ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

“ವಿಜೃಂಭಿಸುತ್ತಿರುವ ರಾಜಕೀಯ ಪಾಳೇಗಾರಿಕೆ” ಕೊನೆಗಾಣಿಸೋಣ: ಜಿ. ಬಿ. ವಿನಯ್ ಕುಮಾರ್ ಕರೆ

On: December 29, 2024 5:45 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-12-2024

ದಾವಣಗೆರೆ: : ಇಂದು ರಾಜಕಾರಣದಲ್ಲಿ ಪಾಳೇಗಾರಿಕೆ ಸಂಸ್ಕೃತಿ ವಿಜೃಂಭಿಸುತ್ತಿದೆ. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿಯೂ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ದಾವಣಗೆರೆ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಗಂಡ, ಹೆಂಡತಿ, ಮಕ್ಕಳು, ಸೊಸೆ, ಮೊಮ್ಮಕ್ಕಳು ರಾಜಕಾರಣದಲ್ಲಿದ್ದು, ಕುಟುಂಬದ ಅಧಿಕಾರ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ. ಈ ವ್ಯವಸ್ಥೆ ತೊಡೆದು ಹಾಕಲು ಎಲ್ಲಾ ಸಮಾಜದವರು ಬೆಂಬಲ ನೀಡಬೇಕು ಎಂದು ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಹಾಗೂ ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಬಿ. ಹೆಚ್. ರಸ್ತೆಯಲ್ಲಿನ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ತಾಲೂಕು ಕುರುಬರ ಸಂಘದ ವತಿಯಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭದಲ್ಲಿ ವಿಶೇಷ ಸನ್ಮಾನಿತರಾಗಿ
ಮಾತನಾಡಿದ ಅವರು, ಗುಲಾಮಗಿರಿ ಬಿಟ್ಟು ಸ್ವಾಭಿಮಾನಿಗಳಾಗಿ, ಸ್ವಾವಲಂಬಿಗಳಾಗಿ ಹೋರಾಡಬೇಕಿದೆ ಎಂದು ಪ್ರತಿಪಾದಿಸಿದರು.

ಪ್ರತಿಷ್ಠೆಗೋಸ್ಕರ ಜನಪ್ರತಿನಿಧಿಗಳಾಗುತ್ತಿದ್ದಾರೆ. ಜನಸೇವೆಗೆಂದು ಬರುತ್ತಿಲ್ಲ. ಕುರುಬರು ಕುರಿ ಕಾಯಬೇಕು, ಮಡಿವಾಳರು ಬಟ್ಟೆ ಸ್ವಚ್ಚಗೊಳಿಸಬೇಕು ಎಂಬಂತೆ ಹಿಂದುಳಿದ ವರ್ಗದ ಜನರು ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಕಾಯಕ ಮುಂದುವರಿಸಿಕೊಂಡು ಹೋಗಬೇಕೆಂದು ರಾಜಕೀಯ ನೇತಾರರು ಅಂದುಕೊಂಡಿದ್ದಾರೆ. ನಾವು ಕೇವಲ ಒಬ್ಬಿಬ್ಬರು ಮುಖಂಡರನ್ನು ನಂಬಿಕೊಂಡು ಹೋಗಬಾರದು. ಸಮಾಜದಲ್ಲಿ ಸಾವಿರಾರು ನಾಯಕರನ್ನು ಸೃಷ್ಟಿ ಮಾಡಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಗಂಭೀರ ಚಿಂತನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಕುರುಬ ಸಮಾಜದವರು ರಾಜ್ಯದಲ್ಲಿ 65 ಲಕ್ಷದಷ್ಟಿದ್ದಾರೆ. ಆದ್ರೆ, ಶಾಸಕರಿರುವುದು ಕೇವಲ 12 ಮಂದಿ ಮಾತ್ರ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ ಎಂದರೂ ಸಮಾಜದ 30 ಶಾಸಕರು ವಿಧಾನಸೌಧಕ್ಕೆ ಆರಿಸಿ ಹೋಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಸಿಗಲು ಸಾಧ್ಯ. ಉದ್ಯಮಿಗಳು ಸೃಷ್ಟಿಯಾಗಬೇಕು. ಸಂಸ್ಥೆಗಳನ್ನು ಕಟ್ಟುವಂಥ ಜನರು ಬೇಕು. ಐಎಎಸ್, ಕೆಎಎಸ್, ಐಆರ್ ಎಸ್ ಅಧಿಕಾರಿಗಳಾದಾಗ ಕರ್ನಾಟಕ ಮಾತ್ರವಲ್ಲ, ದೇಶ ಮತ್ತು ಪ್ರಪಂಚದ ಮೂಲೆ ಮೂಲೆಗೂ ತೆಗೆದುಕೊಂಡು ಹೋಗಬಹುದು. ದಾವಣಗೆರೆಯ ಅವಿನಾಶ್ ಭಾರತ ವಿದೇಶಾಂಗ ಸೇವೆಗೆ ಆಯ್ಕೆಯಾಗಿ ಈಗ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಐಎಸ್ ಎಫ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈತ ನನ್ನ ವಿದ್ಯಾರ್ಥಿ. ಕಠಿಣ ಪರಿಶ್ರಮ, ಸತತ ಅಭ್ಯಾಸ ಮಾಡದಿದ್ದರೆ ದಾವಣಗೆರೆಯ ಹುಡುಗ ಪ್ಯಾರೀಸ್ ಗೆ ಹೋಗಲು ಆಗುತ್ತಿರಲಿಲ್ಲ. ಹಾಗಾಗಿ, ಸಮಾಜದವರೂ ಎಷ್ಟೇ ಕಷ್ಟವಾದರೂ ದೊಡ್ಡ ದೊಡ್ಡ ಕನಸು ನನಸಾಗಿಸಿಕೊಳ್ಳಲು ಪಣ ತೊಡುವಂತೆ ಕರೆ ನೀಡಿದರು.

ಗುಲಾಮಗಿರಿಯಂಥ ಕೆಟ್ಟ ವ್ಯವಸ್ಥೆಯಲ್ಲಿ ಪ್ರತಿಭೆ ಇದ್ದರೂ ಭಯದಲ್ಲಿಯೇ ಕಮರುತ್ತಿವೆ. ಭಯದಲ್ಲಿ ಬದುಕಿ ಗುಲಾಮಗಿರಿಯಾಗಿ ಬದುಕುವುದಕ್ಕಿಂತ ಸ್ವಾಭಿಮಾನ ಬೆಳೆಸಿಕೊಳ್ಳಿ. ಕುರುಬ ಸಮಾಜದ ಒಂದಿಬ್ಬರು ನಾಯಕರು ಮಾತ್ರ ನಮಗೆ ಗೊತ್ತು. ನಮ್ಮ ಮುಂದಿನ ನಾಯಕರು ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಕೇವಲ ಒಂದಿಬ್ಬರು ನಾಯಕರಿಂದ ಸಮಾಜವು ಉನ್ನತಿಯಾಗಲ್ಲ. ಸಾವಿರಾರು ನಾಯಕರು ಸೃಷ್ಟಿಯಾಗಬೇಕು. ಆಗ ಮಾತ್ರ ಸಾಮಾಜಿಕ ನ್ಯಾಯ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರನಾಗಿ ಕಣಕ್ಕಿಳಿದು ಹೋರಾಡಿದೆ. ಸಿಎಂ ಸಿದ್ದರಾಮಯ್ಯರೇ ನನ್ನ ವಿರುದ್ಧ ಬಂದು ಪ್ರಚಾರ ನಡೆಸಿದರು. ಎಂಎಲ್ಎ, ಎಂಎಲ್ ಸಿ ಅವಕಾಶ ಪಡೆದು ಸುಮ್ಮನಾಗಬಹುದಿತ್ತು. ಆದ್ರೆ, ನಾನು ಆ ರೀತಿ ಮಾಡಲಿಲ್ಲ. ಜನರಿಗೆ ಕೊಟ್ಟಿದ್ದ ಮಾತಿನಂತೆ, ಕೊಟ್ಟ ಭರವಸೆಯಂತೆ ಕಣಕ್ಕಿಳಿದೆ. ಬಹುಶಃ ದಾವಣಗೆರೆಯಲ್ಲಿ ನಿಂತು ಹೋರಾಟ ಮಾಡಲಿಲ್ಲವೆಂದರೆ ಇಂದು ಮಾತನಾಡುವ ಅವಕಾಶ ಸಿಗುತ್ತಿರಲಿಲ್ಲ ಎಂದೆನಿಸುತ್ತದೆ ಎಂದು ತಿಳಿಸಿದರು.

ಇನ್ ಸೈಟ್ಸ್ ಸಂಸ್ಥೆಯು ಯಾವುದೋ ಒಂದು ಜಾತಿಗೆ ಸೀಮಿತವಲ್ಲ. ಇದು ಜಾತ್ಯಾತೀತವಾಗಿ ನಡೆಯುತ್ತಿದೆ. ಎಲ್ಲಾ ಸಮುದಾಯದ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಐಎಎಸ್ ಸಂಸ್ಥೆಯು ಐಎಎಸ್ ಅಧಿಕಾರಿಗಳನ್ನು ನೀಡುತ್ತದೆ. ಇದುವರೆಗೆ 1500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧಿಕಾರಿಗಳಾಗಿದ್ದಾರೆ. ದೇಶದ 60 ಕಡೆಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳಿದ್ದಾರೆ. ಕರ್ನಾಟಕದಲ್ಲಿ ನಾಲ್ವರು ಜಿಲ್ಲಾಧಿಕಾರಿಗಳಾಗಿದ್ದಾರೆ. ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಜಿಲ್ಲಾಡಳಿತ ನಿರ್ವಹಣೆ ಮಾಡುವವರನ್ನು ನೀಡುವ ಸಂಸ್ಥೆ ನಮ್ಮದು. ಹಾಗಾಗಿ,ಐಎಎಸ್ ಕೋಚಿಂಗ್ ಸೆಂಟರ್ ಯಶಸ್ವಿಯಾಗಿ ನಡೆಸಲು ಬುದ್ದಿ ಶಕ್ತಿ ಬೇಕು. ನಾಯಕತ್ವ ಗುಣವೂ ಕೂಡ ಇರಬೇಕು ಎಂದು ಹೇಳಿದರು.

ಜನರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಉದ್ಯಮಶೀಲತೆ ಬೆಳೆಸಿಕೊಂಡಾಗ ಮಾತ್ರ ಪ್ರಜಾಪ್ರಭುತ್ವ ರಾಷ್ಟ್ರ ಯಶಸ್ವಿಯಾಗುತ್ತದೆ ಎಂಬುದು ಖ್ಯಾತ ರಾಜಕೀಯ ಶಾಸ್ತ್ರಜ್ಞರ ಮಾತು. ಇಲ್ಲಿ ಸ್ವಾತಂತ್ರ್ಯ ಇದೆ. ಆದ್ರೆ, ಅಸಮಾನತೆ ದೂರ ಆಗಿಲ್ಲ. ಶಾಲೆ, ಸಂಸ್ಥೆ, ಕಾಲೇಜು, ಉದ್ಯಮ, ಕೈಗಾರಿಕೆ ಪ್ರಾರಂಭಿಸಲು ಅವಕಾಶ ಸಿಗಬೇಕು. ಸಂಪನ್ಮೂಲ, ಸಮಾನತೆ ಬೇಕು ಸಿಗುವಂತಾಗಬೇಕು. ಆಗ ಮಾತ್ರ ಪ್ರತಿಭಾ ಪುರಸ್ಕಾರಕ್ಕೆ ಒಂದು ಅರ್ಥ ಬರುತ್ತದೆ. ನಮ್ಮೊಳಗಿನ ಸಾಮರ್ಥ್ಯ, ಪ್ರತಿಭೆಗೆ ಬೇಕಾಗಿರುವುದು ಪೂರಕ ವಾತಾವರಣ ಮತ್ತು ಅವಕಾಶ ಎಂದು ಹೇಳಿದರು.

ಸ್ವಾಭಿಮಾನದಿಂದ ಸ್ವಂತ ಕಾಲ ಮೇಲೆ ನಿಂತು ಧೈರ್ಯದಿಂದ ಇರೋ ವ್ಯವಸ್ಥೆಯಲ್ಲಿ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಕನಸು ಈಡೇರಿಸಿಕೊಳ್ಳುವುದೇ ನಿಜವಾದ ಶಿಕ್ಷಣ. ಈ ರೀತಿಯ ಶಿಕ್ಷಣ ದೇಶದಲ್ಲಿ ಸಿಗುತ್ತಿಲ್ಲ. ಜಾತಿ ವ್ಯವಸ್ಥೆ ಮತ್ತು ಅಸಮಾನತೆಯಿಂದ ಹೊರಬರಬೇಕಿದೆ. ಇದಕ್ಕೆ ಪ್ರಯತ್ನದ ಜೊತೆಗೆ ಅದೃಷ್ಟವೂ ಬೇಕಾಗುತ್ತದೆ. ಈಗಿನ ಶಿಕ್ಷಣ ವ್ಯವಸ್ಥೆಯು ಕೇವಲ ಎಂಜಿನಿಯರ್, ಮೆಡಿಕಲ್ ಅಥವಾ ಯಾವುದೋ ಕೆಲಸ ಸಿಕ್ಕರೆ ಸಾಕು ಎಂಬ ನಿಟ್ಟಿನಲ್ಲಿ ಪೋಷಕರು ತನ್ನ ಮಕ್ಕಳನ್ನು ಓದಿಸುತ್ತಾರೆ ಎಂದು ಹೇಳಿದರು.

ಇದೇ ವೇಳೆ ಎಸ್ ಎಸ್ ಎಲ್ ಸಿ, ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇನ್ ಸೈಟ್ಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಜಿ. ಬಿ. ವಿನಯ್ ಕುಮಾರ್ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.

ಹೊಸದುರ್ಗದ ಶ್ರೀ ಕಾಗಿನೆಲೆ ಕನಕಗುರು ಪೀಠ ಮಹಾಸಂಸ್ಥಾನದ ಪೀಠಾಧಿಪತಿ ಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭದ್ರಾವತಿಯ ತಾಲೂಕು ಕುರುಬರ ಸಂಘದ ಅಧ್ಯಕ್ಷ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಮಹೇಶ್ ಕುಮಾರ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಕಾಂತರಾಜ್, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ. ಕರಿಯಪ್ಪ, ಶ್ರೀ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಡಿ. ಪ್ರಭಾಕರ್ ಬೀರಯ್ಯ, ಉಪಾಧ್ಯಕ್ಷ ಹೆಚ್. ಆರ್. ನರೇಂದ್ರ, ಎಂ. ಹೆಚ್ಯ ಉಮೇಶ್, ಸಂಗೊಳ್ಳಿ ರಾಯಣ್ಣ ಯುವಪಡೆ ಅಧ್ಯಕ್ಷ ಜಿ. ಎಸ್. ಹನುಮಂತಪ್ಪ, ಶ್ರೀ ಕನಕ ಯುವಪಡೆ ಅಧ್ಯಕ್ಷ ಎಂ. ಹೆಚ್. ಉಮೇಶ್ ಮತ್ತಿತರರು ಹಾಜರಿದ್ದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment