ಚಂಡೀಗಢ: ಪಂಜಾಬ್ನ ಲುಧಿಯಾನ ಜಿಲ್ಲೆಯ ಫತೇಗಢ್ ಗುಜ್ರಾನ್ ಗ್ರಾಮದ ಚಮನ್ ಲಾಲ್ (65) ಎಂಬ ವೃದ್ಧರು ತೀರ್ಥಯಾತ್ರೆಗೆ ತೆರಳಿದ್ದಾಗ ದಾರಿ ತಪ್ಪಿ 1,200 ಕಿಲೋಮೀಟರ್ಗೂ ಹೆಚ್ಚು ದೂರದ ಬಿಹಾರದ ಗಯಾ ತಲುಪಿದ್ದರು. ನೆನಪಿನ ಶಕ್ತಿಯ ಸಮಸ್ಯೆಯಿಂದ ಬಳಲುತ್ತಿದ್ದ ಈ ವೃದ್ಧರನ್ನು ಬಿಹಾರದ ಯುವಕನೋರ್ವ ಎಐ ತಂತ್ರಜ್ಞಾನವಾದ ChatGPT ಮತ್ತು ಇಂಟರ್ನೆಟ್ ಶೋಧನೆಯ ಮೂಲಕ ಅವರ ಕುಟುಂಬಕ್ಕೆ ಸುರಕ್ಷಿತವಾಗಿ ಸೇರಿಸಿದ ಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಯಾತ್ರೆಯಲ್ಲಿ ದಾರಿ ತಪ್ಪಿದ್ದ ವೃದ್ಧ:
ಸೆಪ್ಟೆಂಬರ್ 11 ರಂದು ಪಂಜಾಬ್ ಸರ್ಕಾರದ ‘ಮುಖ್ಯಮಂತ್ರಿ ತೀರ್ಥಯಾತ್ರೆ ಯೋಜನೆ’ಯಡಿಯಲ್ಲಿ ಚಮನ್ ಲಾಲ್ ಅವರು ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ (ಸ್ವರ್ಣ ಮಂದಿರ) ದರ್ಶನಕ್ಕಾಗಿ ತೆರಳಿದ್ದರು. ನೆನಪಿನ ಶಕ್ತಿ ಸರಿಯಿಲ್ಲದ ಕಾರಣ ಅವರು ಅಮೃತಸರದಲ್ಲಿ ತಮ್ಮ ತಂಡದಿಂದ ಬೇರ್ಪಟ್ಟು ರೈಲ್ವೆ ನಿಲ್ದಾಣದತ್ತ ತೆರಳಿದ್ದಾರೆ. ಅಲ್ಲಿಂದ ಬಿಹಾರಕ್ಕೆ ಹೋಗುವ ರೈಲನ್ನು ಹತ್ತಿದ ಅವರು ಗಯಾ ರೈಲ್ವೆ ನಿಲ್ದಾಣಕ್ಕೆ ತಲುಪಿದ್ದರು.
ಅಪರಿಚಿತ ಯುವಕನ ಮಾನವೀಯತೆ:
ಗಯಾದಲ್ಲಿ ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುವ ನೀರಜ್ ಎಂಬ ಯುವಕ, ರೈಲ್ವೆ ನಿಲ್ದಾಣದ ಬಳಿ ಹಸಿವಿನಿಂದ ಕಂಗಾಲಾಗಿದ್ದ ವೃದ್ಧ ಚಮನ್ ಲಾಲ್ ಅವರನ್ನು ಗಮನಿಸಿದರು. ವೃದ್ಧರಿಗೆ ತಮ್ಮ ಹೆಸರು ಅಥವಾ ಪೂರ್ಣ ವಿಳಾಸ ಹೇಳಲು ಸಾಧ್ಯವಾಗುತ್ತಿರಲಿಲ್ಲ. ಅವರು ಹೇಳುತ್ತಿದ್ದ ಒಂದೇ ಒಂದು ಸುಳಿವು ಅಂದರೆ ಅವರ ಊರಿನ ಹೆಸರು ‘ಫತೇಗಢ್ ಗುಜ್ರಾನ್’.
ನೀರಜ್ ತಕ್ಷಣವೇ ಅವರನ್ನು ತಮ್ಮ ಮನೆಗೆ ಕರೆದೊಯ್ದು, ಊಟ ನೀಡಿ, ಕಳೆದ 4 ದಿನಗಳಿಂದ ತಮ್ಮ ಕುಟುಂಬದೊಂದಿಗೆ ಆಶ್ರಯ ನೀಡಿದರು. ವೃದ್ಧರು ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತಿದ್ದುದನ್ನು ಗಮನಿಸಿದ ನೀರಜ್, ಈ ಗ್ರಾಮವು ಪಂಜಾಬ್ನಲ್ಲೇ ಇರಬೇಕು ಎಂದು ಅಂದಾಜಿಸಿದರು.
ChatGPT ಸಹಾಯದಿಂದ ಗ್ರಾಮದ ಪತ್ತೆ:
ಕೇವಲ ‘ಫತೇಗಢ್ ಗುಜ್ರಾನ್’ ಎಂಬ ಹೆಸರನ್ನೇ ಇಟ್ಟುಕೊಂಡು ನೀರಜ್ ಗೂಗಲ್ ಹಾಗೂ ChatGPT ನಲ್ಲಿ ಸತತ 3 ದಿನಗಳ ಕಾಲ ಹುಡುಕಾಟ ನಡೆಸಿದರು. ಅಂತಿಮವಾಗಿ ಈ ಗ್ರಾಮವು ಪಂಜಾಬ್ನ ಲುಧಿಯಾನ ಜಿಲ್ಲೆಯ ಮಾಚೀವಾರ ಸಾಹಿಬ್ ಬಳಿ ಇದೆ ಎಂಬುದನ್ನು ಎಐ ಸಹಾಯದಿಂದ ಕಂಡುಹಿಡಿದರು.
ಗಯಾದಿಂದ ಪಂಜಾಬ್ಗೆ ಸುದೀರ್ಘ ಪ್ರಯಾಣ:
ವೃದ್ಧರನ್ನು ಏಕಾಂಗಿಯಾಗಿ ಕಳುಹಿಸಲು ಇಷ್ಟಪಡದ ನೀರಜ್, ಸ್ವತಃ ತಾವೇ ಚಮನ್ ಲಾಲ್ ಅವರನ್ನು ಕರೆದುಕೊಂಡು ಗಯಾದಿಂದ ಪಂಜಾಬ್ನ ಲುಧಿಯಾನಗೆ ಮತ್ತು ಅಲ್ಲಿಂದ ಮಾಚೀವಾರಕ್ಕೆ ಪ್ರಯಾಣ ಬೆಳೆಸಿದರು. ಮಾಚೀವಾರದಲ್ಲಿ ವೃದ್ಧರ ಛಾಯಾಚಿತ್ರವನ್ನು ಸ್ಥಳೀಯರಿಗೆ ತೋರಿಸುತ್ತಿದ್ದಾಗ, ಮಾಸ್ಟರ್ ಕೃಷನ್ ಲಾಲ್ ಎಂಬುವರು ಅವರನ್ನು ಗುರುತಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ನಾಪತ್ತೆ ಜಾಹೀರಾತನ್ನು ನೋಡಿದ್ದ ಕೃಷನ್ ಲಾಲ್, ತಕ್ಷಣವೇ ವೃದ್ಧರ ಮೊಮ್ಮಗ ಸುಖ್ಚೇನ್ ಸಿಂಗ್ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ತಮ್ಮ ಅಜ್ಜನನ್ನು ಕಂಡು ಭಾವುಕರಾದರು.
ಕುಟುಂಬದಿಂದ ಭವ್ಯ ಸ್ವಾಗತ:
ಅಮೃತಸರದಲ್ಲಿ ಪೊಲೀಸರಿಗೆ ದೂರು ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ಹುಡುಕಾಟ ನಡೆಸುತ್ತಿದ್ದ ಕುಟುಂಬಕ್ಕೆ ತಮ್ಮ ಹಿರಿಯ ಜೀವ ಸುರಕ್ಷಿತವಾಗಿ ಮರಳಿದ್ದು ಅಪಾರ ಸಂತಸ ತಂದಿದೆ. ವೃದ್ಧರ ಕುಟುಂಬವು ನೀರಜ್ ಅವರಿಗೆ ಹೂಮಾಲೆ ಹಾಕಿ, ಉಡುಗೊರೆ ಹಾಗೂ ಹಣ ನೀಡಿ ಗೌರವಿಸಿತು.
“ಕಷ್ಟದಲ್ಲಿದ್ದ ವೃದ್ಧರನ್ನು ನೋಡಿ ಸುಮ್ಮನೆ ಹೋಗಲು ಸಾಧ್ಯವಾಗಲಿಲ್ಲ. ಅವರ ಊರಿನ ಹೆಸರು ತಿಳಿದ ಮೇಲೆ ಅವರನ್ನು ಕುಟುಂಬಕ್ಕೆ ಸೇರಿಸುವುದು ನನ್ನ ವೈಯಕ್ತಿಕ ಹೊಣೆಗಾರಿಕೆ ಅನಿಸಿತು” ಎಂದು ನೀರಜ್ ಹೇಳಿದ್ದಾರೆ.





Leave a comment