
ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಶಿವಯೋಗಿಸ್ವಾಮಿ, ಬಸವರಾಜ್ ನಾಯ್ಕ್, ಮಾಡಾಳ್ ಮಲ್ಲಿಕಾರ್ಜುನ್, ಲೋಕಿಕೆರೆ ನಾಗರಾಜ್, ಅಜಯ್ ಕುಮಾರ್, ಎಸ್. ವಿ. ರಾಮಚಂದ್ರ,
ಪೂಜಾರ್ ಚಂದ್ರಶೇಖರ್ ಸೇರಿದಂತೆ ಹಲವಾರು ಮುಖಂಡರು ಬಂದಿದ್ದೇವೆ. ಮಂಡಲ ಅಧ್ಯಕ್ಷರೂ ಬಂದಿದ್ದಾರೆ. ನಾವು ಬಲಾಬಲ ಪ್ರದರ್ಶನಕ್ಕೆ ಬಂದಿಲ್ಲ. ಸ್ವಯಂಪ್ರೇರಿತರಾಗಿ ಅನೇಕ ಮುಖಂಡರು ಬಂದಿದ್ದಾರೆ. ನಾವ್ಯಾರು ಕರೆದಿಲ್ಲ
ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸಭೆ ಕರೆದಿದ್ದು, ಸಭೆಯಲ್ಲಿ ಚರ್ಚಿಸಿದ್ದೇವೆ. ಬಹಳಷ್ಟು ಮಾಧ್ಯಮಗಳಲ್ಲಿ ರೇಣುಕಾಚಾರ್ಯ ಉಚ್ಚಾಟನೆ ಎಂಬ ಸುದ್ದಿಯನ್ನು ಸೃಷ್ಟಿ ಮಾಡಲಾಗಿದೆ. ಬಿಗ್ ಬ್ರೇಕಿಂಗ್, ಬಿಗ್ ನ್ಯೂಸ್, ರೋಚಕ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಸುದ್ದಿ ಮಾಡಿಸುತ್ತಿದ್ದಾರೆ. ನಾನು ಇದಕ್ಕೆಲ್ಲ ಹೆದರಲ್ಲ ಎಂದು ಹೇಳಿದರು.
ಅಂದು ಅಭಿಮನ್ಯುಗೆ ಏನಾಯ್ತು. ಅದು ದ್ವಾಪರ ಯುಗ. ಚಕ್ರವ್ಯೂಹ ಬೇಧಿಸಿ ಹೊರ ಬರುವ ಶಕ್ತಿ ಅಭಿಮನ್ಯುಗೆ ಇರಲಿಲ್ಲ. ಇದು ಕಲಿಯುಗ ನಾನು ಚಕ್ರವ್ಯೂಹ ಬೇಧಿಸುತ್ತೇನೆ. ನನಗೂ ಬಹಳಷ್ಟು ಮಾತನಾಡಲು ಬರುತ್ತೆ. ಯಡಿಯೂರಪ್ಪ, ವಿಜಯೇಂದ್ರ ಏನೂ ಮಾತನಾಡಬಾರದು ಎಂಬ ಸೂಚನೆ ಕೊಟ್ಟಿದ್ದಾರೆ. ಹಾಗಾಗಿ ಸುಮ್ಮನಿದ್ದೇವೆ ಎಂದು ಹೇಳಿದರು.
2009ರಲ್ಲಿ ಕೇವಲ 2000 ಮತಗಳ ಅಂತರದಲ್ಲಿ ಅವರು ಗೆದ್ದಿದ್ದಾರೆ. ಲಿಖಿತವಾಗಿ ದಾಖಲೆ ಸಮೇತ ನಾವು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ನಾಲ್ಕು ಗೋಡೆ ನಡುವೆ ಚರ್ಚೆ ಮಾಡುತ್ತೇವೆ. ಯಾರ್ಯಾರು ರಾಜ್ಯಾಧ್ಯಕ್ಷರು, ಯಡಿಯೂರಪ್ಪರ ಪರ ಮಾತನಾಡಿದರೆ ಪಕ್ಷ ವಿರೋಧಿ ಚಟುವಟಿಕೆ ಅಲ್ಲ.ಬಿಜೆಪಿ ಕಟ್ಟಿ ಬೆಳೆಸಿ ದಕ್ಷಿಣ ಭಾರತದ ಕರ್ನಾಟಕದಲ್ಲಿ ಅಧಿಕಾರಕ್ಕೆ ತಂದವರು ಯಡಿಯೂರಪ್ಪ. ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ. ಪಿ. ನಡ್ಡಾ, ಬಿ. ಎಲ್. ಸಂತೋಷ್ ಅವರು. ವಿಜಯೇಂದ್ರ ವಿರುದ್ಧ ಟೀಕೆ, ಆರೋಪ ಮಾಡಿದಾಗ ಮಾಜಿ ಶಾಸಕರು, ಮುಖಂಡರು ಪ್ರತಿಕ್ರಿಯಿಸಿದ್ದೇವೆ. ರಾಜ್ಯಾಧ್ಯಕ್ಷರ ಟೀಕೆ ಮಾಡಿದರೆ ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದರು.