SUDDIKSHANA KANNADA NEWS/ DAVANAGERE/ DATE:10-09-2023
ದಾವಣಗೆರೆ: ನನ್ನ ಮೇಲೆ ತೂಗುಕತ್ತಿ ತೂಗುತ್ತಿದೆ ಎಂಬುದು ಗೊತ್ತು. ನೊಟೀಸ್ ಗೆ ಉತ್ತರ ಕೊಡುವುದಿಲ್ಲ. ಗ್ರಾಮ ಪಂಚಾಯಿತಿ ಗೆಲ್ಲೋಕೆ ಆಗದೇ ಇರುವವರು ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರನ್ನು ಕಡೆಗಣಿಸಿದ್ದೇ ನಮ್ಮ ಸೋಲಿಗೆ ಕಾರಣ. ಹೋರಾಟ, ಮತ ಕೇಳಲು ಅಷ್ಟೇ ಮಾಜಿ ಸಿಎಂ ಯಡಿಯೂರಪ್ಪರು ಬೇಕಾ ಎಂದು ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya) ಅವರು ರಾಜ್ಯ ಬಿಜೆಪಿ ನಾಯಕರಿಗೆ ಪ್ರಶ್ನೆ ಹಾಕಿದ್ದಾರೆ. ಮಾತ್ರವಲ್ಲ, ನೊಟೀಸ್ ಗೆ ಉತ್ತರ ಕೊಡಲ್ಲ, ಯಾರಿಗೂ ಹೆದರಲ್ಲ, ಭಯವೂ ಇಲ್ಲ. ಯಾರೂ ನನ್ನನ್ನು ಏನು ಮಾಡಲು ಆಗದು ಎನ್ನುವ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ನಾನೊಂದು ತೀರ ನೀನೊಂದು ತೀರ ಅಂದ್ರು ಅಂದು…. ಒಂದಾಗೋಣ ಬಾ ಅಂದ್ರು ಇಂದು: ಕಠೋರ ನಿರ್ಧಾರ ಬದಲಿಸುವಂತೆ ಮಾಡಿದ್ರು ಮಕ್ಕಳು, ನ್ಯಾಯಾಧೀಶರು…!
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿಯಿಂದ ಬಂದಿರುವ ನೊಟೀಸ್ ಗೆ ಉತ್ತರ ಕೊಡಲ್ಲ. ನಾನು ತಪ್ಪು ಮಾಡಿಲ್ಲ. ಬಿ. ಎಸ್. ಯಡಿಯೂರಪ್ಪ ಅವರ ವಿರುದ್ಧ ಮಾತನಾಡಿದವರ ವಿರುದ್ಧ ಇದುವರೆಗೆ ಯಾಕೆ ಕ್ರಮ ತೆಗೆದುಕೊಂಡಿಲ್ಲ. ಎರಡು ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಯಡಿಯೂರಪ್ಪರನ್ನು ಬಲವಂತವಾಗಿ ನಮ್ಮವರೇ ಕುತಂತ್ರ ಮಾಡಿ ಕೆಳಗಿಳಿಸಿದರು. ಆಮೇಲೆ ಅವರೇ ಬೇಕಾಯಿತು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಎಸ್ ವೈ ಅವರಿದ್ದ ಕಾರಣ 25 ಸ್ಥಾನಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಈಗ ಚುನಾವಣೆ ಬಂದಿದೆ ಎಂಬ ಕಾರಣಕ್ಕೆ ಯಡಿಯೂರಪ್ಪರನ್ನು ಬಳಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಅವರಿಗೆ ಸಂಪೂರ್ಣ ಜವಾಬ್ದಾರಿ ಮತ್ತು ಪವರ್ ನೀಡಬೇಕು ಎಂದು ಆಗ್ರಹಿಸಿದರು.
ಕಳೆದ ವಿಧಾನಸಭೆ ಚುನಾವಣೆಯ ಸೋಲಿಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾನೊಬ್ಬನೇ ಸೋತಿಲ್ಲ. ಬಿಜೆಪಿಯ ಹಲವರು ನಾಯಕರು ಸೋಲು ಕಂಡಿದ್ದಾರೆ. ದೇಶಕ್ಕೆ ಮೋದಿ. ರಾಜ್ಯಕ್ಕೆ ಯಡಿಯೂರಪ್ಪ. ನಾಡಿನ ಕಾರ್ಯಕರ್ತರು,
ಮುಖಂಡರು ಹೇಳುವ ಪ್ರಕಾರ ಬಿಎಸ್ ವೈ ಪಕ್ಷಾತೀತ ನಾಯಕರು. ಯಡಿಯೂರಪ್ಪ ವೀರಶೈವ ಲಿಂಗಾಯತರಿಗೆ ಮಾತ್ರ ನಾಯಕರಲ್ಲ, ಅಲ್ಪಸಂಖ್ಯಾತರು, ಎಸ್ಸಿ, ಎಸ್ಟಿ ಸೇರಿದಂತೆ ಎಲ್ಲಾ ಸಮಾಜದ ನಾಯಕರು. ಬಹಳಷ್ಟು ಸಮುದಾಯದ
ಮುಖಂಡರು ಅವರನ್ನು ಒಪ್ಪುತ್ತಾರೆ ಎಂದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೆ. ಎಸ್. ಈಶ್ವರಪ್ಪ, ದಿವಂಗತ ಅನಂತಕುಮಾರ್ ಸೇರಿದಂತೆ ಹಲವು ನಾಯಕರು ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ್ದಾರೆ. ಮಾಸ್ ಲೀಡರ್ ಯಡಿಯೂರಪ್ಪ. ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಗಟ್ಟಿ ಇಲ್ಲ.
ಇಂಥ ಶಕ್ತಿ ಬರಬೇಕಾದರೆ ಮತ್ತೆ ಯಡಿಯೂರಪ್ಪ ಅವರೇ ಬೇಕು. ಈಗ ರಾಜ್ಯ ನಾಯಕರಿಗೆ ಗೊತ್ತಾಗಿದೆ. ಯಡಿಯೂರಪ್ಪ ಅವರನ್ನು ಬಿಟ್ಟು ಗೆಲ್ಲಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾಗಿದೆ. ಹಾಗಾಗಿ ಬಿ ಎಸ್ ವೈ ಅವರ ಹೆಸರು ಬಳಸಿಕೊಂಡು
ಲೋಕಸಭೆಯಲ್ಲಿ ಗೆಲ್ಲಬಹುದು ಎಂದು ಕೆಲವರು ಅಂದುಕೊಂಡಿದ್ದಾರೆ. ಹೋರಾಟ ಹಾಗೂ ಮತ ಕೇಳಲು ಮಾತ್ರ ಯಡಿಯೂರಪ್ಪರು ಬೇಕಾ? ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಂಗ್ರೆಸ್ ನ ಯಾವುದೇ ಮುಖಂಡರು ನನ್ನನ್ನು ಕಾಂಗ್ರೆಸ್ ಗೆ ಆಹ್ವಾನಿಸಿಲ್ಲ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್, ಸಚಿವರು, ನಾಯಕರು ನನಗೆ ಆಹ್ವಾನ
ಕೊಟ್ಟಿಲ್ಲ. ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ನಾನು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಆಕಾಂಕ್ಷಿ ಎಂದಿದ್ದೇನೆ. ಗುರುಸಿದ್ದನಗೌಡರ ಪುತ್ರ ಅವರೂ ಸಹ ಆಕಾಂಕ್ಷಿ ಎಂದಿದ್ದಾರೆ. ಪಕ್ಷದ ಹೈಕಮಾಂಡ್ ಯಾವ
ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡೋಣ. ಅವರು ಕರೆದಿಲ್ಲ, ನಾನು ಹೋಗ್ತೇನೆ ಎಂದು ಹೇಳಿಲ್ಲ. ನಾನು ಈಗಲೂ ಬಿಜೆಪಿಯವನೇ. ಮುಖಂಡರು, ಕಾರ್ಯಕರ್ತರು ನನ್ನನ್ನು ಬೆಳೆಸಿದ್ದಾರೆ. ಅವರ ಅಭಿಪ್ರಾಯ ಕೇಳುತ್ತೇನೆ. ಹೊನ್ನಾಳಿ –
ನ್ಯಾಮತಿ ತಾಲೂಕಿನ ಜನರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಬಿಜೆಪಿಯು ಯಡಿಯೂರಪ್ಪ ಅವರನ್ನು ಕಡೆಗಣನೆ ಮಾಡಿದ್ದರಿಂದ ಬಹಳಷ್ಟು ಡ್ಯಾಮೇಜ್ ಆಗಿದೆ. ಹೊಡೆತ ಬಿದ್ದ ಮೇಲೆ ಈಗ ಹೇಳ್ತಾರೆ. ದೇಶಕ್ಕೆ ಮೋದಿ, ರಾಜ್ಯಕ್ಕೆ ಯಡಿಯೂರಪ್ಪರ ವರ್ಚಸ್ಸು ಬೇಕು. ಬೂತ್ ಮಟ್ಟದಲ್ಲಿಯೂ ಬಿಜೆಪಿ ಬೆಳೆಸಿದ್ದು ಯಡಿಯೂರಪ್ಪ. ಅಧಿಕಾರಕ್ಕೆ ತಂದಿದ್ದೂ ಅವರು. ಯಡಿಯೂರಪ್ಪರಿಗೆ ತುಂಬಾ ಜನರು ಸಹಕಾರ ನೀಡಿದ್ದಾರೆ. ಯಡಿಯೂರಪ್ಪರನ್ನು ಬಳಸಿಕೊಳ್ಳುವುದಲ್ಲ. ಪಕ್ಷ ಕಟ್ಟದವರು ಬಿಜೆಪಿ ಕಚೇರಿಯಲ್ಲಿ ಬಂದು ಕುಳಿತಿದ್ದಾರೆ. ನನಗೆ ಯಾರ
ಭಯವೂ ಇಲ್ಲ. ನಿರ್ಭೀತಿಯಿಂದ ಮಾತನಾಡುತ್ತೇನೆ. ನನ್ನನ್ನು ಏನೂ ಮಾಡಲಿಕ್ಕೆ ಆಗಲ್ಲ. ನಾನು ಬಿಜೆಪಿ ರಾಜ್ಯಾಧ್ಯಕ್ಷರೂ ಸೇರಿದಂತೆ ಎಲ್ಲರನ್ನೂ ಭೇಟಿ ಮಾಡಿ ಹೇಳಿದ್ದೇನೆ. ಎಲ್ಲರೂ ಯಡಿಯೂರಪ್ಪ ಅವರನ್ನು ಕಡೆಗಣಿಸಬಾರದಿತ್ತು ಎಂದು
ಹೇಳಿದ್ದಾರೆ ಅಷ್ಟೇ. ಈಗ ಯಡಿಯೂರಪ್ಪನವರ ಜಪ ಹೋರಾಟಕ್ಕೆ. ಹೋರಾಟ, ಮತಗಳು ಬೇಕು ಎಂದು ಗುಡುಗಿದರು.
ಇನ್ನು ರೇಣುಕಾಚಾರ್ಯ ಅವರು ದಿನ ಕಳೆದಂತೆ ಬಿಜೆಪಿ ನಾಯಕರ ವಿರುದ್ಧ ಆರೋಪ ಮಾಡುತ್ತಿರುವುದನ್ನು ಗಮನಿಸಿದರೆ ಕಾಂಗ್ರೆಸ್ ಪಕ್ಷ ಸೇರುತ್ತಾರೋ ಇಲ್ಲವೋ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಕೆಲಸ ಮಾಡದೇ ತಟಸ್ಥರಾಗಿ ಉಳಿಯುತ್ತಾರೋ? ಟಿಕೆಟ್ ಸಿಗದಿದ್ದರೆ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಚರ್ಚೆಗಳು ಆರಂಭವಾಗಿವೆ. ಒಟ್ಟಾರೆ ರೇಣುಕಾಚಾರ್ಯರ ನಡೆ ಬಿಜೆಪಿಗೆ ದಿನೇ ದಿನೇ ಇರಿಸು ಮುರಿಸು ಹೆಚ್ಚಾಗುವಂತೆ ಮಾಡುತ್ತಲೇ ಇದೆ. ಆದ್ರೆ, ರಾಜ್ಯ ಹಾಗೂ
ರಾಷ್ಟ್ರ ನಾಯಕರು ಈ ಬೆಳವಣಿಗೆ ಗಮನಿಸುತ್ತಿದ್ದು, ಮುಂದೆ ಏನು ತೀರ್ಮಾನ ತೆಗೆದುಕೊಳ್ಳಬಹುದು ಅಥವಾ ಸುಮ್ಮನೆ ಇದ್ದುಬಿಡಬಹುದಾ ಎಂಬ ಕುತೂಹಲವೂ ಗರಿಗೆದರಿದೆ.