SUDDIKSHANA KANNADA NEWS/ DAVANAGERE/ DATE:18-09-2023
ದಾವಣಗೆರೆ: ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿರುವ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ (M. P. Renukacharya), ನನ್ನ ಬಗ್ಗೆ ಹಗುರವಾಗಿ ಮಾತನಾಡಿದರೆ ಹುಷಾರ್. ವೀರೇಶ್ ಹನಗವಾಡಿಯಂಥವರಿಂದಲೇ ಬಿಜೆಪಿ ಸರ್ವನಾಶವಾಗುತ್ತಿದೆ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಈ ಸುದ್ದಿಯನ್ನೂ ಓದಿ:
Davanagere: ಬಿಜೆಪಿ ಪ್ರೊಗ್ರಾಂಗೆ ಆಬ್ಸೆಂಟ್… ಎಸ್. ಎಸ್. ಎಂ. ನಿವಾಸದಲ್ಲಿ ರೇಣುಕಾಚಾರ್ಯ ಪ್ರೆಸೆಂಟ್… ಮತ್ತೆ ಸಚಿವರ ಮನೆ ಕದ ತಟ್ಟಿದ ಮಾಜಿ ಮಿನಿಸ್ಟರ್…!
ಎಂಸಿಸಿ ಬಿ ಬ್ಲಾಕ್ ನಲ್ಲಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ವೀರೇಶ್ ಹನಗವಾಡಿ ನನ್ನ ಬಗ್ಗೆ ಹಗುರವಾಗಿ ಮಾತನಾಡಲು ಯಾರು? ನೂರಾರು ಮುಖಂಡರು ಇವರ ದೌರ್ಜನ್ಯದಿಂದ ಪಕ್ಷ ಬಿಟ್ಟು ಹೋಗಿದ್ದಾರೆ. ಬಿಜೆಪಿ ಕಟ್ಟಿದವರು ಈಗ ಎಲ್ಲಿದ್ದಾರೆ. ಮಧ್ಯ ಬಂದವರು ಇವ್ರು. ವಿಧಾನಸಭೆ ಚುನಾವಣೆಯಲ್ಲಿ ನೀನು ಯಾವ ಕ್ಷೇತ್ರಕ್ಕೆ ಹೋಗಿ ಭೇಟಿ ಕೊಟ್ಟಿದ್ದೀಯಾ. ಯಾರನ್ನೂ ಶಾಸಕರನ್ನಾಗಿ ಆಯ್ಕೆ ಮಾಡಲು ಶ್ರಮಿಸಿದ್ದೀಯಾ ಎಂದು ಏಕವಚನದಲ್ಲಿಯೇ M. P. Renukacharya ಟೀಕಾಪ್ರಹಾರ ನಡೆಸಿದರು.
ನನ್ನ ಬಗ್ಗೆ ಹಗುರವಾಗಿ ಮಾತನಾಡುವ ನೈತಿಕ ಹಕ್ಕಿಲ್ಲ. ಬಿಜೆಪಿ ಸರ್ವನಾಶವಾಗುತ್ತಿರುವುದು ನಿಮ್ಮಂಥವರಿಂದ. ಬಿಜೆಪಿಯ ನೂರಾರು ಮುಖಂಡರು ಇವರ ದೌರ್ಜನ್ಯದಿಂದ ಬೇಸತ್ತು ಹೋಗಿದ್ದಾರೆ. ಕೃಷ್ಣಮೂರ್ತಿ ಪವಾರ್ ಸೇರಿದಂತೆ ನೂರಾರು ನಾಯಕರು ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದಾರೆ. ನನ್ನ ಬಳಿಯೂ ಪಟ್ಟಿಯಿದೆ. ಜಿಲ್ಲೆಗೆ ಬಿಜೆಪಿ ಜಿಲ್ಲಾಧ್ಯಕ್ಷರ ಕೊಡುಗೆ ಏನು. ಹೊನ್ನಾಳಿ -ನ್ಯಾಮತಿ ತಾಲೂಕಿನ ಜನರು, ಬಿಜೆಪಿ ಮುಖಂಡರು ಶಾಸಕರನ್ನಾಗಿ ನನ್ನನ್ನು ಮಾಡಿದ್ದಾರೆ. ಬಿಜೆಪಿ ಪಕ್ಷ ನನಗೆ ತಾಯಿ ಸಮಾನ. ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಗೌರವವಿದೆ ಎಂದು ತಿಳಿಸಿದರು.
ಹೊನ್ನಾಳಿಯಲ್ಲಿ ನಾನು ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಪಾದಯಾತ್ರೆ, ನೂರಾರು ಹೋರಾಟ ಮಾಡಿದ್ದೇನೆ. ಜೈಲಿಗೆ ಹೋಗಿದ್ದೇನೆ. ಜಾತಿ ನೋಡಿ ರಾಜಕಾರಣ ಮಾಡಿಲ್ಲ. 2 ಸಾವಿರವೂ ಸಹ ನನ್ನ ಜಾತಿ ಮತಗಳಿಲ್ಲ. ಜಾತಿ ನೋಡಿ
ನನ್ನ ಜೊತೆ ಯಾರೂ ಇಲ್ಲ. 70ರಿಂದ 75 ಸಾವಿರದಷ್ಟು ಮತ ಪಡೆದಿದ್ದೇನೆ ಎಂದು ವೀರೇಶ್ ಹನಗವಾಡಿಗೆ ತಿರುಗೇಟು ನೀಡಿದರು.
ಜಗದೀಶ್ ಶೆಟ್ಟರ್ ಫೋನ್ ಮಾಡಿದ್ದು ನಿಜ: ಎಂ. ಪಿ. ರೇಣುಕಾಚಾರ್ಯ (M. P. Renukacharya)
ಮಾಜಿ ಸಿಎಂ, ಕಾಂಗ್ರೆಸ್ ನಾಯಕ ಜಗದೀಶ್ ಶೆಟ್ಟರ್ ನನಗೆ ಫೋನ್ ಮಾಡಿದ್ದು ನಿಜ. ಯಾಕೆ ಫೋನ್ ಮಾಡಬಾರದಾ? ವಿಶ್ವಾಸದಲ್ಲಿ ಮಾತನಾಡಿದರು. ನಾನು ಮಲ್ಲಿಕಾರ್ಜುನ್ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಬಾರದಾ? ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರನ್ನು ಭೇಟಿ ಮಾಡಿಲ್ವಾ. ನಾನು ರೈತರ ಪರ ಬಂದಿದ್ದೇನೆ. ನಮ್ಮದು ರಾಜಕೀಯ ಮೀರಿದ ವಿಶ್ವಾಸ, ಪ್ರೀತಿ. ಮಲ್ಲಿಕಾರ್ಜುನ್ ಅವರ ನಿವಾಸಕ್ಕೆ ಆಗಮಿಸಿದ್ದು ಸೌಜನ್ಯಕ್ಕೆ. ಇದೊಂದು ಸೌಹಾರ್ದಯುತ ಭೇಟಿ ಅಷ್ಟೇ. ಯಾವುದೇ ರಾಜಕಾರಣ ಚರ್ಚೆ ಮಾಡಿಲ್ಲ. ಹೊನ್ನಾಳಿ – ನ್ಯಾಮತಿ ತಾಲೂಕಿನ ಯೋಜನೆಗಳ ಅನುದಾನ ಬಂದಿಲ್ಲ. ಹಾಗಾಗಿ, ಸಚಿವರನ್ನು ಭೇಟಿ ಮಾಡಿದ್ದೇನೆ ಎಂದರು.
ಎಸ್. ಎಸ್. ಮಲ್ಲಿಕಾರ್ಜುನ್ ಅವರು ತಮಾಷೆ ಮಾಡಿದ್ದಾರೆ. ಕಾಂಗ್ರೆಸ್ ಗೆ ಬನ್ನಿ ಎಂದು ಅವರೂ ಅಧಿಕೃತ ಆಹ್ವಾನ ಕೊಟ್ಟಿಲ್ಲ. ನಾನು ಬರುತ್ತೇನೆ ಎಂದೂ ಎಲ್ಲಿಯೂ ಹೇಳಿಲ್ಲ. ಮಾಧ್ಯಮದವರು ಮಾತ್ರ ಈ ರೀತಿಯ ಸುದ್ದಿ ಮಾಡುತ್ತಿದ್ದಾರೆ. ನಾನೆಲ್ಲೂ ಹೋಗಲ್ಲ. ಕೋವಿಡ್ ವೇಳೆಯಲ್ಲಿ ಒಳ್ಳೆಯ ಕೆಲಸ ಮಾಡಿದ್ದೀರಾ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ ಹಾಗೂ ಮಲ್ಲಿಕಾರ್ಜುನ್ ಅವರು ಪ್ರಶಂಸೆ ವ್ಯಕ್ತಪಡಿಸಿದರು. ಒಳ್ಳೆ ಕೆಲಸ ಯಾರೇ ಮಾಡಿದರೂ ಪ್ರಶಂಸಿಸುತ್ತಾರೆ ಎಂದು ಹೇಳಿದರು.
ಭದ್ರಾ ನಾಲೆಯಲ್ಲಿ ನೀರು ನಿಲುಗಡೆ ಮಾಡಲಾಗಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರ ಜೊತೆ ಚರ್ಚೆ ಮಾಡಿದ್ದೇನೆ. ಈ ವಿಚಾರವನ್ನು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್.
ಮಲ್ಲಿಕಾರ್ಜುನ್ ಜೊತೆ ಸಮಾಲೋಚನೆ ನಡೆಸಿದ್ದೇನೆ. ವೈಯಕ್ತಿಕ ಭೇಟಿ ಅಲ್ಲ. ಕ್ಷೇತ್ರದ ಜನರ ಕೆಲಸಕ್ಕಾಗಿ ಬಂದಿರುವೆ. ರಾಜಕೀಯ ಮೀರಿದ ಪ್ರೀತಿ, ವಿಶ್ವಾಸ ನಮ್ಮದು. ರಾಜಕೀಯ ಚರ್ಚೆಯಾಗಿಲ್ಲ ಎಂದರು.
ನಾನೂ ಪ್ರಬಲ ಆಕಾಂಕ್ಷಿ ಎಂದ ರೇಣುಕಾಚಾರ್ಯ (M. P. Renukacharya):
ದಾವಣಗೆರೆ ಲೋಕಸಭೆ ಚುನಾವಣೆಗೆ ನಾನು ಸಹ ಬಿಜೆಪಿ ಪ್ರಬಲ ಆಕಾಂಕ್ಷಿ. ಹಲವು ಬಾರಿ ಹೇಳಿದ್ದೇನೆ. ಈಗ ಕಾಂಗ್ರೆಸ್ ಅಧಿಕಾರದಲ್ಲಿದೆ. ನನಗೆ ಹೇಗೆ ಟಿಕೆಟ್ ಕೊಡ್ತಾರೆ. ಸಾಮಾನ್ಯ ಕಾರ್ಯಕರ್ತ ಅಷ್ಚೇ ಎಂದರು.