SUDDIKSHANA KANNADA NEWS/ DAVANAGERE/ DATE:11-02-2024
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು ಇನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸದಿದ್ದರೆ ಮುಂಬರುವ ಲೋಕಸಭೆ ಚುನಾವಣೆ ಬಹಿಷ್ಕಾರ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಲು ಖಡ್ಗ ಸಂಘಟನೆ ತೀರ್ಮಾನಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘಟನೆ ಮುಖಂಡರು, ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಿಂದ ಮೂರು ಜಿಲ್ಲೆಗಳ ರೈತರು, ಜನರಿಗೆ ಅನುಕೂಲವಾಗಲಿದೆ. ಮೂವರು ಸಂಸದರು, 9 ಶಾಸಕರು ಬರುತ್ತಾರೆ. ರಾಜಕಾರಣಿಗಳ
ಇಚ್ಚಾಶಕ್ತಿ ಕೊರತೆ ಕಾರಣ ಪೂರ್ಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ವಿಳಂಬದಿಂದ ಸಾಗುತ್ತಿದೆ. 2017ರ ಸೆಪ್ಟಂಬರ್ 11ರಂದು ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರೂ ಉತ್ಕೃಷ್ಟವಾದ, ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ. ಅಧಿಕಾರಿಗಳು
ಹೇಳುವ ಪ್ರಕಾರ ಶೇಕಡಾ 90 ರಷ್ಟು ಪೂರ್ಣಗೊಂಡಿದೆ. ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯಡಿ ಬರುವ ಗ್ರಾಮಗಳ ಜನರು ಹೇಳುವ ಪ್ರಕಾರ ಇನ್ನೂ ಶೇಕಡಾ 30ರಿಂದ 35ರಷ್ಟು ಕಾಮಗಾರಿ ಆಗಬೇಕಿದೆ. ಕೆಲ ರೈತರಿಗೆ ಪರಿಹಾರ ಸಮರ್ಪಕವಾಗಿ ಸಿಕ್ಕಿಲ್ಲ, ಮತ್ತೆ ಕೆಲ ರೈತರು ಕೋರ್ಟ್ ಗೆ ಹೋಗಿದ್ದರಿಂದ ಕಾಮಗಾರಿಗೆ ಸ್ವಲ್ಪ ಹಿನ್ನೆಡೆ ಆಗಿದೆ. ರಾಜಕಾರಣಿಗಳು ಈ ಕಾಮಗಾರಿ ಪೂರ್ಣಗೊಳಿಸುವ ಇಚ್ಚಾಶಕ್ತಿ ತೋರದ ಕಾರಣ ಮಂದಗತಿಯಲ್ಲಿ ಸಾಗುತ್ತಿದೆ. ಅಪೂರ್ಣಗೊಂಡಿದೆ ಎಂದು ಆರೋಪ ಮಾಡಿದರು.
ಕರ್ನಾಟಕ ನೀರಾವರಿ.ನಿಗಮ ನಿಯಮಿತ ಅಧಿಕಾರಿಗಳು ನೀಡಿರುವ ಪ್ರಕಾರ 2022ರ ಮಾರ್ಚ್ ತಿಂಗಳಿಗೆ ಮುಗಿಯಬೇಕಿದ್ದರೂ ಇಲ್ಲಿಯವರೆಗೆ ಸಂಪೂರ್ಣಗೊಡಿರುವುದಿಲ್ಲ. ಆರಂಭದಿಂದ ಇಲ್ಲಿಯವರಗೆ ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸಿದ್ದರೂ ಸಹ ಯೋಜನೆಯನ್ನು ಪೂರ್ಣಗೊಳಿಸಲು ವಿಫಲವಾಗಿವೆ. ಯೋಜನೆ ಆರಂಭವಾದ ವರ್ಷದಿಂದ ಪ್ರಸ್ತುತ ವರ್ಷ ಗಳವರೆಗೆ 3 ಬರಗಾಲಗಳನ್ನು ರೈತರು ಅನುಭವಿಸಿದ್ದಾರೆ. ಕಾಮಗಾರಿಯ ವಿಳಂಬದ ವಿಷಯವನ್ನು ಕ.ನೀ.ನಿ.ನಿ. ಇಲಾಖೆಯು ಸಾರ್ವಜನಿಕವಾಗಿ ತಿಳಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ. . ಪ್ರಸ್ತುತ ಹಾಗೂ ಮುಂದಿನ ದಿನಗಳ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಯೋಜನೆಯನ್ನು ಅತೀ ಶೀಘ್ರವಾಗಿ ಮುಗಿಸಿ ರೈತರ ನೀರಿನ ಬವಣೆಯನ್ನು ನೀಗಿಸಬೇಕಾಗಿ ಖಡ್ಗ ಸಂಘವು ಸಂಬಂಧಪಟ್ಟ ಇಲಾಖೆಯ ಬಳಿ ಮನವಿ ಮಾಡಿಕೊಂಡಿದ್ದು, ಇಲ್ಲವಾದಲ್ಲಿ ಖಡ್ಗ ಸಂಘವು ಜಿಲ್ಲೆಯಾದ್ಯಾಂತ ಉಗ್ರ ಹೋರಾಟ ಮಾಡಲು ನಿರ್ಧರಿಸಿದೆ ಎಂದು ತಿಳಿಸಿದರು.
ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯನ್ನು 370 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಲಾಗುತ್ತಿದೆ. ಇದರಡಿ ಸುಮಾರು 120 ಕೆರೆಗಳು ಬರುತ್ತಿದ್ದು, ಈ ಕೆರೆಗಳಿಗೆ ನೀರುಣಿಸುವ ಯೋಜನೆ ಇದಾಗಿದೆ. 2024ರಲ್ಲಿ ಬರಗಾಲ ತಲೆದೋರಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಜನರಿಗೆ ಕುಡಿಯುವ ನೀರಿಗೂ ತತ್ವಾರ ಪಡುವಂಥ ಸ್ಥಿತಿ ನಿರ್ಮಾಣವಾಗಿದೆ. ಚನ್ನಗಿರಿ ತಾಲೂಕು ಒಂದರಲ್ಲಿಯೇ ಸುಮಾರು 66 ಕೆರೆಗಳು ಬರುತ್ತವೆ. ಆದಷ್ಟು ಬೇಗ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು. ಇಲ್ಲದಿದ್ರೆ 2024ರ ಲೋಕಸಭೆ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿಯುವುದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆ ಪ್ರಮುಖರಾದ ರಘು, ಸೈಯ್ಯದ್ ನಲ್ಲೂರು, ಚಂದ್ರಹಾಸ ಲಿಂಗದಹಳ್ಳಿ, ಸುನೀಲ್ ಸೋಮಶೆಟ್ಟಿಹಳ್ಳಿ, ಕುಂಬೇಂದ್ರಸ್ವಾಮಿ ಮತ್ತಿತರರು ಹಾಜರಿದ್ದರು.