SUDDIKSHANA KANNADA NEWS/ DAVANAGERE/ DATE:14-09-2023
ದಾವಣಗೆರೆ: ಲೋಕಾಯುಕ್ತ (Lokayukta) ದಾಳಿ ವೇಳೆ ಪತ್ತೆಯಾದ 8 ಕೋಟಿ ರೂಪಾಯಿಗೂ ಹೆಚ್ಚು ಹಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಾಡಾಳ್ ಪ್ರಶಾಂತ್ ಸೇರಿದಂತೆ ಇತರರ ವಿರುದ್ಧದ ಪ್ರಕರಣ ತನಿಖೆ ವಿಳಂಬ ಆಗಿದ್ದು, ಈ ಸಂಬಂಧ ತ್ವರಿತ ತನಿಖೆ ನಡೆಸುವಂತೆ ಸಿಬಿಐ ಇಲ್ಲವೇ ಎಸ್ಐಟಿ ಸೇರಿದಂತೆ ಯಾವುದಾದರೂ ತನಿಖಾ ಸಂಸ್ಥೆಗೆ ನೀಡುವಂತೆ ರಾಜ್ಯ ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.
ಈ ಸುದ್ದಿಯನ್ನೂ ಓದಿ:

ಚೈತ್ರಾ ಕುಂದಾಪುರ (Kundapur) ಅಂಡ್ ಗ್ಯಾಂಗ್ ನ ಒಂದೊಂದೇ ಕರ್ಮಕಾಂಡ ಬಯಲಿಗೆ…? ಮಾಹಿತಿ ನೀಡಿದಾತನಿಗೆ ಹಾಕಿದ್ರಾ ಬೆದರಿಕೆ? ಏನೀ ವಂಚನೆ ಲೀಲೆ… ಇನ್ನೂ ಸಿಗದ ಹಾಲಶ್ರೀ ಸ್ವಾಮಿ ?
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಮಣಿ ಸರ್ಕಾರ್, ಕಳೆದ ಮಾರ್ಚ್ 1 ಮತ್ತು 2ರಂದು ಚನ್ನಗಿರಿ ಹಾಗೂ ಬೆಂಗಳೂರಿನಲ್ಲಿ ಆಗಿನ ಬಿಜೆಪಿ ಶಾಸಕ ಮಾಡಾಳು ವಿರುಪಾಕ್ಷಪ್ಪ ನಿವಾಸ, ಕಚೇರಿಯಲ್ಲಿ ನಡೆದ ಲೋಕಾಯುಕ್ತ (Lokayukta) ದಾಳಿಗೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣ ದಾಖಲಾಗಿತ್ತು. ಅಪ್ಪ, ಮಗ ಬಂಧನಕ್ಕೆ ಒಳಗಾಗಿದ್ದರು. ಆಮೇಲೆ ಜಾಮೀನಿನ ಮೇಲೆ ಬಿಡುಗಡೆ ಆಗಿದ್ದರು. ಈ ಸಂಬಂಧ ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಲಾಗಿತ್ತು. ಆದೇಶ ನೀಡಿದ 8 ವಾರದೊಳಗೆ ತನಿಖಾ ಸಂಸ್ಥೆಗೆ ವಹಿಸುವಂತೆ ಕೋರ್ಟ್ ಸೂಚಿಸಿದೆ ಎಂದು ತಿಳಿಸಿದರು.
ರಾಜ್ಯ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಪ್ರಸನ್ನ ಬಿ.ವಾರ್ಲೆ ಹಾಗೂ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಆದೇಶ ನೀಡಿದ್ದು, ಆದೇಶವಾದ ಎಂಟು ವಾರದೊಳಗೆ ಪ್ರಕರಣವನ್ನು ಕೇಂದ್ರೀಯ ತನಿಖಾ ಸಂಸ್ಥೆಯ ಇಲ್ಲವೇ ವಿಶೇಷ ತನಿಖಾ ತಂಡಕ್ಕೆ ನೀಡಿ, ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದೆ. ಲೋಕಾಯುಕ್ತ (Lokayukta) ದಾಳಿ ನಡೆದು ಆರು ತಿಂಗಳು ಕಳೆದಿದ್ದರೂ ಸಹ ಪ್ರಕರಣದ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ ಪ್ರಕರಣದ ಆರೋಪಿಗಳು ನ್ಯಾಯಾಲಯದ ಜಾಮೀನಿನ ಮೇಲೆ ಬಿಡುಗಡೆ ಅಗಿದ್ದು, ಸಾಕ್ಷ್ಯ ನಾಶ ಮಾಡುವ ಸಾಧ್ಯತೆ ಇರುವ ಕಾರಣ ಶೀಘ್ರವಾಗಿ ತನಿಖೆ ನಡೆಸಲು ಮುಂದಿನ ಆರು ತಿಂಗಳ ಒಳಗಾಗಿ ವರ್ಗಾವಣೆ ಮಾಡಬೇಕು. ಇಲ್ಲವಾದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲಾಗುವುದು ಎಂದು ಮಣಿ ಸರ್ಕಾರ್ ಎಚ್ಚರಿಕೆ ನೀಡಿದರು.
ಭ್ರಷ್ಟಾಚಾರ ಹಾಗೂ ಅಕ್ರಮ ಆಸ್ತಿ ಮಾಡಿರುವ ಕುರಿತಂತೆ ಮಾಡಾಳ್ ವಿರೂಪಾಕ್ಷಪ್ಪ, ಮಾಡಾಳ್ ಪ್ರಶಾಂತ್ ವಿರುದ್ಧ ಜಾರಿ ನಿರ್ದೇಶನಾಯಲಕ್ಕೂ ದೂರು ಕೊಡಲಾಗಿದೆ. ಈ ಸಂಬಂಧ ಆ ಸಂಸ್ಥೆಯು ತನಿಖೆ ನಡೆಸಿದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಹೇಳಿದರು.
ಬೈಂದೂರು ವಿಧಾನಸಭೆ ಚುನಾವಣೆಗೆ ಟಿಕೆಟ್ ಕೊಡಿಸಲು ಉದ್ಯಮಿಯೊಬ್ಬರಿಗೆ ಕೋಟ್ಯಂತರ ವಂಚನೆ ಮಾಡಿರುವ ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಈ ಪ್ರಕರಣ ತನಿಖೆ ನಡೆಯುತ್ತಿದೆ.
ಮುಂದೆ ಏನಾಗಬಹುದು ಕುರಿತಂತೆ ಕಾದು ನೋಡುತ್ತೇವೆ. ಯಾವ ನಂಬಿಕೆ ಮೇಲೆ ಅವರಿಗೆ ಕೋಟ್ಯಾಂತರ ರೂಪಾಯಿ ಕೊಟ್ಟಿದ್ದರು ಎಂಬ ಕುರಿತಂತೆಯೂ ತನಿಖೆ ಆಗಬೇಕು. ಹಿಂದೂ ಕಾರ್ಯಕರ್ತೆಯಾಗಿದ್ದ ಚೈತ್ರಾ ಕುಂದಾಪುರ ಮೋಸ
ಮಾಡಿರುವುದರ ಹಿಂದೆ ಯಾವ ರಾಜಕಾರಣಿಗಳು ಇದ್ದಾರೆ ಎಂಬುದು ಗೊತ್ತಿಲ್ಲ. ಇದು ಒಂದು ಷಡ್ಯಂತ್ರದ ಭಾಗವೂ ಆಗಿರಬಹುದು. ಹಿಂದೂ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈಗ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷದವರೆಲ್ಲ ಒಂದಾಗುತ್ತಿದ್ದಾರೆ. ಯಾರನ್ನೂ ನಂಬುವಂತಿಲ್ಲ ಎಂದು ಹೇಳಿದರು.
ಶ್ರೀರಾಮಸೇನೆಯ ಬಿ. ಜಿ. ರಾಹುಲ್, ಪಿ. ಸಾಗರ್, ಅನಿಲ್ ಸುರ್ವೆ, ಗೋಪಾಲ್, ಎಂ. ಶ್ರೀಧರ್, ರಾಜು ದೊಡ್ಡಮನಿ, ಅಜಯ್, ವಿನಯ್, ರಘು, ಮಾರ್ಕಂಡೇಯ, ಪರಶುರಾಮ್, ಪಳನಿ ಮತ್ತಿತರರು ಹಾಜರಿದ್ದರು.