Home ದಾವಣಗೆರೆ ಆರೋಗ್ಯವಂತ ಜನತೆ ಬಲಿಷ್ಠ- ಕರ್ನಾಟಕ, ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಆರೋಗ್ಯ ನಡಿಗೆ, ಹೃದಯ ಸ್ತಂಭನದ ವೇಳೆ ಪ್ರಥಮ ಚಿಕಿತ್ಸೆಯ ಅಣಕು ಪ್ರದರ್ಶನ
ದಾವಣಗೆರೆಬೆಂಗಳೂರು

ಆರೋಗ್ಯವಂತ ಜನತೆ ಬಲಿಷ್ಠ- ಕರ್ನಾಟಕ, ವಿಶ್ವ ಹೃದಯ ದಿನಾಚರಣೆ ಪ್ರಯುಕ್ತ ಆರೋಗ್ಯ ನಡಿಗೆ, ಹೃದಯ ಸ್ತಂಭನದ ವೇಳೆ ಪ್ರಥಮ ಚಿಕಿತ್ಸೆಯ ಅಣಕು ಪ್ರದರ್ಶನ

Share
ಆರೋಗ್ಯ
Share

ದಾವಣಗೆರೆ: ಹಣ, ಆಸ್ತಿ, ಅಂತಸ್ತು ಗಳಿಸುವುದಕ್ಕಿಂತ ಆರೋಗ್ಯ ಎಂಬ ಸಂಪತ್ತನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬರ ಮೊದಲ ಆದ್ಯತೆಯಾಗಬೇಕು. ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನಶೈಲಿಯಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಜೀವನ ಕ್ರಮವನ್ನು ರೂಢಿಸಿಕೊಳ್ಳಬೇಕು ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಬಸವಂತಪ್ಪ ಕರೆ ನೀಡಿದರು.

ನಗರದ ಜಯದೇವ ವೃತ್ತದಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಸಿಟಿ ಸೆಂಟ್ರಲ್ ಹಾಸ್ಪಿಟಲ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ಜೀವನಶೈಲಿಯಲ್ಲಿ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದ್ದು, ವ್ಯಾಯಾಮ ಮಾಡದೇ ಇರುವುದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಹೀಗಾಗಿ ಆರೋಗ್ಯದ ಬಗ್ಗೆ ಪ್ರತಿಯೊಬ್ಬರೂ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಸಿಟಿ ಸೆಂಟ್ರಲ್ ಆಸ್ಪತ್ರೆ ವತಿಯಿಂದ ಆರೋಗ್ಯ ಜಾಗೃತಿ ಅಭಿಯಾನ ಆಯೋಜಿಸಿರುವುದು ಸಮಯೋಚಿತವಾಗಿದೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ತುರ್ತು ಸಂದರ್ಭದಲ್ಲಿ ಪ್ರಥಮ ಚಿಕಿತ್ಸೆ ಜೀವ ಉಳಿಸಬಹುದು:

ಹೃದಯಾಘಾತ ಹಾಗೂ ಹೃದಯ ಸ್ತಂಭನದಂತಹ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ಮತ್ತು ಸಮಯೋಚಿತ ನೆರವು ಜೀವ ಉಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಯಾವ ರೀತಿಯಲ್ಲಿ ತಕ್ಷಣ ಸ್ಪಂದಿಸಬೇಕು ಎಂಬ ಅರಿವು ಸಾರ್ವಜನಿಕರಿಗೆ ಇರಬೇಕು ಎಂದು ಸಚಿವರು ಹೇಳಿದರು.

ಇದೇ ಸಂದರ್ಭದಲ್ಲಿ ಹೃದಯ ಸ್ತಂಭನ ಸಂಭವಿಸಿದಾಗ ರೋಗಿಯ ಜೀವ ಉಳಿಸಲು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಕುರಿತು ಅಣಕು ಪ್ರದರ್ಶನ ನಡೆಸಲಾಯಿತು. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಅರಿವು ಮೂಡಿಸಲಾಯಿತು.

ಆರೋಗ್ಯ ನಡಿಗೆಯಲ್ಲಿ ಸಚಿವರ ಹೆಜ್ಜೆ:

ಸಿಟಿ ಸೆಂಟ್ರಲ್ ಆಸ್ಪತ್ರೆಯ ಆವರಣದಿಂದ ಆರಂಭವಾದ ಆರೋಗ್ಯ ಜಾಗೃತಿ ಅಭಿಯಾನಕ್ಕೆ ಸಚಿವ ಕೆ.ಎಸ್. ಬಸವಂತಪ್ಪ, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಚ್.ಟಿ. ಶೇಖರ್ ಹಾಗೂ ಆಸ್ಪತ್ರೆಯ ಮುಖ್ಯಸ್ಥ ಡಾ. ಸುಬ್ಬಾರಾವ್ ಚಾಲನೆ ನೀಡಿದರು.

ಆಸ್ಪತ್ರೆಯಿಂದ ಆರಂಭವಾದ ಜಾಥಾ ಅಂಬೇಡ್ಕರ್ ವೃತ್ತ, ಜಯದೇವ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ವಿದ್ಯಾರ್ಥಿಗಳು, ಸಾರ್ವಜನಿಕರು, ವೈದ್ಯಕೀಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಆರೋಗ್ಯ ನಡಿಗೆಯಲ್ಲಿ ಭಾಗವಹಿಸಿ ಹೃದಯದ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.

ವಿಶೇಷವೆಂದರೆ, ಸಚಿವ ಕೆ.ಎಸ್. ಬಸವಂತಪ್ಪ ಅವರೇ ಆರೋಗ್ಯ ನಡಿಗೆಯಲ್ಲಿ ಹೆಜ್ಜೆ ಹಾಕುವ ಮೂಲಕ ನಿಯಮಿತ ದೈಹಿಕ ಚಟುವಟಿಕೆ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ಮಹತ್ವದ ಸಂದೇಶವನ್ನು ಸಾರ್ವಜನಿಕರಿಗೆ ನೀಡಿದರು.

ಜನರ ಆರೋಗ್ಯವೇ ಮೊದಲ ಆದ್ಯತೆಯಾಗಿದ್ದು, ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ತಲುಪುವಂತೆ ಮಾಡುವುದು ಹಾಗೂ ಆರೋಗ್ಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಜನಪರ ಆಡಳಿತದ ಪ್ರಮುಖ ಹೊಣೆಗಾರಿಕೆಯಾಗಿದೆ. ಆರೋಗ್ಯಕರ ನಾಗರಿಕರು, ಆರೋಗ್ಯಕರ ಸಮಾಜ ಹಾಗೂ ಆರೋಗ್ಯವಂತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಸಚಿವರು ಕರೆ ನೀಡಿದರು.

ಅಣಕು ಪ್ರದರ್ಶನದ ಮೂಲಕ ಅರಿವು:

ಜಾಥಾದ ವೇಳೆ ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗೆ ತಕ್ಷಣ ಹೇಗೆ ಸ್ಪಂದಿಸಬೇಕು, ಪ್ರಥಮ ಚಿಕಿತ್ಸೆ ಹೇಗೆ ನೀಡಬೇಕು ಎಂಬುದನ್ನು ತಜ್ಞರು ಅಣಕು ಪ್ರದರ್ಶನದ ಮೂಲಕ ವಿವರಿಸಿದರು. ತುರ್ತು ಸಂದರ್ಭದಲ್ಲಿ ವಿಳಂಬ ಮಾಡದೆ ವೈದ್ಯಕೀಯ ನೆರವು ಪಡೆಯುವ ಅಗತ್ಯದ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು.

ಆರೋಗ್ಯ ಜಾಗೃತಿ ಅಭಿಯಾನವು ನಗರದ ಪ್ರಮುಖ ರಾಜಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ವಿವಿಧ ಕಾಲೇಜು ಗಳ ವೈದ್ಯಕೀಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಆರೈಕೆ ಮಲ್ಲಿಸೂಪರ್ ಸ್ಪೆಷಾಲಿಟಿ  ಆಸ್ಪತ್ರೆಯ ಮುಖ್ಯಸ್ಥರಾದ ರವಿಕುಮಾರ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೆಚ್. ಟಿ. ಶೇಖರ್, ಸಿಟಿ ಸೆಂಟ್ರಲ್ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ವೆಂಕಟೇಶ್, ಮಧು ಮತ್ತಿತರರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles