ಲಕ್ನೋ: ತಂದೆ ತೀರಿಕೊಂಡ ಬೆನ್ನಲ್ಲೇ ಅವರ ಮೃತದೇಹದ ಬೆರಳಚ್ಚನ್ನು (Thumbprint) ಖಾಲಿ ಕಾಗದದ ಮೇಲೆ ಪಡೆದು, ಸಹೋದರಿಯರಿಗೆ ಸೇರಬೇಕಾದ ಆಸ್ತಿಯನ್ನು ಕಬಳಿಸಲು ಯತ್ನಿಸಿದ ಅಮಾನವೀಯ ಘಟನೆಯೊಂದು ಉತ್ತರ ಪ್ರದೇಶದ ಲಕ್ನೋ ಸಮೀಪದ ಖರೌಹಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಘಟನೆಯ ವಿವರ:
ಮೃತ ವೃದ್ಧನನ್ನು ಛತ್ರಪಾಲ್ (75) ಎಂದು ಗುರುತಿಸಲಾಗಿದೆ. 2023ರಲ್ಲಿ ಛತ್ರಪಾಲ್ ಹಾಗೂ ಅವರ ಪತ್ನಿಯನ್ನು ಮಗ ಮಹೇಂದ್ರ ಮತ್ತು ಸೊಸೆ ಲಕ್ಷ್ಮಿ ಮನೆಯಿಂದ ಹೊರಹಾಕಿದ್ದರು. ತರುವಾಯ, ಛತ್ರಪಾಲ್ ತಮ್ಮ ಮೂವರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದರು. ಹೆಣ್ಣುಮಕ್ಕಳ ಹಾರೈಕೆಯಿಂದ ಪ್ರಭಾವಿತರಾಗಿದ್ದ ಛತ್ರಪಾಲ್, ತಮ್ಮ ಒಟ್ಟು 6.5 ಬಿಘಾ ಜಮೀನಿನಲ್ಲಿ ತಲಾ ಒಂದು ಬಿಘಾ ಜಮೀನನ್ನು ಮೂವರು ಹೆಣ್ಣುಮಕ್ಕಳಿಗೆ ನೀಡಿದ್ದರು. ಜೊತೆಗೆ, ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಮಗ ಹಾಗೂ ಸೊಸೆಯನ್ನು ಆಸ್ತಿಯಿಂದ ಹಕ್ಕುಚ್ಯುತಿ (Disinherit)ಗೊಳಿಸಿದ್ದರು.
ಜುಲೈ 7 ರಂದು ಛತ್ರಪಾಲ್ ಅವರ ಆರೋಗ್ಯ ಕ್ಷೀಣಿಸಿದಾಗ, ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಮಗ ಮಹೇಂದ್ರ ಅವರನ್ನು ಗ್ರಾಮಕ್ಕೆ ಕರೆದೊಯ್ದಿದ್ದ. ಆದರೆ, ಜುಲೈ 9 ರಂದು ಛತ್ರಪಾಲ್ ಮೃತಪಟ್ಟರು. ಅಂತ್ಯಕ್ರಿಯೆಯ ಸಮಯದಲ್ಲಿ ಮಹೇಂದ್ರ ತಮ್ಮ ತಂದೆಯ ಶವದ ಹೆಬ್ಬೆರಳ ಗುರುತನ್ನು ಖಾಲಿ ಪತ್ರಗಳ ಮೇಲೆ ಬಲವಂತವಾಗಿ ಪಡೆದುಕೊಳ್ಳುತ್ತಿರುವುದನ್ನು ಸಂಬಂಧಿಕರು ಹಾಗೂ ಗ್ರಾಮಸ್ಥರು ಕಂಡು ವಿಡಿಯೋ ಮಾಡಿದ್ದು, ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಹೆಣ್ಣುಮಕ್ಕಳು ಹಾಗೂ ಅವರ ಕುಟುಂಬದವರು ಆತಂಕ ವ್ಯಕ್ತಪಡಿಸಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದಾರೆ.





Leave a comment