SUDDIKSHANA KANNADA NEWS/DAVANAGERE/DATE:29_10_2025
ದಾವಣಗೆರೆ: ನಗರದ ಹಳೇ ಕುಂದುವಾಡ ಮುಖ್ಯ ರಸ್ತೆಯನ್ನ ಅರ್ಧ ಬರ್ಧ ನಿರ್ಮಿಸಿ ಬಿಟ್ಟಿದ್ದು, ರಸ್ತೆ ಪೂರ್ಣಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡದಿದ್ದರೆ ಕುಂದುವಾಡ ಕೆರೆ ನೀರು ಸರಬರಾಜು ಕೇಂದ್ರವನ್ನ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಕುಂದುವಾಡ ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ಈ ಸುದ್ದಿಯನ್ನೂ ಓದಿ: ಎಪಿಎಂಸಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳಕ್ಕೆ ರೂ. 2000ಕ್ಕಿಂತ ಕಡಿಮೆ ದರ ನಮೂದು ಮಾಡದಂತೆ ಕಟ್ಟಪ್ಪಣೆ!
ನಗರದ ಮಹಾನಗರ ಪಾಲಿಕೆ ಕಚೇರಿಯಲ್ಲಿ ಆಯುಕ್ತರಾದ ರೇಣುಕಾ ಅವರಿಗೆ ಮನವಿ ಸಲ್ಲಿಸಿದ ಗ್ರಾಮಸ್ಥರು, ಸಮೀಪದ ಕುಂದುವಾಡ ರಸ್ತೆ ನಿರ್ಮಾಣ ವಿಚಾರ ಮೂರಾಬಟ್ಟೆಯಾಗಿ ಹೋಗಿದೆ, ಈ ಮಾತು ಹೇಳಲು ವಾರ್ಡ್ ಸಾರ್ವಜನಿಕರಿಗೆ ನೋವ್ವಾಗುತ್ತಿದೆ, ಯಾಕೆಂದರೆ ವಿನೋಬನಗರದಿಂದ ಕುಂದುವಾಡಕ್ಕೆ ತಲುಪುವ ಏಕೈಕ ಮುಖ್ಯ ರಸ್ತೆಯನ್ನ ಐದಾರು ಭಾಗಗಳಾಗಿ ವಿಂಗಡಿಸಿ ಎಲ್ಲಾ ಕಾಮಗಾರಿಗಳನ್ನ ಅರ್ಧ ಬರ್ಧ ಮಾಡಿ ಬಿಡಲಾಗಿದೆ, ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗಿದೆ. ಕುಂದುವಾಡ ಗ್ರಾಮವನ್ನ ಯಾಕಾದರು ಮಹಾನಗರ ಪಾಲಿಕೆಗೆ ಸೇರ್ಪಡೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಮರುಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯುವಕರು, ಗ್ರಾಮಸ್ಥರೆಲ್ಲರ ನಿರಂತರ ಹೋರಾಟದ ಮೇರೆಗೆ ನಿಂತೂ ಹೋಗಿದ್ದ ಬಿಂದಾಸ್ ಬಾರ್ ಮುಂಭಾಗದ ರಸ್ತೆ ನಿರ್ಮಾಣ ಮಾಡಲಾಯಿತು, ಆದರೆ ಅಲ್ಲಿಯೂ ಸಹ ರಸ್ತೆ ಮಧ್ಯೆ ಭಾಗ 40 ರಿಂದ 50 ಅಡಿಯಷ್ಟು ರಸ್ತೆ ನಿರ್ಮಾಣ ಮಾಡದೇ ಗುಂಡಿ ಅಗೆದು ಆಗೇ ಬಿಡಲಾಗಿದೆ, ಇನ್ನೊಂದು ಭಾಗ ಹಳೇ ಕುಂದುವಾಡ ಕೆರೆ ರಸ್ತೆ ಗುಂಡಿ ಮುಚ್ಚುತ್ತೇವೆ ಎಂದು ಹೇಳಿ ಕೆಲ ಗುಂಡಿಗಳನ್ನ ಮುಚ್ಚಿ ಉಳಿದ ಬಹುತೇಕ ಗುಂಡಿಗಳನ್ನ ಮುಚ್ಚದೇ ಎರಡೂ ಕಾಮಗಾರಿಯನ್ನ ಅಪೂರ್ಣ ಮಾಡಲಾಗಿದೆ, ಈಗಾಗಲೇ ಐದಾರು ಭಾರೀ ಮನವಿ ಮಾಡಿದ್ದರು, ಪೂರ್ಣಗೊಳಿಸುತ್ತೇವೆ, ಮಾಡುತ್ತೇವೆ, ನೋಡುತ್ತೇವೆ ಎಂದು ಹಾರಿಕೆ ಉತ್ತರವನ್ನ ಪಾಲಿಕೆ ನೀಡುತ್ತಲೇ ಬಂದಿದೆ, ಅವ್ಯವಸ್ಥೆಯಿಂದ ಕೂಡಿದ ರಸ್ತೆಯಿಂದ ತುಂಬಾ ತೊಂದರೆ ಆಗುತ್ತಿದ್ದು, ಪ್ರಯಾಣಿಕರು ಬಿದ್ದು ಗಾಯಗೊಂಡಿದ್ದಾರೆ. ಈ ಹಿನ್ನಲೆ ಮುಂದಿನ ದಿನಗಳಲ್ಲಿ ಅಪೂರ್ಣವಾಗಿರುವ ರಸ್ತೆಯನ್ನ ಗ್ರಾಮಸ್ಥರೇ ನಿರ್ಮಾಣ ಮಾಡಿ ಪಾಲಿಕೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.
ಪ್ರಮುಖವಾಗಿ ಬಿಂದಾಸ್ ಬಾರ್ ಮುಂಭಾಗದ ರಸ್ತೆ ಪೂರ್ಣಗೊಳಿಸಬೇಕು, ಕೆರೆ ರಸ್ತೆ ಗುಂಡಿಗಳನ್ನ ತಾತ್ಕಾಲಿಕವಾಗಿ ಮುಚ್ಚಬೇಕು ಮತ್ತು ಟೆಂಡರ್ ಹಂತದಲ್ಲಿರುವ ಕೆರೆ ರಸ್ತೆಯನ್ನ ವ್ಯವಸ್ಥಿತವಾಗಿ ನಿರ್ಮಾಣ ಮಾಡಲು ಮುಂದಾಗಬೇಕು, ಕುಂದುವಾಡ ಕತ್ತಲೆಯಲ್ಲಿದ್ದು, ಬೀದಿ ದೀಪಗಳನ್ನ ಸರಿಪಡಿಸಬೇಕು ಇಲ್ಲದಿದ್ದಲ್ಲಿ ಕುಂದುವಾಡ ಕೆರೆ ನೀರು ಸರಬರಾಜು ಕೇಂದ್ರ ಬಂದ್ ಮಾಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಸೂಚನೆ ಕೊಟ್ಟರು ಎಂಬ ಕಾರಣಕ್ಕೆ ನಾಮಕಾವಸ್ತೆಗೆ ಮೂರ್ನಾಲ್ಕು ಗುಂಡಿಗಳನ್ನಷ್ಟೇ ಮುಚ್ಚಿದ್ದಾರೆ. ಕೂಡಲೇ ರಸ್ತೆ ದುರಸ್ತಿಪಡಿಸದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ನವೀನ್, ಮಾರುತೇಶ್, ಹೊಸ ಕುಂದುವಾಡ ಅಣ್ಣಪ್ಪ, ಮಧುನಾಗರಾಜ್, ನಬಿ, ಮಂಜಪ್ಪ, ಗುಡ್ಡಪ್ಪ ಸೇರಿದಂತೆ ಮತ್ತಿತರರಿದ್ದರು.








