SUDDIKSHANA KANNADA NEWS/ DAVANAGERE/ DATE:12-09-2023
ದಾವಣಗೆರೆ: ದಾವಣಗೆರೆ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಲೋಕಸಭೆಯಲ್ಲೇ ಬಿಜೆಪಿಯದ್ದೇ ಪಾರುಪತ್ಯ. ಇದುವರೆಗೆ ಸೋಲು ಕಂಡಿಲ್ಲ. ಬಿಜೆಪಿಯ ಭದ್ರಕೋಟೆಯ ಕ್ಷೇತ್ರ. ಮಲ್ಲಿಕಾರ್ಜುನಪ್ಪರು ಎರಡು ಬಾರಿ ಹಾಗೂ ಡಾ. ಜಿ. ಎಂ. ಸಿದ್ದೇಶ್ವರ ಅವರು ನಾಲ್ಕು ಬಾರಿ ಆರಿಸಿ ಬಂದ ಕ್ಷೇತ್ರವಿದು. ಇದುವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಗೆದ್ದಿಲ್ಲ. ಕಾರಣಗಳು ಏನೇ ಇದ್ದರೂ ಬಿಜೆಪಿಯ ಗೆಲುವು ಮಾತ್ರ ಇತಿಹಾಸ. ಆರು ಲೋಕಸಭೆ ಚುನಾವಣೆಗಳಲ್ಲಿ ಕಮಲ ಅರಳಿದೆ. ಆದ್ರೆ, ಈ ಬಾರಿ ಮಾಜಿ ಶಾಸಕ ಎಂ. ಪಿ. ರೇಣುಕಾಚಾರ್ಯ (M. P. Renukacharya)ರು ಉರುಳಿಸುತ್ತಿರುವ ದಾಳ ದಾವಣಗೆರೆ ಬಿಜೆಪಿಯಲ್ಲಿ ತಳಮಳ ಸೃಷ್ಟಿಸಿದೆ. ಈ ಮೂಲಕ ಬಂಡಾಯದ ಬೇಗೆಯಲ್ಲಿ ಬಿಜೆಪಿ ಬೇಯುವಂತಾಗಿದೆ.
ಮಾಡಾಳ್ ಭೇಟಿ ಹಿಂದಿನ ಉದ್ದೇಶ ಏನು…?
ಲೋಕಾಯುಕ್ತ ದಾಳಿ ವೇಳೆ ಲಂಚ ಪ್ರಕರಣದಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಸಿಕ್ಕಿ ಹಾಕಿಕೊಂಡು ಜೈಲಿಗೆ ಹೋಗಿ ಬಂದ ಕಾರಣ ಬಿಜೆಪಿ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿರಲಿಲ್ಲ. ಮಾಡಾಳ್ ವಿರೂಪಾಕ್ಷಪ್ಪರ
ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಗೆ ಟಿಕೆಟ್ ಕೈತಪ್ಪಿತ್ತು. ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಾಡಾಳ್ ಮಲ್ಲಿಕಾರ್ಜುನ್ ಸೋಲು ಕಂಡಿದ್ದರು.
ಎಂಪಿಆರ್ ದಾಳ, ಕಮಲ ಪಡೆ ವಿಲವಿಲ..!
ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾರಣಕ್ಕೆ ಬಿಜೆಪಿಯು ಆರು ವರ್ಷಗಳ ಕಾಲ ಪಕ್ಷದಿಂದ ಮಾಡಾಳ್ ಮಲ್ಲಿಕಾರ್ಜುನ್ ಉಚ್ಚಾಟನೆ ಮಾಡಿತ್ತು. ಆದ್ರೆ, ಮಾಡಾಳ್ ವಿರೂಪಾಕ್ಷಪ್ಪರನ್ನು ಉಚ್ಚಾಟನೆ ಮಾಡಿರಲಿಲ್ಲ. ಆದ್ರೆ, ಈಗ ರೇಣುಕಾಚಾರ್ಯ (M. P. Renukacharya) ಕಳೆದ ಎರಡರಿಂದ ಮೂರು ದಿನಗಳಿಂದ ದಿನಕ್ಕೊಂದರಂತೆ ದಾಳ ಉರುಳಿಸಲು ಶುರು ಮಾಡಿದ್ದಾರೆ. ಬೆಂಗಳೂರಿನಲ್ಲಿ ನಾನು ದಾವಣಗೆರೆ ಲೋಕಸಭೆ ಬಿಜೆಪಿ ಟಿಕೆಟ್ ಆಕಾಂಕ್ಷಿ. ಟಿಕೆಟ್ ಸಿಗದಿದ್ದರೆ ರಾಜಕೀಯವಾಗಿ ಜನ್ಮ ನೀಡಿರುವ ಹೊನ್ನಾಳಿ – ನ್ಯಾಮತಿ ತಾಲೂಕಿನ ಬಿಜೆಪಿ ಮುಖಂಡರು, ಕಾರ್ಯಕರ್ತರು, ಜನರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು.
ಈ ಸುದ್ದಿಯನ್ನೂ ಓದಿ:
ಬಿಜೆಪಿಗೆ ಎಂ. ಪಿ. ರೇಣುಕಾಚಾರ್ಯ (M. P. Renukacharya)ಕಪ್ಪುಚುಕ್ಕೆ, ತೇಜೋವಧೆ ಮುಂದುವರೆಸಿದರೆ ಸುಮ್ಮನಿರಲ್ಲ: ವೀರೇಶ್ ವೀರಾವೇಶದ ಎಚ್ಚರಿಕೆ
ಬಿಜೆಪಿ ಅಧ್ಯಕ್ಷರ ವಿರುದ್ಧ ರೇಣು ಗರಂ ಆಗಿದ್ಯಾಕೆ…?
ಅದಾದ ಮಾರನೇ ದಿನವೇ ದಾವಣಗೆರೆಯ ನೂತನ್ ಕಾಲೇಜು ಸಮೀಪದಲ್ಲಿನ ಬಿಜೆಪಿ ಉಚ್ಚಾಟಿತ ಮಾಜಿ ಶಾಸಕ ಗುರುಸಿದ್ದನಗೌಡರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರ ಎಂದು ರೇಣುಕಾಚಾರ್ಯ (M. P. Renukacharya) ಕಿಡಿಕಾರಿದ್ದರು. ರಾಜ್ಯ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಯಡಿಯೂರಪ್ಪರ ಬಗ್ಗೆ ಸಿಂಪಥಿ, ಬೇರೆಯವರ ಬಗ್ಗೆ ಆರೋಪಗಳ ಸುರಿಮಳೆಗೈಯುತ್ತಾ ಟೀಕಾಪ್ರಹಾರ ನಡೆಸಿದ್ದರು.
ರೇಣು ವಿರುದ್ಧ ವೀರೇಶ್ ವೀರಾವೇಶ:
ಇದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಕಣ್ಣು ಕೆಂಪಾಗುವಂತೆ ಮಾಡಿತ್ತು. ಪತ್ರಿಕಾಗೋಷ್ಠಿ ನಡೆಸಿ ರೇಣುಕಾಚಾರ್ಯ (M. P. Renukacharya)ರಿಗೆ ಸಖತ್ತಾಗಿಯೇ ಎಚ್ಚರಿಕೆ ಕೊಟ್ಟಿದ್ದಾರೆ. ಇಷ್ಟು ದಿನ ಸುಮ್ಮನಿದ್ದೆವು. ಇನ್ನು ಮುಂದೆ ಸುಮ್ಮನೆ ಇರಲು ಸಾಧ್ಯವಿಲ್ಲ. ಪಕ್ಷದ ನಾಯಕರ ತೇಜೋವಧೆ ಮುಂದುವರಿಸಿದರೆ ಸಹಿಸಲ್ಲ. ಪ್ರಚಾರ ಪ್ರಿಯರು, ಅಧಿಕಾರ ಲಾಲಸೆ, ಅವರೊಬ್ಬರೇ ಪ್ರಾಮಾಣಿಕರಾ? ಕಾರ್ಯಕರ್ತರು ರೇಣುಕಾಚಾರ್ಯ ಆರೋಪ, ಟೀಕೆ ಗಂಭೀರವಾಗಿ ಪರಿಗಣಿಸಬಾರದು ಎಂದೆಲ್ಲಾ ಹೇಳುವ ಮೂಲಕ ಬಿಜೆಪಿಯು ಒಡೆದ ಮನೆ ಎಂಬುದು ಸಾಬೀತಾಗುವಂತೆ ಮಾಡಿತ್ತು.
ಸಿದ್ದೇಶ್ವರ ವಿರುದ್ಧ ಅಸ್ತ್ರ…?
ಈ ಬೆಳವಣಿಗೆ ಆದ ಬೆನ್ನಲ್ಲೇ ಚನ್ನಗಿರಿ ತಾಲೂಕಿನ ಮಾಡಾಳ್ ಗ್ರಾಮಕ್ಕೆ ಭೇಟಿ ನೀಡಿ ಮಾಡಾಳ್ ವಿರೂಪಾಕ್ಷಪ್ಪ, ಬಿಜೆಪಿಯಿಂದ ಉಚ್ಚಾಟಿತ ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಅವರು ಬಂಧನವಾಗಿ ವಾಪಸ್ ಬಂದ ಬಳಿಕ ಸಂಸದ ಜಿ. ಎಂ. ಸಿದ್ದೇಶ್ವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಜಟಾಪಟಿಗೂ ಕಾರಣವಾಗಿತ್ತು. ಆ ಬಳಿಕ ತಣ್ಣಗಿದ್ದ ಮಾಡಾಳ್ ವಿರೂಪಾಕ್ಷಪ್ಪರನ್ನು ಮತ್ತೆ ರೇಣುಕಾಚಾರ್ಯ (M. P. Renukacharya) ಭೇಟಿ ಮಾಡಿ ಚರ್ಚೆ ಮಾಡುವ ಮೂಲಕ ಸಿದ್ದೇಶ್ವರ ಅವರ ವಿರುದ್ಧ ಒಂದೊಂದೇ ಅಸ್ತ್ರ ಪ್ರಯೋಗಿಸುವ ಪ್ರಯತ್ನ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಹೊನ್ನಾಳಿ ಹೊಡೆತ:
ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇವೆ. ಮೊದಲು ಸಿದ್ದೇಶ್ವರ ಅವರಿಗೆ ಟಿಕೆಟ್ ಕೊಟ್ಟರೆ ಗೆಲುವಿಗೆ ಶ್ರಮಿಸುವುದಾಗಿ ಹೇಳುತ್ತಿದ್ದ ರೇಣುಕಾಚಾರ್ಯ ಈಗ ಪ್ರಬಲ ಆಕಾಂಕ್ಷಿ ಎಂದು ಹೇಳಿಕೊಂಡು ಓಡಾಡಲಾರಂಭಿಸಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರ ಭೇಟಿ ಮಾಡಿದ್ದು ಕುತೂಹಲ ಕೆರಳಿಸಿತ್ತು. ಕಾಂಗ್ರೆಸ್ ಸೇರುತ್ತಾರಾ ಎಂಬ ಅನುಮಾನದ ನಡುವೆ ನಾನು ಬಿಜೆಪಿಯಲ್ಲೇ ಇದ್ದೇನೆ. ಎಲ್ಲೂ ಹೋಗಲ್ಲ, ಅವರೇನೂ ಕರೆದಿಲ್ಲ, ನಾನು ಹೋಗುತ್ತೇನೆ ಎಂದು ಹೇಳಿಲ್ಲ. ಬಿಜೆಪಿಯಲ್ಲೇ ಇದ್ದೇನೆ. ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಒಂದೆಡೆ ಹೇಳಿದರೆ ಮತ್ತೊಂದೆಡೆ ಜಿಲ್ಲಾ ಬಿಜೆಪಿ ಘಟಕಕ್ಕೆ ಸವಾಲು ಎಸೆಯಲಾರಂಭಿಸಿದ್ದಾರೆ. ಸಿದ್ದೇಶ್ವರ ಅವರ ಹೆಸರು ಹೇಳದಿದ್ದರೂ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ.
ಜಗಳೂರು ಮಾಜಿ ಶಾಸಕ ಎಸ್. ವಿ. ರಾಮಚಂದ್ರಪ್ಪ ಅವರಂತೂ ಗುರುಸಿದ್ದನಗೌಡರ ಉಚ್ಚಾಟನೆ ಪರ ನಿಂತಿದ್ದಾರೆ. ನಾನೇ ದೂರು ಕೊಟ್ಟಿದ್ದೆ. ದಾಖಲೆ ಒದಗಿಸಿದ್ದೆ. ಪಕ್ಷದ ಹೈಕಮಾಂಡ್ ಕ್ರಮ ತೆಗೆದುಕೊಂಡಿದೆ ಎಂದರೆ, ಸಂಸದ ಸಿದ್ದೇಶ್ವರ ಅವರ ವಿರುದ್ಧ ಅಪಪ್ರಚಾರ ನಡೆಸಿದರೆ ಸಹಿಸಲ್ಲ ಎಂದು ಹೇಳಿದ್ದಾರೆ. ಇದು ರೇಣುಕಾಚಾರ್ಯರ ಹೆಸರು ಹೇಳದಿದ್ದರೂ ಅವರಿಗೆ ಹೇಳಿದ ಹಾಗೆ ಇದೆ.
ರೇಣುಕಾಚಾರ್ಯ (M. P. Renukacharya) ನಡೆ, ಬಿಜೆಪಿಗೆ ಹಿನ್ನೆಡೆ:
ರೇಣುಕಾಚಾರ್ಯರ ನಡೆ ಸದ್ಯದ ಮಟ್ಟಿಗೆ ಬಿಜೆಪಿಗೆ ಮುಜುಗರ ಆಗುತ್ತಿರುವುದು ಸಹಜ. ಪಕ್ಷ ಉಚ್ಚಾಟನೆ ಮಾಡಿದವರ ಮನೆಗೆ ಹೋಗೋದು, ಚರ್ಚೆ ಮಾಡೋದು, ಉಪಾಹಾರ, ಊಟ ಸೇವಿಸುವುದನ್ನು ಮಾಡುತ್ತಿದ್ದಾರೆ. ಇದು ಸಹಜವಾಗಿಯೇ ರಾಜ್ಯ ಬಿಜೆಪಿ ಘಟಕ ಹಾಗೂ ಜಿಲ್ಲಾ ಘಟಕಕ್ಕೆ ಇರಿಸು ಮುರಿಸು ತರಿಸುತ್ತಿದೆ. ಪಕ್ಷವು ಎಲ್ಲಾ ಬೆಳವಣಿಗೆ ಗಮನಿಸುತ್ತಿದೆ. ಮೂರು ಬಾರಿ ಶಾಸಕರಾದವರು, ಸಚಿವರಾದವರು, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದವರು. ಹಾಗಾಗಿ ಉಚ್ಚಾಟನೆ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ನಾಯಕರು ಹಾಗೂ ಕೇಂದ್ರ ವರಿಷ್ಠರ ಮೇಲೆ ಹಾಕಲಾಗುತ್ತಿದೆ. ಮುಜುಗರ ಆಗುತ್ತಿರುವ ಕಾರಣ ಬಿಜೆಪಿ ಜಿಲ್ಲಾ ಘಟಕವು ಮೊದಲ ಬಾರಿಗೆ ರೇಣುಕಾಚಾರ್ಯರಿಗೆ ಎಚ್ಚರಿಕೆ ನೀಡಿದೆ. ಆದ್ರೆ, ಕಠಿಣ ಕ್ರಮ ತೆಗೆದುಕೊಳ್ಳಲು ಆಗಲ್ಲ. ವರದಿ ನೀಡುತ್ತೇವೆ. ವಿಚಾರ ತಿಳಿಸುತ್ತೇವೆ. ಪಕ್ಷಕ್ಕೆ ಹಿನ್ನೆಡೆ ಆಗುತ್ತಿರುವುದು ಸತ್ಯ ಎಂಬ ಮಾಹಿತಿ ನೀಡುವುದಾಗಿ ವೀರೇಶ್ ಹನಗವಾಡಿ ಅವರು ತಿಳಿಸಿದ್ದಾರೆ.
ಬಿಜೆಪಿ ಭದ್ರಕೋಟೆ ಛೇದಿಸಲು ಮಾಸ್ಟರ್ ಪ್ಲ್ಯಾನ್…?
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿ. ಎಂ. ಸಿದ್ದೇಶ್ವರ ಅವರಿಗೆ ಬಿಜೆಪಿ ಟಿಕೆಟ್ ಕೊಟ್ಟರೆ, ಸಿದ್ದೇಶ್ವರ ಅವರ ವಿರುದ್ಧ ಅಸಮಾಧಾನಗೊಂಡಿರುವ ನಾಯಕರನ್ನು ಒಟ್ಟುಗೂಡಿಸಿ ಏನು ಮಾಡುತ್ತಾರೆ ರೇಣುಕಾಚಾರ್ಯ ಎಂಬುದೇ ಸದ್ಯದ ಕುತೂಹಲ. ಪಕ್ಷ ವಿರೋಧಿ ಹೆಸರಿನಲ್ಲಿ ಉಚ್ಚಾಟನೆ ಒಂದೆಡೆಯಾದರೆ, ಅದೇ ಪಕ್ಷದ ನಾಯಕ ಅವರ ಮನೆಗೆ ಹೋಗುತ್ತಿರುವುದು ಸಹಜವಾಗಿಯೇ ಪಕ್ಷದ ಜಿಲ್ಲಾ ವರಿಷ್ಠರು, ರಾಜ್ಯ ನಾಯಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸುವಂತಾಗಿದೆ. ಸೌಜನ್ಯ ಭೇಟಿ, ಸೌಹಾರ್ದಯುತ ಚರ್ಚೆ ಎಂದರೂ ಇಷ್ಟು ದಿನ ಇಲ್ಲದ ವಿಚಾರ ವಿಧಾನಸಭೆ ಚುನಾವಣೆ ಮುಗಿದು ನಾಲ್ಕು ತಿಂಗಳ ನಂತರ ಯಾಕೆ ಎಂಬ ಪ್ರಶ್ನೆ ಸಹಜವಾಗಿಯೇ ಕಾಡಲಾರಂಭಿಸಿದೆ. ಬಿಜೆಪಿಯ ಭದ್ರಕೋಟೆ ಛಿದ್ರಿಸಲು ಬಿಜೆಪಿಯ ನಾಯಕರೇ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದಾರಾ ಎಂಬ ಅನುಮಾನವೂ ಕಾಡಲಾರಂಭಿಸಿದೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರ ನಡುವೆ ವಾಕ್ಸಮರ ನಡೆಯುವ ಹೊತ್ತಿನಲ್ಲೇ ಮಲ್ಲಿಕಾರ್ಜುನ್ ನಿವಾಸಕ್ಕೆ ರೇಣುಕಾಚಾರ್ಯ ಭೇಟಿ ನೀಡಿದ್ದರು. ಅಲ್ಲಿಂದ ರೇಣುಕಾಚಾರ್ಯರ ವಾಗ್ಬಾಣಗಳೂ ಜೋರಾಗಿವೆ. ಪಕ್ಷದ ನಾಯಕತ್ವ, ಈಗಿನ ನಾಯಕತ್ವ, ಹಾಲಿ ರಾಜ್ಯಾಧ್ಯಕ್ಷರ ವಿರುದ್ಧದ ಟೀಕೆ ಜೋರಾಗಿಯೇ ನಡೆಯುತ್ತಿದೆ. ಒಟ್ಟಾರೆಯಾಗಿ ರೇಣುಕಾಚಾರ್ಯರ ವರ್ತನೆ, ಕೊಡುತ್ತಿರುವ ಹೇಳಿಕೆಗಳಿಂದ ಹೇಗೆ ಡ್ಯಾಮೇಜ್ ಕಂಟ್ರೋಲ್ ಮಾಡೋದು ಎಂಬ ಟೆನ್ಶನ್ ಬಿಜೆಪಿ ನಾಯಕರಲ್ಲಿ ಶುರುವಾಗಿರುವುದಂತೂ ಸತ್ಯ. ಯಾವ ನಿರ್ಧಾರವನ್ನು ಬಿಜೆಪಿ ಕೇಂದ್ರ ನಾಯಕರು ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.